ಸಾರಾಂಶ
ಮುಂಡಗೋಡ: ಅರಣ್ಯವಾಸಿ ಸಿದ್ದಿ ಜನಾಂಗದವರು ಕಳಪೆ ಗುಣಮಟ್ಟದ ಆಹಾರ ದಾನ್ಯಗಳನ್ನು ತಿರಸ್ಕರಿಸಿದ ಘಟನೆ ತಾಲೂಕಿನ ಮೈನಳ್ಳಿ, ಗುಂಜಾವತಿ ಸೇರಿದಂತೆ ವಿವಿಧ ಭಾಗದಲ್ಲಿ ನಡೆದಿದೆ.
ಬುಡಕಟ್ಟು ಅರಣ್ಯವಾಸಿ ಸಿದ್ದಿ ಜನಾಂಗ ಸ್ವಸ್ಥ ಹಾಗೂ ಆರೋಗ್ಯವಾಗಿ ಗಟ್ಟಿಮುಟ್ಟಾಗಿರಬೇಕು. ವರ್ಷದಲ್ಲಿ ೬ ತಿಂಗಳು ಕೆಲಸ ಕಾರ್ಯ ಇಲ್ಲದೇ ಇದ್ದಾಗ ಆಹಾರದ ಕೊರತೆಯಿಂದ ಬಳಲಬಾರದು ಎಂದು ಸರ್ಕಾರ ಪ್ರತಿ ೨ ತಿಂಗಳಿಗೊಮ್ಮೆ ಪ್ರತಿ ಕುಟುಂಬಕ್ಕೆ ೮ ಕೆಜಿ ಅಕ್ಕಿ, ೩ ಕೆಜಿ ತೊಗರಿ ಬೇಳೆ, ತಲಾ ೧ ಕೆಜಿ ತ್ರಿವಿಧ ಧಾನ್ಯ, ೨ ಕೆಜಿ ಅಡುಗೆ ಎಣ್ಣೆ, ೧/೨ ಕೆಜಿ ತುಪ್ಪ ಹಾಗೂ ೩೦ ಮೊಟ್ಟೆಗಳನ್ನು ಹಿಂದಿನಿಂದಲೂ ನೀಡಲಾಗುತ್ತಿದೆ.ಅನುದಾನದ ಕೊರತೆ ಸೇರಿದಂತೆ ಕಾರಣಾಂತರಗಳಿಂದ ಕಳೆದ ೨೦೨೪ನೇ ಸಾಲಿನಲ್ಲಿ ಸಿದ್ದಿ ಜನಾಂಗಕ್ಕೆ ಇಡೀ ವರ್ಷ ಆಹಾರವನ್ನೇ ವಿತರಿಸಲಾಗಿಲ್ಲ. ಕಳೆದ ವರ್ಷ ವಿತರಿಸಬೇಕಾಗಿದ್ದ ಬಾಕಿ ಆಹಾರವನ್ನು ಈಗ ವಿತರಿಸಲು ಗುತ್ತಿಗೆದಾರರು ಮುಂದಾಗಿದ್ದರು.
ಆದರೆ, ಹಂಚಿಕೆ ಮಾಡುತ್ತಿದ್ದ ದ್ವಿದಳ ಧಾನ್ಯಗಳಲ್ಲಿ ನುಸಿ, ಹಾರಾಡುವ ಸಣ್ಣ ಕೀಟಗಳು ಧಾನ್ಯಗಳ ಒಳಹೊಕ್ಕು ತಿಂದಿರುವುದರಿಂದ ಧಾನ್ಯಗಳು ಸೇವಿಸಲು ಯೋಗ್ಯವಿಲ್ಲದಂತಾಗಿತ್ತು. ಅಡುಗೆ ಎಣ್ಣೆ ಸೇರಿದಂತೆ ಎಲ್ಲವು ಕೂಡ ಕಳಪೆ ಗುಣಮಟ್ಟದ್ದಾಗಿತ್ತು. ತೂಕದಲ್ಲಿ ಕೂಡ ಕಡಿಮೆ ನೀಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಸುಮಾರು ೪೦೦ಕ್ಕಿಂತ ಅಧಿಕ ಸಿದ್ದಿ ಕುಟುಂಬಗಳು ಆಹಾರವನ್ನು ಸ್ವೀಕರಿಸಲು ನಿರಾಕರಿಸಿದ್ದು, ೪ ದಿನದೊಳಗಾಗಿ ಗುಣಮಟ್ಟ ಆಹಾರ ನೀಡಿ. ಇಲ್ಲದೇ ಇದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿ ಗುತ್ತಿಗೆದಾರರಿಗೆ ವಾಪಸ್ ಕಳುಹಿಸಿದ್ದಾರೆ.ಸಿದ್ದಿ ಜನರಿಗೆ ಪೌಷ್ಠಿಕಾಂಶ ವಿತರಣೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳದ್ದು. ಆಹಾರ ಧಾನ್ಯ, ಪೌಷ್ಟಿಕಾಂಶ ಸಾಮಗ್ರಿಗಳ ವಿತರಣೆಗೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಟೆಂಡರ್ ಕರೆದು ಆಯಾ ಕಂಪನಿಗಳಿಗೆ ನೀಡಿದ್ದರು. ಅದೇ ರೀತಿ ಪ್ರಸ್ತುತ ಮುಂಡಗೋಡ ಸಿದ್ದಿ ಜನರಿಗೆ ವಿತರಣೆ ಮಾಡುವ ಟೆಂಡರ್ ಗದಗ ಜಿಲ್ಲೆಯ ಒಂದು ಕಂಪನಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಜವಾಬ್ದಾರಿ ವಹಿಸಬೇಕಾದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸುವುದಿಲ್ಲ. ನಮ್ಮ ಸಮಸ್ಯಗೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಸಂಪೂರ್ಣ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ. ಈ ಯೋಜನೆಯಲ್ಲಿ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿದ್ದು ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಸರ್ಕಾರವು ಸಿದ್ದಿ ಜನರ ಕುರಿತು ಮುತುವರ್ಜಿ ವಹಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಸಿದ್ದಿ ಮುಖಂಡ ಮ್ಯಾನುಯೆಲ್ ಫೆರ್ನಾಂಡಿಸ್, ಜೂಜೆ ಸಿದ್ದಿ ಆಗ್ರಹಿಸಿದ್ದಾರೆ.ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ವಿಷಯ ತಮ್ಮ ಗಮನಕ್ಕೆ ಬಂದಿದೆ. ಅದನ್ನು ಬದಲಾಯಿಸಿ ಗುಣಮಟ್ಟದ ಆಹಾರ ಪೂರೈಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಆಹಾರ ಪೂರೈಕೆಯಾಗಲಿದೆ. -ಉಮೇಶ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ.