ಸಾರಾಂಶ
ಬ್ಯಾಡಗಿ: ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆ ಕಾಮಗಾರಿ ಕಳಪೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ₹116 ಕೋಟಿ ಯೋಜನೆಯನ್ನು ಪಟ್ಟಣದ ಸಾರ್ವಜನಿಕರಿಗೆ ತಲುಪಿಸದೇ ಹಳ್ಳ ಹಿಡಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಹನುಮಂತ ಭೋವಿ, ಎರಡು ತಿಂಗಳ ಹಿಂದೆ ಸುರಿದ ಮಳೆಗೆ ಯುಜಿಡಿ ಕಾಮಗಾರಿಗಳ ನಿಜ ಬಣ್ಣ ಬಯಲಾಗಿದೆ. ಎಲ್ಲೆಲ್ಲಿ ಕಾಮಗಾರಿ ಕಳಪೆಯಾಗಿದೆಯೋ ಅಲ್ಲೆಲ್ಲ ನೀರು ಸೋರಿಕೆಯಾಗುತ್ತಿದೆ. ಜನತಾ ಪ್ಲಾಟ್ ಹಾಗೂ ಪಟ್ಟಣದ ವಿವಿಧ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳಲು ಕಾರಣವಾಗಿದೆ ಎಂದರು.
ಯುಜಿಡಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಬಹುದಿನಗಳಿಂದ ಸಾರ್ವಜನಿಕರು ಆರೋಪಿಸುತ್ತಲೇ ಬಂದಿದ್ದಾರೆ. ಬಹುತೇಕ ಕಡೆಗಳಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿ ಕೈಚೆಲ್ಲಿ ಕುಳಿತಿದ್ದು, ಕೂಡಲೇ ಗುಣನಿಯಂತ್ರಣ ವರದಿ (ಕ್ಯೂಎಸಿ) ಯನ್ನು ಸಾರ್ವಜನಿಕರಿಗೆ ಪ್ರದರ್ಶಿಸಬೇಕು ಎಂದು ಹೇಳಿದರು.ಉಪಾಧ್ಯಕ್ಷ ಮಾದೇವಪ್ಪ ಹೆಡಿಗ್ಗೊಂಡ ಮಾತನಾಡಿ, ಮಳೆಯಿಂದ ಅನಾಹುತವಾದ ಸಂದರ್ಭದಲ್ಲಿ ಸ್ವತಃ ಜಿಲ್ಲಾಧಿಕಾರಿಗಳೆ ಖುದ್ದು ಪರಿಶೀಲನೆ ನಡೆಸಿದ್ದು, ಕಾಮಗಾರಿ ಕಳಪೆಯಾದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸುಭಾಸ್ ಪ್ಲಾಟ್ ಬಳಿ ಯುಜಿಡಿ ಪೈಪ್‌ಲೈನ್ ಅಳವಡಿಸಿದ್ದರಿಂದ ಮನೆಗಳಿಗೆ ನುಗ್ಗಿದ ನೀರು ನೂರಾರು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಬುದ್ಧಿ ಹೇಳೋದರಲ್ಲಿ ನಿಪುಣರು: ತಾಲೂಕಾಧ್ಯಕ್ಷ ಮಾಲತೇಶ ಹೆಬಸೂರ ಮಾತನಾಡಿ, ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹಾಗೂ ಕಾಂಗ್ರೆಸ್ ಭವನದ ಬಳಿ ಚರಂಡಿ ನೀರು ದುರ್ವಾಸನೆ ಬೀರುತ್ತಿದೆ. ಶಾಸಕರು, ಸಚಿವರು, ಪುರಸಭೆ ಅಧ್ಯಕ್ಷರು, ಬುದ್ಧಿ ಹೇಳುವುದರಲ್ಲಿ ನಿಪುಣರಾಗಿರುವ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಎರಡೂ ಕಾಮಗಾರಿ ಕೈಗೊಳ್ಳದಿದ್ದಲ್ಲಿ ರೈತರ ಜತೆ ಸೇರಿಕೊಂಡು ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ರಮೇಶ್ ಸುಂಕದ, ಮೌಲಾಲಿ ಏರಿಮನೆ, ಮಂಜುನಾಥ ಲೋಖಂಡೆ, ಯುವರಾಜ್ ನವಲಗುಂದ, ಅಶೋಕ ಗದಗ, ಕೃಷ್ಣ ಚಾವಡಿ, ಸುರೇಶ ಕುಂಗ್ಲಿ, ಫಕ್ಕೀರಪ್ಪ ಮ್ಯಾಗೇರಿ, ದರ್ಶನ್ ಬೋವಿ, ಬಸಪ್ಪ ಕೊಡಬಾಳ, ಕಿರಣ ಕೂಡಬಾಳ, ಮಾಲತೇಶ ಓಲೆಕಾರ, ಲಕ್ಷ್ಮಣ ಕಟ್ಟಿಗೆ, ಚಂದ್ರು ಕರ್ಜಗಿ, ಕುಮಾರ ಮಂಚಿಕೊಪ್ಪ, ಗಿರೀಶ ವಡ್ಡರ, ರತ್ನಮ್ಮ, ಶೋಭಾ, ದ್ಯಾಮವ್ವ, ಮೀನಾಕ್ಷಮ್ಮ, ಬಸಮ್ಮ, ವಿದ್ಯಾ, ಪಾರಮ್ಮ, ಶಿಲ್ಪಾ ಇನ್ನಿತರರಿದ್ದರು.