ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೊಂಗಲ್ ಆಚರಣೆ

| Published : Jan 15 2025, 12:46 AM IST

ಸಾರಾಂಶ

ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೊಂಗಲ್‌ ಹಬ್ಬವನ್ನು ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಪೊಂಗಲ್ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ಪೊಂಗಲ್( ಮಕರಸಂಕ್ರಾಂತಿ) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಮಂಗಳವಾರ ನೆರವೇರಿತು.

ಬೆಳಗ್ಗೆ ಮಧುರಮ್ಮ ಬಡಾವಣೆಯಲ್ಲಿರುವ ವೃಕ್ಷ ಉದ್ಭವ ಗಣಪತಿ ದೇವಾಲಯದಲ್ಲಿ ಮಹಿಳೆಯರು ಪೂರ್ಣಕುಂಭ ಕಳಸಕ್ಕೆ ವಿಶೇಷ ಪೂಜೆ ನೆರವೇರಿಸಿದರು. ದೇವಾಲಯದ ಟ್ರಸ್ಟಿ ಸಮಿತಿ ಕಾರ್ಯದರ್ಶಿ ಎ. ಲೋಕೇಶ್ ಕುಮಾರ್ ಪೂರ್ಣಕುಂಭ ಕಳಸವನ್ನು ಹೊತ್ತು ಕೊಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ನಾದಸ್ವರದೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾಮ ಮಂದಿರ, ಅಯ್ಯಪ್ಪ ದೇವಾಲಯಗಳಿಗೆ ತೆರಳಿ ಪೂಜೆಯನ್ನು ಸಲ್ಲಿಸಿ ನಂತರ ಶ್ರೀ ಚಾಮುಂಡೇಶ್ವರಿ ಮುತ್ತಪ್ಪ ದೇವಾಲಯದಲ್ಲಿ ಕಳಸಗಳನಿಟ್ಟು ಪೂಜೆ ನಡೆಸಿ, ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಭಕ್ತರು ಪೊಂಗಲ್‌ಮಾಡಿ ಹಬ್ಬವನ್ನು ಸಂತೋಷ, ಸಂಭ್ರಮದಿಂದ ಆಚರಿಸಿದರು.

ಮಧ್ಯಾಹ್ನ ನೆರೆದಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಸಮಿತಿಯ ಅಯ್ಯಪ್ಪ ನೇತೃತ್ವದಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಸದಸ್ಯರಾದ ಸುರೇಶ ಎಸ್., ಸುಂದರೇಶ ಎಸ್., ರಾಜಾ ಎಂ, ಗಣೇಶ ಎಂ, ರಾಜ, ಜಗದೀಶ, ವೆಂಕಟೇಶ, ಗಣೇಶ, ಸುಭ್ರಮಣಿ, ಮುರುಗೇಶ, ಗುಣಶೇಖರ, ಏಳುಮಲೈ ಹಾಗೂ ಶರವಣ ಇತರರು ಹಾಜರಿದ್ದರು.