ಮತ ನೀಡಿದ ತಪ್ಪಿಗೆ ಬಡಜನರಿಗೆ ಬೆಲೆ ಏರಿಕೆ ಶಿಕ್ಷೆ: ಸಿಐಟಿಯು

| Published : Apr 03 2025, 12:33 AM IST

ಸಾರಾಂಶ

ಮತ ನೀಡಿದ ತಪ್ಪಿಗೆ ಸರ್ಕಾರವು ಬಡ ಜನರಿಗೆ ಬೆಲೆಏರಿಕೆಯ ಶಿಕ್ಷೆ ನೀಡುತ್ತಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘ(ಸಿಐಟಿಯು)ದ ಅಧ್ಯಕ್ಷ ನ್ಯಾಯವಾಗಿ ಪಿ.ಕೆ. ಸತೀಶನ್ ಮತ್ತು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ. ಭಟ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ರಾಜ್ಯ ಸರ್ಕಾರವು ಹಾಲಿನ ದರ, ವಿದ್ಯುತ್ ದರ, ಕಸದ ಶುಲ್ಕದ ದರ, ಮುದ್ರಾಂಕ ಶುಲ್ಕದ ದರ ಏರಿಸುತ್ತಿದ್ದರೆ ಕೇಂದ್ರ ಸರ್ಕಾರವು ಟೋಲ್ ಶುಲ್ಕದ ದರ, ಔಷಧಗಳ ಬೆಲೆ, ಕಾರುಗಳ ದರ, ಹೊಟೇಲ್ ದರ, ಬೆಳ್ಳಿ, ರಸ ಗೊಬ್ಬರ, ಇತ್ಯಾದಿಗಳ ದರಗಳನ್ನು ಏರಿಸಿದೆ. ಮತ ನೀಡಿದ ತಪ್ಪಿಗೆ ಸರ್ಕಾರವು ಬಡ ಜನರಿಗೆ ಬೆಲೆಏರಿಕೆಯ ಶಿಕ್ಷೆ ನೀಡುತ್ತಿದೆ ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘ(ಸಿಐಟಿಯು)ದ ಅಧ್ಯಕ್ಷ ನ್ಯಾಯವಾಗಿ ಪಿ.ಕೆ. ಸತೀಶನ್ ಮತ್ತು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ. ಭಟ್ ಆರೋಪಿಸಿದ್ದಾರೆ. ಅವರು ಪತ್ರಿಕಾ ಹೇಳಿಕೆ ನೀಡಿ ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆ ಮಾಡುವುದು ಸರಕಾರದ ಒಂದಂಶ ಕಾರ್ಯಕ್ರಮವಾದರೆ, ನಮ್ಮ ತೆರಿಗೆ ಹಣವನ್ನು ಈ ಬೆಲೆಏರಿಕೆಗೆ ಅನುಗುಣವಾಗಿ ತಮಗೆ ತಾವೇ ವೇತನ ಭತ್ಯೆಯ ಹೆಸರಲ್ಲಿ ಹಂಚಿಕೊಳ್ಳುವುದು ಇನ್ನೊಂದು ಅಂಶ ಕಾರ್ಯಕ್ರಮ ಆಗಿದೆ ಎಂದು ಸರ್ಕಾರ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿದ್ದಾರೆ. ಈ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ವಿಪರೀತ ಏರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಒಮ್ಮತದಿಂದ ನಿರ್ಧರಿಸಿದ್ದಲ್ಲದೆ ರಾಜ್ಯ ಸರಕಾರವನ್ನು ಬಿಜೆಪಿ ಪಕ್ಷ ಮತ್ತು ಕೇಂದ ಸರ್ಕಾರವನ್ನು ಕಾಂಗ್ರೇಸ್ ಪಕ್ಷ ಪರಸ್ಪರ ಟೀಕಿಸುತ್ತಾ ಜನರ ಮುಂದೆ ನಾಟಕ ಮಾಡುತ್ತಿವೆ. ಶಾಸಕ-ಸಂಸದರ ವೇತನ ಭತ್ತೆಯನ್ನು ವಿಪರೀತ ಏರಿಸಿಕೊಂಡ ಈ ಎರಡೂ ಸರ್ಕಾರಗಳು ದುಡಿಯುವ ಜನರ ವೇತನವನ್ನು ಇಳಿಸಿ ಆದೇಶ ಮಾಡುತ್ತಿದೆ. ಬೀಡಿ ಕಾರ್ಮಿಕರ ವೇತನವನ್ನು ಪ್ರತಿ ೧೦೦೦ ಬೀಡಿಗೆ ರೂ. ೩೧೫ ರಿಂದ ರೂ. ೨೭೦ಕ್ಕೆ ಇಳಿಸಿದೆ. ಉದ್ಯೋಗ ಸೃಷ್ಟಿಗೆ ಗಮನ ನೀಡದ ಸರ್ಕಾರಗಳು ಉದ್ಯೋಗ ಖಾತ್ರಿ ಯೋಜನೆಗೂ ಹಣ ನೀಡುತ್ತಿಲ್ಲ ಎಂದು ಆರೋಪಿಸಿದರು.

ರೈತರ ಗೊಬ್ಬರ ಮೊದಲಾದವುಗಳ ಸಬ್ಸಿಡಿ ರದ್ದು ಪಡಿಸಿದ ಸರಕಾರಗಳು ರೈತರ ಬೆಳೆಗೆ ಬೆಂಬಲ ಬೆಲೆಯನ್ನು ನೀಡುತ್ತಿಲ್ಲ. ೧೯೯೧ ರಿಂದ ಸಲ್ಲಿಸಿದ ಅಕ್ರಮ ಸಕ್ರಮ ಅರ್ಜಿ ಇತ್ಯರ್ಥ ಪಡಿಸಿ ಹಕ್ಕು ಪತ್ರ ನೀಡಲಾಗದ ಸರ್ಕಾರ ಬಡಜನರ ಮೇಲೆ ಬೆಲೆ ಏರಿಕೆಯ ಬರೆ ಹಾಕುತ್ತಿದೆ. ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು ರೈತರ ರಕ್ಷಣೆ ಮಾಡಲು ಸಿದ್ದವಿಲ್ಲದ ಕೆಂದ್ರ ಸರಕಾರ ಅಡಿಕೆ ಆಮದು ಮಾಡುತ್ತಾ ರೈತರ ಆದಾಯ ಕುಸಿಯುವಂತೆ ಮಾಡುತ್ತಿದೆ. ದುಡಿಯುವ ಜನತೆ ನೆಮ್ಮದಿಯಿಂದ ಉಸಿರಾಡಲೂ ಅವಕಾಶ ನೀಡದಂತೆ ಬೆಲೆಏರಿಸಿದ್ದನ್ನು ಇಳಿಸದಿದ್ದರೆ ಈ ಸರಕಾರಗಳ ವಿರುದ್ಧ ದುಡಿಯುವ ರೈತರು,

ಕಾರ್ಮಿಕರು ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.