ಸಾರಾಂಶ
ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಮಹಿಳೆ ಹಾಗೂ ಆಕೆಯ ಮಗ ಇಬ್ಬರೂ ನಿವೇಶನ ನೀಡುವಂತೆ ಆಗ್ರಹಿಸಿ ಗ್ರಾಪಂ ಮುಂದೆಯೇ ಮನೆಯ ಸಾಮಗ್ರಿ, ಪಾತ್ರೆಗಳಿಟ್ಟು ಪ್ರತಿಭಟನೆ ಮಾಡಿದರು.
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ಮಹಿಳೆ ಹಾಗೂ ಆಕೆಯ ಮಗ ಇಬ್ಬರೂ ನಿವೇಶನ ನೀಡುವಂತೆ ಆಗ್ರಹಿಸಿ ಗ್ರಾಪಂ ಮುಂದೆಯೇ ಮನೆಯ ಸಾಮಗ್ರಿ, ಪಾತ್ರೆಗಳಿಟ್ಟು ಪ್ರತಿಭಟನೆ ಮಾಡಿದರು.ಗ್ರಾಮದ ಕೊರವರ ದೇವಕ್ಕ ಮತ್ತು ಆಕೆಯ ಮಗ ಮಂಜುನಾಥ ಕೊರವರ ಬಡ ಕುಟುಂಬವಾಗಿದ್ದು, ಗ್ರಾಮದಲ್ಲಿ ಇವರಿಗೆ ಯಾವ ಕಡೆಗೂ ನಿವೇಶನ ಇಲ್ಲ. ಗ್ರಾಮ ಠಾಣಾ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳುತ್ತಿರುವಾಗ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಗುಡಿಸಲು ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.
ಇಷ್ಟು ದಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ, ಕೂಲಿ ಮಾಡಿ ಜೀವನ ಮಾಡಬೇಕು ಎಲ್ಲಿಯೂ ಗೇಣು ಜಾಗ ಇಲ್ಲ, ಗ್ರಾಪಂನವರು ಗುಡಿಸಲು ಹಾಕದಂತೆ ತಿಳಿಸಿದ್ದಾರೆ. ಹೀಗಾದರೇ ನಾವು ಎಲ್ಲಿ ಬದುಕಬೇಕೆಂದು ಪ್ರಶ್ನಿಸಿ ನಾನು ನನ್ನ ಮಗ ಇಬ್ಬರೂ ಮನೆಯಲ್ಲಿ ಪಾತ್ರೆ ಪಡಗ ಸೇರಿದಂತೆ ಸಾಮಾನುಗಳನ್ನು ತಂದು ಕಚೇರಿ ಮುಂದೆಯೇ ಪ್ರತಿಭಟನೆ ಮಾಡುತ್ತಿದ್ದೇವೆ. ಇನ್ನಾದರೂ ಸರ್ಕಾರ ನಮಗೆ ಗುಡಿಸಲು ಹಾಕಿಕೊಳ್ಳಲು ಜಾಗ ನೀಡಬೇಕೆಂದು ಪ್ರತಿಭಟನಾನಿರತ ದೇವಕ್ಕ ಕೊರವರ ನೋವು ತೊಡಿಕೊಂಡರು.ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಇದೆ. ಇದನ್ನು ಸರ್ವೇ ಮಾಡಲು ತಹಸೀಲ್ದಾರ್‌ಗೆ ಹಾಗೂ ಸರ್ವೇ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗಿದೆ. ಗ್ರಾಮದಲ್ಲಿ ನಿವೇಶನ ರಹಿತ 300ಕ್ಕೂ ಹೆಚ್ಚು ಕುಟುಂಬಗಳಿವೆ. ಇವರಿಗೆ ನಿವೇಶನ ನೀಡಬೇಕೆಂಬ ಉದ್ದೇಶದಿಂದ ಸರ್ಕಾರಿ ಜಾಗ ಸರ್ವೇಯಾದ ನಂತರದಲ್ಲಿ ಕುಟುಂಬಗಳಿಗೆ ನಿವೇಶನ ನೀಡಬೇಕಿದೆ. ಆ ಸಮಸ್ಯೆ ಬಗೆಹರಿಯುವವರೆಗೂ ಯಾವ ಜಾಗದಲ್ಲಿಯೂ ಗುಡಿಸಲು ಹಾಕಿಕೊಳ್ಳಬೇಡಿ ಎಂದು ತಿಳುವಳಿಕೆ ನೀಡಿದ್ದೇವೆ ಎಂದು ಪಿಡಿಒ ಶಂಭುಲಿಂಗನಗೌಡ ತಿಳಿಸಿದ್ದಾರೆ.
ಗ್ರಾಪಂ ಪಿಡಿಒ ಭರವಸೆಯ ನಂತರದಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.