ಸಾರಾಂಶ
ಅ.5ರಂದು ನಾಮೇರ ಅಂಕಿತ್ ಪೊನ್ನಪ್ಪ ನೇತೃತ್ವದಲ್ಲಿ ಯುವ ದಸರಾ ಪ್ರಯುಕ್ತ ಸೈಕಲ್ ರೇಸ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆ, ಪೊನ್ನಂಪೇಟೆ ನಿಸರ್ಗ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಾಟರ್ ಡ್ರಂ ಶೋ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳು ನಡೆಯಲಿದೆ.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ 46ನೇ ವರ್ಷದ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾವೇರಿ ಕಲಾವೇದಿಕೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಚಾಮುಂಡಿ ದೇವಿಯ ಪ್ರಾರ್ಥನೆಯೊಂದಿಗೆ ಪ್ರತಿಯೊಬ್ಬರ ಬದುಕು ಸುಂದರವಾಗಿ ನೆಮ್ಮದಿಯಾಗಿ ಕಾಣಲಿ ಎಂದು ಪ್ರಾರ್ಥಿಸಿದರು.
ದಸರಾ ಸಮಿತಿಯು ಜನರ ಮನರಂಜನೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರದಿಂದ 75 ಲಕ್ಷ ರು. ಅನುದಾನವನ್ನು ಈ ಬಾರಿ ಪಡೆದುಕೊಂಡಿದೆ. ಆ ಉದ್ದೇಶದೊಂದಿಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರಂಜನೆಗೆ ಮುಂದಾಗಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ವೆಂಕಟರಾಜ್ ಮಾತನಾಡಿ, ಕೊಡಗು ಸ್ವರ್ಗ ಎಂದು ಬಣ್ಣಿಸುತ್ತೇವೆ. ಅಂತಹ ಸ್ವರ್ಗವನ್ನ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಹೆಗಲಿನಲ್ಲಿದೆ. ಇಂತಹ ಪರಿಸರವನ್ನು ಉಳಿಸಲು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕಾಗಿದೆ. ದಸರಾ ಆಚರಣೆಯಲ್ಲೂ ಪರಿಸರ ಸ್ನೇಹಿ ಆಚರಣೆಗೆ ಮುಂದಾದರೆ ಅದೊಂದು ಉತ್ತಮ ಬೆಳವಣಿಗೆ ಎಂದು ಸಲಹೆ ನೀಡಿದರು.ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಯುವಕರು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಬಲಿಷ್ಠ ಸಮಾಜವನ್ನು ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಹಾಯಕ ಆಯುಕ್ತ ನರವಡೆ ವಿನಾಯಕ ಕರಭಾರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆನಂದ ಪ್ರಕಾಶ ಮೀನಾ, ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ, ಧರ್ಮಜ ಉತ್ತಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಮತ್ತಿತರರು ಹಾಜರಿದ್ದರು.ಇಂದಿನ ಕಾರ್ಯಕ್ರಮ: ಅ.5ರಂದು ನಾಮೇರ ಅಂಕಿತ್ ಪೊನ್ನಪ್ಪ ನೇತೃತ್ವದಲ್ಲಿ ಯುವ ದಸರಾ ಪ್ರಯುಕ್ತ ಸೈಕಲ್ ರೇಸ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆ, ಪೊನ್ನಂಪೇಟೆ ನಿಸರ್ಗ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಾಟರ್ ಡ್ರಂ ಶೋ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳು ನಡೆಯಲಿದೆ.