ಶಿಕ್ಷಣ ಗುಣಮಟ್ಟ ಕಳಪೆ: ಶಾಸಕ ಬಿ.ಜಿ.ಗೋವಿಂದಪ್ಪ

| Published : Jun 11 2024, 01:35 AM IST

ಶಿಕ್ಷಣ ಗುಣಮಟ್ಟ ಕಳಪೆ: ಶಾಸಕ ಬಿ.ಜಿ.ಗೋವಿಂದಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗದ ತಾಪಂ ಸಭಾಂಗಣದಲ್ಲಿ ಶಾಸಕ ಬಿ.ಜಿ,ಗೋವಿಂದಪ್ಪ ಅಧ್ಯಕ್ಷತೆಯಲ್ಲಿ 2024-25 ನೇ ಸಾಲಿನ ಮೊದಲ ಕೆಡಿಪಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಸಿಸಿ ಕ್ಯಾಮೆರಾ ಹಾಕಿ ಅವರನ್ನು ಕಾಯುವ ಅವಶ್ಯಕತೆ ಇರುವುದಿಲ್ಲ. ಮಕ್ಕಳಿಗೆ ಪುಸ್ತಕ ನೀಡಿದರು ನಕಲು ಮಾಡಲು ಬರುತ್ತಿಲ್ಲ ಅಂತಾ ಪರಿಸ್ಥಿತಿ ಉಂಟಾಗಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಪ್ರಥಮ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆ ವಿಷಯಗಳ ಚರ್ಚೆಯಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಕಳಪೆಯಾಗಿದೆ. ದಾಖಲಾತಿ ಕಡಿಮೆಯಿಂದ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಶಿಕ್ಷಕರು ಪೋಷಕರ ಮನೆಗಳಿಗೆ ತೆರಳಿ ಸರ್ಕಾರಿ ಶಾಲೆಗೆ ದಾಖಲಿಸುವಂತೆ ಮನವೋಲಿಸಬೇಕು. ಬಿಇಒ ಶಾಲೆಗಳಿಗೆ ತೆರಳಿ ಶಿಕ್ಷಕರಿಗೆ ಮೌಲ್ಯ ಮಾಪನ ಮಾಡಬೇಕು. ಶಿಕ್ಷಕರು ಏನು ಪಾಠ ಮಾಡುತ್ತಾರೆ ಎಂದು ಪರಿಶೀಲನೆ ನಡೆಸಬೇಕು ಎಂದು ಬಿಇಒ ಸಯ್ಯದ್ ಮೊಸೀನ್ ಅವರಿಗೆ ತಾಕೀತು ಮಾಡಿದರು.

ಕೆಲವು ಶಾಲೆಗಳಲ್ಲಿ ಕೊಠಡಿ ಸಮಸ್ಯೆ ಇವೆ. ಮಳೆಗಾಲದಲ್ಲಿ ಮಕ್ಕಳಿಗೆ ತೊಂದರೆ ಆಗಬಾರದು. 2 ವರ್ಷ ಕಳೆದರು ಕೆಲಸ ಆರಂಭಿಸಿದ ಹರ್ಷ ಎಂಬ ಗುತ್ತಿಗೆದಾರರನ್ನು ಬದಲಾಯಿಸಿ ಅಪೂರ್ಣ ಗೊಂಡ ಶಾಲಾ ಕೊಠಡಿಗಳ ಪಟ್ಟಿ ನೀಡುವಂತೆ ಸೂಚಿಸಿದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು, ಬಲ್ಲಾಳ ಸಮುದ್ರ, ಜಾನಕಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ ಎಂಬ ದೂರು ಕೇಳಿ ಬರುತ್ತಿವೆ. ಯಾವ ಕ್ರಮ ಕೈಗೊಂಡಿದ್ದೀರಾ ಎಂದು ತಾಲೂಕು ಆರೋಗ್ಯ ಅಧಿಕಾರಿ ರಾಘವೇಂದ್ರ ಪ್ರಸಾದ್‌ರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಘವೇಂದ್ರ ಪ್ರಸಾದ್ ಬಲ್ಲಾಳ ಸಮುದ್ರ ಗ್ರಾಮದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರೊಬ್ಬರಿದ್ದಾರೆ ಎಂದು ತಿಳಿಸಿದರು. ಕೇವಲ ದಾಖಲೆಗಳಲ್ಲಿ ವೈದ್ಯರನ್ನು ತೋರಿಸಿದರೆ ಸಾಲದು ಭೌತಿಕವಾಗಿ ಆಸ್ಪತ್ರೆಗಳಲ್ಲಿ ವೈದ್ಯರು ಸಾರ್ವಜನಿಕರಿಗೆ ಸಿಗುವಂತೆ ನೋಡಿಕೊಳ್ಳಿ ಎಂದರು.

ಗ್ರಾಮೀಣ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಇಲ್ಲ. ಆಸ್ಪತ್ರೆಗಳಲ್ಲಿ ಸ್ವಚ್ಛತೆ ಇರದಿದ್ದರೆ ರೋಗ ನಿವಾರಣೆ ಹೇಗೆ ಸಾಧ್ಯ. ಕೆಲವು ಆಸ್ಪತ್ರೆ ಕಟ್ಟಡಗಳು ಸೋರುತ್ತಿವೆ ಎಂಬ ಮಾಹಿತಿ ಇದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದಕ್ಕೆ ಅಧಿಕಾರಿ ಪ್ರಸಾದ್ ಶೀಘ್ರದಲ್ಲಿ ಸರಿಪಡಿಸುತ್ತೇನೆ ಎಂದಾಗ ಮಾಡ್ತೀನಿ ಹೇಳ್ತೀನಿ ಕೇಳ್ತೀನಿ ಎನ್ನುವುದನ್ನು ಬಿಡಿ ನೀವೇ ಮುಂದೆ ನಿಂತು ಕೆಲಸ ತೆಗೆದುಕೊಳ್ಳಿ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸಾರ್ವಜನಿಕ ಸೇವೆಗೆ ಲಭ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿವೆ. ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಈ ರೀತಿ ಮಾಡುವುದು ಸರಿಯಲ್ಲ, ಅವುಗಳ ದುರಸ್ತಿ ಇದ್ದರೆ ಕೂಡಲೇ ಸರಿಪಡಿಸಿಕೊಳ್ಳಿ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ರಾಕೇಶ್ ಅವರಿಗೆ ಸೂಚಿಸಿದರು.

ಸಭೆಯಲ್ಲಿ ತಾಪಂ ಇಒ ಸುನಿಲ್ ಕುಮಾರ್, ತಹಸೀಲ್ದಾರ್ ತಿರುಪತಿ ಪಾಟೀಲ್, ತಾಪಂ ಆಡಳಿತ ಅಧಿಕಾರಿ ಶಂಕರಪ್ಪ ಪತ್ತಾರ್ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತೋಟಗಾರಿಕೆ ಇಲಾಖೆಯಲ್ಲಿ ಭ್ರಷ್ಟಾಚಾರ: ಶಾಸಕರ ಅಸಮಾಧಾನ

ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿಗೆ ನೀಡಲಾಗುವ ಸಹಾಯಧನದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು ಈ ಬಗ್ಗೆ ರೈತರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇದನ್ನು ನೀವು ಯಾವ ರೀತಿ ಸರಿಪಡಿಸಿಕೊಳ್ಳುತ್ತಿರೋ ಗೊತ್ತಿಲ್ಲ. ಇಲಾಖೆಯಲ್ಲಿ ಅನೇಕ ಯೋಜನೆಗಳು ಜಾರಿಗೆ ಬಂದಿದ್ದರು ಅವುಗಳ ಮಾಹಿತಿ ನಮಗೆ ನೀಡುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ವೆಂಕಟೇಶಮೂರ್ತಿ ವಿರುದ್ಧ ಶಾಸಕ ಬಿ.ಜಿ.ಗೋವಿಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆಯಲ್ಲಿನ ಯೋಜನೆ ನನ್ನ ಗಮನಕ್ಕೆ ಬಾರದಂತೆ ನಿಮಗಿಷ್ಟ ಬಂದಂತೆ ಜಾರಿ ಗೊಳಿಸಲಾಗುತ್ತಿದೆ. ನಿಮ್ಮ ನಿವೃತ್ತಿ ಕೇವಲ ಇನ್ನೊಂದು ವರ್ಷ ಇರುವ ಕಾರಣ ನಾನು ಸುಮ್ಮನೆ ಸಹಿಸಿಕೊಂಡಿದ್ದೇನೆ ಇಲ್ಲವಾದರೆ ನಿಮ್ಮನ್ನೇ ಆಟವಾಡಿಸುತ್ತಿದ್ದೆ ಎಂದು ಅಧಿಕಾರಿ ವಿರುದ್ಧ ಗರಂ ಆದರು.

ಗುತ್ತಿಗೆದಾರರ ವಿಷ ವರ್ತುಲದಲ್ಲಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ರೈತರು ಯಾವುದೇ ಕ್ಷಣದಲ್ಲಿ ಅಧಿಕಾರಿಗಳ ವಿರುದ್ಧ ಮುಗಿ ಬೀಳಬಹುದು. ಲೋಕಾಯುಕ್ತ ತನಿಖೆಯು ಆಗುತ್ತದೆ ಇದರಿಂದ ಯಾವ ರೀತಿ ಹೊರಗೆ ಬರುತ್ತಿರ ನೋಡಿಕೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರ ಆಪ್ತ ಸಹಾಯಕನಿಂದ ಪ್ರಶ್ನೆ!

ತೋಟಗಾರಿಕಾ ಇಲಾಖೆ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆ ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸುವ ಸಂದರ್ಭದಲ್ಲಿ ಅವರ ಆಪ್ತ ಸಹಾಯಕ ರಂಗನಾಥ್ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯುವುದರ ಜೊತೆಗೆ ಅವರೊಂದಿಗೆ ಚರ್ಚೆಗೆ ಮುಂದಾದ ಇದನ್ನು ಮಾಧ್ಯಮದವರು ಗಮನಿಸುತ್ತಿರುವುದನ್ನು ಗಮನಿಸಿದ ಶಾಸಕರು ತಮ್ಮ ಆಪ್ತ ಸಹಾಯಕನಿಗೆ ಸುಮ್ಮನೆ ಕೂರುವಂತೆ ಸೂಚಿಸಿದ ಘಟನೆ ನಡೆಯಿತು.

ಬರುವ ಬೇಸಿಗೆಯೊಳಗೆ ತಾಲೂಕಿನ ಎಲ್ಲಾ ಕೆರೆಗಳಿಗೂ ಭದ್ರಾ ನೀರು ಹರಿಯಬೇಕು. ಈ ನಿಟ್ಟಿನಲ್ಲಿ ಬೆಸ್ಕಾಂ ಹಾಗೂ ಭದ್ರ ಇಲಾಖೆ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು.

ಬಿ.ಜಿ.ಗೋವಿಂದಪ್ಪ ಶಾಸಕರು ಹೊಸದುರ್ಗ