ಶ್ರೀಮಂಗಲ: ಪೊನ್ನಂಪೇಟೆ ಕೊಡವ ಸಮಾಜ, ಕೊಡವ ಸಮಾಜದ ಪೊಮ್ಮಕ್ಕಡ ಕೂಟ, ಕೊಡಗು ಹೆಲ್ತ್ ಫೌಂಡೇಶನ್ ಮತ್ತು ಗೋಣಿಕೊಪ್ಪ ಲೋಪಮುದ್ರಾ ಮೆಡಿಕಲ್ ಸೆಂಟರ್ ಇವರ ಆಶ್ರಯದಲ್ಲಿ 25ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಈ ಸಂಸ್ಥೆಗಳ ಪ್ರಮುಖರು ತಿಳಿಸಿದ್ದಾರೆ. ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸುತ್ತಿರುವ ಈ ವೈದ್ಯಕೀಯ ಶಿಬಿರದಲ್ಲಿ ಎಲ್ಲ ಸಾರ್ವಜನಿಕರು ಆಗಮಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಮಾತನಾಡಿ, ಆರೋಗ್ಯವಂತ ದೇಶ ಹಾಗೂ ಸ್ವಾಸ್ಥ ಸಮಾಜಕ್ಕಾಗಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಆಸ್ಪತ್ರೆಗೆ ತೆರಳಲು ಸಾಧ್ಯವಾಗುವುದಿಲ್ಲ ಹಾಗೂ ಮನೆಯಲ್ಲಿರುವ ಕೆಲವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಇವರಿಗೆಲ್ಲರಿಗೂ ಸಹಾಯ ಮಾಡುವ ನಿಟ್ಟಿನಲ್ಲಿ ಈ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಶಿಬಿರ 25ರಂದು ಬೆಳಗ್ಗೆ ಬೆಳಗ್ಗೆ 9.30ರಿಂದ ಆರಂಭವಾಗಲಿದೆ. ಶಿಬಿರದಲ್ಲಿ ತಜ್ಞ ವೈದ್ಯರು ವೈದ್ಯಕೀಯ ತಪಾಸಣೆ ಮಾಡಿ, ಚಿಕಿತ್ಸೆ ಮತ್ತು ಸಲಹೆ ನೀಡಲಿದ್ದಾರೆ. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಬಿಪಿ ಸ್ಕ್ರೀನಿಂಗ್, ರ್‍ಯಾಂಡಮ್ ಬ್ಲಡ್ ಶುಗರ್ ಆರ್ ಬಿ ಎಸ್ ಸಿ ಸ್ಕ್ರೀನಿಂಗ್, ಕಣ್ಣಿನ ತಪಾಸಣೆ, ಆಹಾರ ಕ್ರಮ ಮತ್ತು ಪೌಷ್ಠಿಕ ಆಹಾರ ಮಾಹಿತಿ,ಜೀವನ ಶೈಲಿ ಯ ಬಗ್ಗೆ ಜಾಗೃತಿ, ಸಿಪಿಆರ್ ಜಾಗೃತಿ, ವಿಶೇಷ ಸ್ಕ್ರೀನಿಂಗ್ ಹಾಗೂ ಮಾರ್ಗದರ್ಶನ ದೊರೆಯಲಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ಕೇಳಿಕೊಂಡರು.ಪೊನ್ನಂಪೇಟೆ ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪoಡ ಇಮ್ಮಿ ಉತ್ತಪ್ಪ ಅವರು ಮಾತನಾಡಿ ಜಾತಿ- ಧರ್ಮದ ಭೇದಭಾವ ಇಲ್ಲದೆ ಕೊಡಗಿನ ಎಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಾಗೂ ತಪಾಸಣೆ ಮಾಡಿದ ನಂತರ ಅಗತ್ಯವಾದ ಎಲ್ಲ ವೈದ್ಯಕೀಯ ಮಾರ್ಗದರ್ಶನವನ್ನು ವೈದ್ಯರು ಸೂಚಿಸಲಿದ್ದಾರೆ. ಇದರ ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು.

ಸಭೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಆಲೇಮಾಡ ಡಿ. ಸುಧೀರ್, ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ನಿರ್ದೇಶಕರಾದ ಕಳ್ಳಿಚಂಡ ಚಿಪ್ಪ ದೇವಯ್ಯ, ಮೂಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಜಿ. ಗಂಗಮ್ಮ, ಪಾರುವಂಗಡ ದಿಲನ್ ಚಂಗಪ್ಪ ಮತ್ತು ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಜಂಟಿ ಕಾರ್ಯದರ್ಶಿ ಮೂಕಳೇರ ಆಶಾ ಪೂಣಚ್ಚ, ಖಜಾಂಚಿ ಮೂಕಳೇರ ಪಟ್ಟು ಲೀಲಾವತಿ ಹಾಜರಿದ್ದರು.