ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ತಂಡಗಳಿಗೆ ಕೊಡವ ಮದುವೆಯಲ್ಲಿ ಯಶಸ್ವಿ ದಾಂಪತ್ಯಕ್ಕಾಗಿ ಮತ್ತು ಉಭಯ ಕಡೆಯ ಉತ್ತಮ ಸಂಬಂಧಕ್ಕಾಗಿ ವಧು ವರರ ನಡುವಿನ ಜಾನಪದ ಒಪ್ಪಂದ ‘ಸಮ್ಮಂಧ ಆಡಕುವ’ ಪೈಪೋಟಿಯನ್ನು ನಡೆಸಲು ಕಾಳಿಮಾಡ ಕುಟುಂಬ ನಿರ್ಧರಿಸಿದ್ದು, ಅ.11ರಂದು ಈ ಪೈಪೋಟಿಯನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ.
ಶ್ರೀಮಂಗಲ: ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ತಂಡಗಳಿಗೆ ಕೊಡವ ಮದುವೆಯಲ್ಲಿ ಯಶಸ್ವಿ ದಾಂಪತ್ಯಕ್ಕಾಗಿ ಮತ್ತು ಉಭಯ ಕಡೆಯ ಉತ್ತಮ ಸಂಬಂಧಕ್ಕಾಗಿ ವಧು ವರರ ನಡುವಿನ ಜಾನಪದ ಒಪ್ಪಂದ ‘ಸಮ್ಮಂಧ ಆಡಕುವ’ ಪೈಪೋಟಿಯನ್ನು ನಡೆಸಲು ಕಾಳಿಮಾಡ ಕುಟುಂಬ ನಿರ್ಧರಿಸಿದ್ದು, ಅ.11ರಂದು ಈ ಪೈಪೋಟಿಯನ್ನು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ.ಈ ಬಗ್ಗೆ ಪೊನ್ನಂಪೇಟೆಯಲ್ಲಿ ಕುಟುಂಬಸ್ಥರ ಸಭೆಯಲ್ಲಿ ಕೈಗೊಂಡ ನಿರ್ಣಯದ ನಂತರ ಕುಟುಂಬದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಗೌರವ ಕಾರ್ಯದರ್ಶಿ ಕಾಳಿಮಾಡ ರಶೀಕ್ ಕಾವೇರಪ್ಪ ಮತ್ತು ಪೈಪೋಟಿಯ ಸಂಚಾಲಕ ಕಾಳಿಮಾಡ ಪದ್ಮ ಬೆಳ್ಯಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ಈ ಸಂದರ್ಭ ಮಾತನಾಡಿದ ಕಾಳಿಮಾಡ ಮೋಟಯ್ಯ ಅವರು, ಕೊಡವ ಮದುವೆ ಪದ್ಧತಿಯಲ್ಲಿ ಸಮ್ಮಂಧ ಆಡಕುವ ಪದ್ಧತಿ ತುಂಬಾ ವಿಶೇಷವಾದುದು. ವಧು ಮದುವೆಯಾಗಿ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಆ ಹುಡುಗಿಗೆ ಗಂಡನ ಕಡೆಯ ಮನೆ, ಎಲ್ಲ ಆಸ್ತಿ ಪಾಸ್ತಿ, ತೋಟ ಗದ್ದೆ, ಕೊಟ್ಟಿಗೆ, ಅಂಗಳ, ಕಾರ್ಮಿಕರು ಇತ್ಯಾದಿಗಳ ಹಕ್ಕುದಾರಿಕೆಯನ್ನು ಕೊಟ್ಟು ಜವಾಬ್ದಾರಿಕೆಯನ್ನು ನೀಡಲು ಬಾಯಿ ಮಾತಿನಲ್ಲಿ ವಧುವಿನ ಹಾಗೂ ವರನ ಕಡೆ ‘ಅರುವರು’ (ಕುಟುಂಬದ ಕಷ್ಟ ಸುಖದಲ್ಲಿ ಪದ್ಧತಿ ನಡೆಸುವವರು) ಮಾತುಕತೆ ನಡೆಸಿ ಜಾನಪದ ಒಪ್ಪಂದಕ್ಕೆ ಬರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಚಿನ್ನದ ರೂಪದಲ್ಲಿ ಕಲ್ಲಿನ ಅರಳುಗಳನ್ನು ಕೊಡುತ್ತಾರೆ. ಇದು ವಿವಾಹ ಮುಹೂರ್ತದ ನಂತರ ನಡೆಯುತ್ತದೆ. ಆದರೆ ಇತ್ತೀಚೆಗೆ ಮದುವೆ ಮಂಟಪದಲ್ಲಿ ಮದುವೆಯಾದಾಗ ‘ಸಮ್ಮಂಧ ಆಡುಕುವ’ ಪದ್ಧತಿ ಮಾಡುವವರ ಸಂಖ್ಯೆ ಕಡಿಮಯಾಗುತ್ತಿದ್ದು, ಪದ್ಧತಿ ಕ್ಷೀಣಿಸುತ್ತಿದೆ. ಒಂದು ಪವಿತ್ರ ವಿಶೇಷ ಪದ್ಧತಿ ಬಿಟ್ಟು ಹೋಗಬಾರದು, ಮೂಲ ಸಂಸ್ಕೃತಿಗೆ ತೊಡಕಾಗಬಾರದು. ಅದನ್ನು ಎಲ್ಲ ಕೊಡವ ಕುಟುಂಬಗಳು ಕಲಿತು ಬೆಳೆಸಿ ನಮ್ಮ ಸಂಸ್ಕೃತಿ ಉಳಿಸಬೇಕೆನ್ನುವ ಉದ್ದೇಶದಿಂದ ಕೊಡವ ಕೌಟುಂಬಿಕ ‘ಸಮ್ಮಂಧ ಆಡುಕುವ’ ಪೈಪೋಟಿಯನ್ನು ಆಯೋಜಿಸಲಾಗಿದೆ. ಪದ್ದತಿಯಂತೆ ಇದನ್ನು ಗಂಡು ಮಕ್ಕಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಕೊಡವ ಕೌಟುಂಬಿಕ ತಂಡಗಳ ನಡುವೆ ಪೈಪೋಟಿಯನ್ನು ಇದೇ ಮೊದಲ ಬಾರಿಗೆ ಕಾಳಿಮಾಡ ಕುಟುಂಬಸ್ಥರು ಆಯೋಜಿಸುತ್ತಿದ್ದು, ಈ ವರ್ಷ ಅ. 11ರಂದು ದಿನ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬೆಳಗ್ಗೆ 9 ಗಂಟೆಯಿಂದ ಆಯೋಜಿಸಿದ್ದು, ಇದರಲ್ಲಿ ಜಯಶೀಲರಾಗುವ ಮೂರು ಕುಟುಂಬ ತಂಡಗಳಿಗೆ ಬಹುಮಾನ ನೀಡುವುದಲ್ಲದೆ, ಭಾಗವಹಿಸಿದ ಎಲ್ಲ ಕುಟುಂಬದವರಿಗೂ ಕಿರು ಕಾಣಿಕೆ ನೀಡಲಾಗುತ್ತದೆ.
ಭಾಗವಹಿಸುವ ತಂಡಗಳ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುವುದು ಹಾಗೂ ಮೊದಲು ನೋಂದಾಯಿಸುವ ಅರವತ್ತು ಕುಟುಂಬ ತಂಡಗಳಿಗೆ ಮಾತ್ರ ಅವಕಾಶ ಇರುತ್ತದೆ. ಒಂದು ತಂಡದಲ್ಲಿ ಎರಡು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಭಾಗವಹಿಸುವ ಪ್ರತಿ ಕೊಡವ ಕುಟುಂಬದ ತಂಡಗಳು ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ಸೆ. 15ರೊಳಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ 9845308228 ಮತ್ತು 9845676854 ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿವರ ಪಡೆಯಬಹುದು ಎಂದು ಅವರು ತಿಳಿಸಿದರು.