ಕುದೂರು: ಆರು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕುದೂರು ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟನೆಗೂ ಮುನ್ನವೇ ತರಗತಿಗಳು ನಡೆಯುತ್ತಿದ್ದು, ಕಾಮಗಾರಿ ಕಳಪೆಯಿಂದ ಕೂಡಿದೆ

ಕುದೂರು: ಆರು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕುದೂರು ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟನೆಗೂ ಮುನ್ನವೇ ತರಗತಿಗಳು ನಡೆಯುತ್ತಿದ್ದು, ಕಾಮಗಾರಿ ಕಳಪೆಯಿಂದ ಕೂಡಿದೆ.

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕರ್ನಾಟಕ ಪಬ್ಲಿಕ್ ಶಾಲೆ ಎಂಬ ಪರಿಕಲ್ಪನೆ ಇಡೀ ರಾಜ್ಯಾದ್ಯಂತ ನಿಧಾನವಾಗಿ ಆವರಿಸುತ್ತಿದೆ. ಸುತ್ತಲಿನ ಶಾಲೆಗಳನ್ನೆಲ್ಲಾ ಒಂದು ಶಾಲೆಗೆ ಕೇಂದ್ರೀಕರಿಸಿ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳೆಲ್ಲರೂ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾಭ್ಯಾಸ ಮಾಡಬಹುದು ಎಂಬ ಪರಿಕಲ್ಪನೆಯಲ್ಲಿ ಕೆಪಿಎಸ್ ಶಾಲೆ ಎಂದು ಪರಿಚಯಿಸಲಾಯಿತು.

ಈ ಯೋಜನೆಯಲ್ಲಿ ಮಾಗಡಿ ತಾಲೂಕಿನಲ್ಲಿ ಮೊಟ್ಟ ಮೊದಲಿಗೆ ಆಕರ್ಷಕ ಕಟ್ಟಡವನ್ನು ಒಳಗೊಂಡಂತೆ ಅತಿಹೆಚ್ಚು ಮಕ್ಕಳನ್ನು ಒಳಗೊಂಡ ಕೆಪಿಎಸ್ ಶಾಲೆ ಎಂಬ ಹೆಗ್ಗಳಿಕೆಗೆ ಕುದೂರು ಗ್ರಾಮ ಪಾತ್ರವಾಗಿದೆ.

ಕುದೂರು ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಎಲ್ ಕೆ ಜಿಯಿಂದ ಪಿಯೂವರೆಗೂ ಒಂದೇ ಕಾಂಪೌಂಡ್‌ನಲ್ಲಿ ಇರಬೇಕೆಂದು ರೂಪಿತಗೊಂಡಿತು. ಅದರಂತೆ ನೂತನ ಕಟ್ಟಡದಲ್ಲಿ ಎಲ್‌ಕೆಜಿಯಿಂದ ಏಳನೇ ತರಗತಿಯವರೆಗೆ ಒಟ್ಟು 800 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ಮಾಗಡಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಮಕ್ಕಳಿರುವ ಸರ್ಕಾರಿ ಪ್ರಾಥಮಿಕ ಶಾಲೆಯಾಗಿದೆ. 6 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡ ಮಳೆ ಬಂದರೆ ಮೇಲಿನ ಸಭಾಂಗಣದಲ್ಲಿ ನೀರು ಸೋರುತ್ತದೆ. ಈ ಕಟ್ಟಡವನ್ನು ಕಟ್ಟುವ ಜವಾಬ್ದಾರಿಯನ್ನು ಟೊಯೋಟಾ ಕಿರ್ಲೋಸ್ಕರ್ ಕಂಪನಿಯವರಿಗೆ ವಹಿಸಲಾಗಿತ್ತು. ಕಟ್ಟಡದ ತಳಪಾಯ ಭದ್ರವಾಗಿ ನಿರ್ಮಾಣವಾಗಿದ್ದರೂ ಮೋಲ್ಡ್ ಸರಿಯಾದ ರೀತಿಯಲ್ಲಿ ಕ್ಯೂರಿಂಗ್ ಆಗದೇ ಇರುವುದರಿಂದ ಮೇಲ್ಭಾಗದ ಸಭಾಂಗಣ ಮಳೆ ಬಂದಾಗ ಗೋಡೆಗೆ ಮಳೆ ನೀರು ಇಳಿಯುತ್ತದೆ.

ಸೋರುವ ಶೌಚಾಲಯ:

ಕಟ್ಟಡದ ಮೇಲ್ಭಾಗದಲ್ಲಿರುವ ಶೌಚಾಲಯದ ನೀರು ಕಳಭಾಗದ ಶೌಚಾಲಯದಲ್ಲಿ ಸೋರುತ್ತದೆ. ಎರಡನೇ ಶೌಚಾಲಯದಿಂದ ಕೆಳಗಿನ ಶೌಚಾಲಯ ಸೋರುತ್ತದೆ. ಶೌಚಾಲಯದ ಕಮೋಡ್‌ಗಳು ಮುರಿದಿವೆ. ಟೈಲ್ಸ್ ಕಿತ್ತು ಬರುತ್ತಿವೆ.

ಶಾಲೆಯ ಕಾರಿಡಾರ್‌ಗಳಲ್ಲಿ ಮತ್ತು ಶೌಚಾಲಯಗಲ್ಲಿ ಮೋಲ್ಡ್ ಸೆಂಟ್ರಿಂಗ್ ಗೆ ಕಬ್ಬಿಣದ ಹಲಗೆಗಳನ್ನು ಹಾಕಿ ಕಂಬಿಗಳನ್ನು ಕಟ್ಟಿ ಮೋಲ್ಡ್ ಹಾಕಲಾಗುತ್ತದೆ. ನಂತರ ಅದನ್ನು ಕಿತ್ತು ಕಬ್ಬಿಣದ ಹಲಗೆಗಳ ಜಾಗದಲ್ಲಿದ್ದ ಜಾಗವನ್ನು ಉಜ್ಜಿ ಸಮವಾಗಿ ಪ್ಲಾಸ್ಟಿಂಗ್ ಮಾಡಬೇಕಾಗುತ್ತದೆ. ಆದರೆ ಈ ಕೆಲಸವನ್ನು ಮಾಡದೆ ಗುತ್ತಿಗೆದಾರರು ಏರುಪೇರು ಇರುವ ರೀತಿಯಲ್ಲಿಯೇ ಕಟ್ಟಡದ ಒಳಾಂಗಣ ಕುರೂಪವಾಗಿರುವಂತೆ ಪ್ಲಾಸ್ಟಿಂಗ್ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಅದರ ಚಾವಣಿ ಕುಸಿದು ಬೀಳುವ ಸಾಧ್ಯತೆಗಳೆ ಹೆಚ್ಚು.

ವಿದ್ಯುತ್ ಸ್ವಿಚ್‌ಗಳು ಮುರಿದಿವೆ, ದೀಪಗಳು ಹತ್ತದಂತಿವೆ.

ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಳಪೆ ಕಾಮಗಾರಿಯಾಇರುವ ಜಾಗಗಳನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ

21-ಅಕ್ಟೋಬರ್-ಕುದೂರು-1 : ಕುದೂರು ಗ್ರಾಮದ ಕೆಪಿಎಸ್ ಸುಂದರ ಕಟ್ಟಡ

21-ಅಕ್ಟೋಬರ್-2 : ಮಳೆಬಂದಾಗ ಜಿನುಗುತ್ತಿರುವ ಕಟ್ಟಡ

21-ಅಕ್ಟೋಬರ್-ಕುದೂರು-3 : ಸೋರುತ್ತಿರುವ ಶೌಚಾಲಯ.