ಸಾರಾಂಶ
ಚಿಕ್ಕಮಗಳೂರು, ಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಮಕ್ಕಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವ ಗುರಿ ಹೊಂದಿರಬೇಕು ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕರೆ ನೀಡಿದರು.
22 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಶಂಕುಸ್ಥಾಪನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಮಕ್ಕಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವ ಗುರಿ ಹೊಂದಿರಬೇಕು ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕರೆ ನೀಡಿದರು.
ತಾಲೂಕಿನ ಅಂಬಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಲೂರು ರಸ್ತೆಯಲ್ಲಿ ಸುಮಾರು ₹22 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಕಟ್ಟಡಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಟ್ಟಡ ನಿರ್ಮಿಸಲು ಕಳೆದ ಆರು ತಿಂಗಳಿನಿಂದ ಅರಣ್ಯ ಇಲಾಖೆ ಅನುಮತಿ ಸಿಗಬೇಕಿತ್ತು. ಅಲ್ಲದೇ ಮೂಡಿಗೆರೆ ಕ್ಷೇತ್ರದಲ್ಲಿ ಅರಣ್ಯ ಸಮಸ್ಯೆ ಹೆಚ್ಚಿದೆ. ಕೊನೆಗೂ ಎಲ್ಲಾ ಇಲಾಖೆಗಳ ಅನುಮತಿ ಪಡೆದುಕೊಂಡು ಇಂದು ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.
ಅಂಬೇಡ್ಕರ್, ಮೊರಾರ್ಜಿ ಮತ್ತು ಆಶ್ರಮ ವಸತಿ ಶಾಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ಬಡವರ ಮಕ್ಕಳು ದಾಖಲಾಗುತ್ತಿದ್ದಾರೆ. ಪಾಲಕರು ಕೂಡಾ ದೈನಂದಿನ ತೋಟ, ಜಮೀನು ಕೆಲಸಗಳಲ್ಲಿ ನಿರತರಾಗುವ ಕಾರಣ ವಸತಿ ಶಾಲೆಗಳು ಗ್ರಾಮೀಣರ ಪಾಲಿಗೆ ಆಶಾದೀಪವಾಗಿವೆ. ಜೊತೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮತ್ತು ಕಲಿಕೆಗೆ ಅನುಕೂಲವಾಗಲಿದೆ ಎಂದರು.ಮಕ್ಕಳು ವಸತಿ ಶಾಲೆಗಳಲ್ಲಿ ಪರಿಶ್ರಮದಿಂದ ವಿದ್ಯಾಭ್ಯಾಸ ಪೂರೈಸಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವ ಪಾಲಕರ ಕನಸಿಗೆ ಸರ್ಕಾರ ಒತ್ತು ಕೊಟ್ಟು ಬಾಡಿಗೆ ಕಟ್ಟಡದಲ್ಲಿರುವ ಅಂಬೇಡ್ಕರ್ ವಸತಿ ಶಾಲೆಯನ್ನು ಸ್ವಂತ ಕಟ್ಟಡ ನಿರ್ಮಿಸುತ್ತಿದ್ದು ಒಂದು ವರ್ಷದೊಳಗೆ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಆರಂಭದಿಂದಲೇ ವಸತಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಭವಿಷ್ಯದಲ್ಲಿ ಪಿಯುಸಿ ತರಗತಿ ತೆರೆದರೆ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿದೆ. ಖಾಸಗೀ ಶಾಲೆಗಳಲ್ಲಿ ಸಿಇಟಿ, ನೀಟ್ ತರಬೇತಿ ದುಬಾರಿ ವೆಚ್ಚದಿಂದ ಹೊರ ತಂದು ವಸತಿ ಶಾಲೆಯಲ್ಲೇ ಪರಿಣಿತ ಶಿಕ್ಷಕರಿಂದ ಬೋಧಿಸಲು ಅನುಕೂಲವಾಗಲಿದೆ ಎಂದರು.ಪ್ರಸ್ತುತ ಮೂಡಿಗೆರೆ ಭಾಗದ ಬಹುತೇಕ ವಸತಿ ಶಾಲೆಗಳಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮುಖ್ಯವಾಗಿ ಅಕ್ಷರ ದಾಸೋಹ ಕೊಠಡಿ ಮತ್ತು ಶೌಚಾಲಯ ಸ್ವಚ್ಛತೆಯಿಂದ ಕೂಡಿರಲು ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಸವಲತ್ತಿನ ಬಗ್ಗೆ ಗಮನ ಹರಿಸುತ್ತಿದ್ದು, ಶೌಚಾಲಯ ಬಳಕೆ ಬಗ್ಗೆ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲು ಶಿಕ್ಷಕರು ಮುಂದಾಗಲು ಸೂಚಿಸಲಾಗಿದೆ ಎಂದರು.ವಸತಿ ಶಾಲೆಗಳ ನಿರ್ಮಾಣದಿಂದ ಗ್ರಾಮ ಮಟ್ಟದ ಸರ್ಕಾರಿ ಶಾಲೆಗಳು ಕ್ಷೀಣಿಸುತ್ತಿರುವ ಕಾರಣ ರಾಜ್ಯ ಸರ್ಕಾರ ಹೋಬಳಿ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆಗಳನ್ನು ಕ್ರೂಢೀಕರಿಸಿ ಎಲ್ಲಾ ಗ್ರಾಮಗಳಿಗೆ ಅನುಕೂಲವಾಗುವ ಒಂದು ಸ್ಥಳದಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯುವ ಆಲೋಚನೆಯಿದೆ. ಸದ್ಯದಲ್ಲೇ ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದರು.ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ನಾಗೇಶ್ ಮಾತನಾಡಿ, ಅನೇಕ ವರ್ಷಗಳಿಂದ ಎಐಟಿ ವೃತ್ತದ ಸಮೀಪ ಬಾಡಿಗೆ ಕಟ್ಟಡದಲ್ಲಿ ಶಾಲೆಯಿತ್ತು. ಇದೀಗ ವಿಶಾಲವಾಗಿ ಸಕಲ ಸವಲತ್ತಿನೊಂದಿಗೆ ಹೊಸ ಕಟ್ಟಡ ನಿರ್ಮಾಣದಿಂದ ವಿದ್ಯಾರ್ಥಿಗಳು ಮುಕ್ತವಾಗಿ ಓದಲು, ಆಟೋಟಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅಂಬಳೆ ಗ್ರಾಪಂ ಅಧ್ಯಕ್ಷ ದೊಡ್ಡೇಗೌಡ, ಜಿಪಂ ಮಾಜಿ ಸದಸ್ಯ ಕೆ.ವಿ.ಸೋಮಶೇಖರ್, ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಬಸವರಾಜ್, ಕಾಂಗ್ರೆಸ್ ಅಂಬಳೆ ಹೋಬಳಿ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ದಾಸೇಗೌಡ, ಓಂಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 17 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಅಂಬಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಲೂರು ರಸ್ತೆಯಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡಕ್ಕೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.