ಸಾರಾಂಶ
ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ನೂತನವಾಗಿ ಕಳೆದ ಮಾ. 6 ರಂದು ಪ್ರಾರಂಭವಾಗಿರುವ ಪ್ರತಿಷ್ಟಿತ ಡಿ ಮಾರ್ಟ್ ಮಾಲ್ ನಲ್ಲಿ ಕಳಪೆ ಗುಣಮಟ್ಟದ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಹಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ನೂತನವಾಗಿ ಕಳೆದ ಮಾ. 6 ರಂದು ಪ್ರಾರಂಭವಾಗಿರುವ ಪ್ರತಿಷ್ಟಿತ ಡಿ ಮಾರ್ಟ್ ಮಾಲ್ ನಲ್ಲಿ ಕಳಪೆ ಗುಣಮಟ್ಟದ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಹಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಇರ್ಫಾನ್ ಎಂಬುವವರು ಡಿ ಮಾರ್ಟ್ ನಲ್ಲಿ ಅಂಜೂರವನ್ನು ಖರೀದಿ ಮಾಡಿದ್ದರು. ಮನೆಗೆ ಹೋಗಿ ಮಗುವಿಗೆ ತಿನ್ನಲು ನೀಡಿದ್ದಾರೆ. ಮಗು ಅಂಜೂರವನ್ನು ಕಚ್ಚಿ ತಿನ್ನುತ್ತಿದ್ದಂತೆ ಅಂಜೂರದೊಳಗಿನಿಂದ ಬಿಳಿ ಹುಳಗಳು ಪ್ರತ್ಯಕ್ಷವಾಗಿವೆ. ಇದನ್ನು ಕಂಡ ಇರ್ಫಾನ್ ಮಂಗಳವಾರ ಎಲ್ಲಾ ಅಂಜೂರಗಳನ್ನು ತಂದು ಡಿ ಮಾರ್ಟ್ ನ ಸಿಬ್ಬಂದಿಗೆ ತೋರಿಸಿದ್ದಾರೆ. ಅವರು ಬೇರೆ ಅಂಜೂರಗಳ ಪ್ಯಾಕೇಟ್ ನೀಡಿದ್ದಾರೆ. ಅನುಮಾನಗೊಂಡ ಇರ್ಪಾನ್ ಅಲ್ಲಿಯೇ ಪರಿಶೀಲನೆ ನಡೆಸಿದ್ದು, ಈ ವೇಳೆ ಅದರಲ್ಲಿಯೂ ಹುಳುಗಳು ಕಂಡು ಬಂದಿವೆ. ಕೂಡಲೇ ಆಹಾರ ತಪಾಸಣೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಬಂದ ಆಹಾರ ಅಧಿಕಾರಿಗಳು ಪೊಲೀಸರ ನೇತೃತ್ವದಲ್ಲಿ ಮಾಲ್ ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಂಜೂರದ ಪ್ಯಾಕೇಟ್ ಗಳನ್ನು ವಶಪಡಿಸಿಕೊಂಡು ಪರೀಕ್ಷೆಗೆ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಇನ್ನು ಕೋಟ್ಯಾಂತರ ರು. ವ್ಯವಹಾರ ನಡೆಸುವ ಹಾಗೂ ಗ್ರಾಮೀಣ ಭಾಗದ ಜನರನ್ನು ಹೆಚ್ಚಾಗಿ ಆಕರ್ಷಿಸುವ ಡಿ ಮಾರ್ಟ್ ನಲ್ಲಿ ವಸ್ತುಗಳನ್ನು ಖರೀದಿ ಮಾಡುವ ವೇಳೆ ಪ್ರತಿಯೊಬ್ಬರು ಪರಿಶೀಲನೆ ನಡೆಸಿ ವಸ್ತುಗಳನ್ನು ತಗೆದುಕೊಳ್ಳುವಂತೆ ಕೆಲ ಗ್ರಾಹಕರು ಹೇಳಿದ್ದಾರೆ.