ಶಿವಕುಮಾರ ಕುಷ್ಟಗಿ

ಗದಗ: "ಸರಿಯಾದ ಸಮಯದಲ್ಲಿ ಆಸ್ಪತ್ರೆ ತಲುಪಲಾಗದೆ ಎಷ್ಟೋ ಗರ್ಭಿಣಿಯರಿಗೆ ಗರ್ಭಪಾತಗಳಾಗಿವೆ. ನಮ್ಮ ಗ್ರಾಮದಲ್ಲಿ ಆಗುತ್ತಿರುವ ಹೆಚ್ಚಿನ ಗರ್ಭಪಾತಗಳಿಗೆ ಹದಗೆಟ್ಟ ರಸ್ತೆಗಳ ಅವ್ಯವಸ್ಥೆಯೇ ಕಾರಣ. ರಸ್ತೆ ಇಲ್ಲದ್ದಕ್ಕೆ ಅದೆಷ್ಟೋ ಜೀವಗಳು ಹೋಗುತ್ತಿವೆ. ಇನ್ನು ಎಷ್ಟು ದಿನ ನಾವು ಈ ನರಕ ಅನುಭವಿಸಬೇಕು ಸರ್? "

ಶುಕ್ರವಾರ ಇಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಾಲ್ಕೈದು ಜನ ಯುವಕರು ಹೀಗೆ ಹದಗೆಟ್ಟ ರಸ್ತೆಯ ಅವಾಂತರವನ್ನು ಹೀಗೆ ಬಿಚ್ಚಿಟ್ಟಾಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ್‌ ಕ್ಷಣಕಾಲ ಮೌನಕ್ಕೆ ಶರಣಾದರು. ಅಧಿಕಾರಿಗಳು ಅಕ್ಷರಶಃ ತಬ್ಬಿಬ್ಬಾದರು.

​ಶಿಗ್ಲಿ ಗ್ರಾಮವು ಜಿಲ್ಲೆಯ ಗಡಿಯಲ್ಲಿದ್ದರೂ ಶೈಕ್ಷಣಿಕವಾಗಿ ಅತ್ಯಂತ ಸುಶಿಕ್ಷಿತ ಗ್ರಾಮ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, ಕಳೆದ 40 ವರ್ಷಗಳಿಂದ ಇಲ್ಲಿನ ರಸ್ತೆ ಅಭಿವೃದ್ಧಿಯ ಮುಖ ಕಂಡಿಲ್ಲ ಎಂದಾಗ ​ತಕ್ಷಣ ಎಚ್ಚೆತ್ತ ಸಚಿವರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮದ ಶಿರಸಂಗಿ ಲಿಂಗರಾಜ ವೃತ್ತದಿಂದ ನಾಯಕನೂರ ಮತ್ತು ದೊಡ್ಡೂರು ಕ್ರಾಸ್‌ ವರೆಗಿನ ರಸ್ತೆ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಒಂದ್ ಗಾಡಿ ಕೊಡಸ್ರಿ: ​ವಿಶೇಷಚೇತನ ವ್ಯಕ್ತಿಯೊಬ್ಬರು, ಹೋದ ವರ್ಷ ಕೊಟ್ಟ ಬ್ಯಾಟರಿ ಗಾಡಿ ಆಗಾಗ ಪಂಚರ್ ಆಗತದ. ಅದರಲ್ಲಿ ಟ್ಯೂಬ್ ಇಲ್ಲ, ಅದು ನನಗೆ ಹೊಂದುತ್ತಿಲ್ಲ ಎಂದು ಕಣ್ಣೀರಿಡುತ್ತಾ ಹೊಸ ತ್ರಿಚಕ್ರ ವಾಹನಕ್ಕಾಗಿ ಬೇಡಿಕೊಂಡರು. ​ಸಚಿವರು ಆರಂಭದಲ್ಲಿ ವರ್ಷಕ್ಕೊಂದು ಗಾಡಿ ಕೊಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರಾದರೂ, ಆ ವ್ಯಕ್ತಿಯ ಅಸಹಾಯಕತೆ ಕಂಡಾಗ ಮನ ಕರಗಿ, ನೀನು ಬಹಳ ಶಾಣ್ಯಾ ಇದ್ದಿ. ಹೋಗು ಅಧಿಕಾರಿಗಳಿಗೆ ಹೇಳಿ ಪರಿಶೀಲಿಸುತ್ತೇನೆ ಎಂದು ಸಮಾಧಾನಪಡಿಸಿದರು. ಸಮಸ್ಯೆಗಳ ಸುರಿಮಳೆ: ​ಜನತಾ ದರ್ಶನದಲ್ಲಿ ಸಾರ್ವಜನಿಕರು, ಗ್ರಾಮಗಳು ಸಮಸ್ಯೆಗಳ ಅರ್ಜಿಗಳು ಬರುವುದು ಸಾಮಾನ್ಯ. ಆದರೆ ಶುಕ್ರವಾರ ಗದಗ ನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಸ್ತೆಗಳು ಮಾತ್ರವಲ್ಲದೆ, ಜನರ ದೈನಂದಿನ ಬದುಕಿನ ಹಲವು ವ್ಯಥೆಗಳು ಹೊರಬಂದಿದ್ದು ವಿಶೇಷವಾಗಿತ್ತು. ಅದರಲ್ಲಿಯೂ ಗ್ಯಾರಂಟಿ ಸಾಧನೆಗಳ ಬಗ್ಗೆ ಸರ್ಕಾರ ವ್ಯಾಪಕವಾಗಿ ಮಾತನಾಡುತ್ತಿದೆ. ಇದೇ ಸಂದರ್ಭದಲ್ಲಿ ಮಹಿಳೆಯೋರ್ವಳು ​ರೇಷನ್ ಕಾರ್ಡ್ ತೊಂದರೆಯಿಂದಾಗಿ ನನಗೆ ಪಡಿತರ ಆಹಾರ ಧಾನ್ಯಗಳು ಬರುತ್ತಿಲ್ಲ, ಅದನ್ನು ಸರಿಪಡಿಸಿ ಎಂದು ಮನವಿ ಸಲ್ಲಿಸಿದ್ದು, ಮನೆ ನಿರ್ಮಾಣಕ್ಕೆ ಬರಬೇಕಾದ ಸರ್ಕಾರಿ ಸಹಾಯಧನದ ವಿಳಂಬವಾಗುತ್ತಿರುವುದು, ವೃದ್ಧಾಪ್ಯ ವೇತನ ಮಂಜೂರಾತಿಗಾಗಿ ವಯೋವೃದ್ಧರ ವಿವಿಧ ಅರ್ಜಿಗಳ ಜತೆಗೆ ಗದಗ, ಬೆಟಗೇರಿ ಅವಳಿ ನಗರದ ವಾರ್ಡ್‌ಗಳಲ್ಲಿನ ನೈರ್ಮಲ್ಯ ಹಾಗೂ ಬಸ್ ಸೌಲಭ್ಯದ ಕೊರತೆ ಸೇರಿದಂತೆ ವೈಯಕ್ತಿಕ ಸಮಸ್ಯೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಕಂಡುಬಂದಿತು.


ಕಾರ್ಯಕ್ರಮವು ಕೇವಲ ಅರ್ಜಿಗಳ ವಿಲೇವಾರಿಗೆ ಸೀಮಿತವಾಗದೆ, ದಶಕಗಳ ಕಾಲದ ಆಕ್ರೋಶ, ನೋವು ಮತ್ತು ಹತಾಶೆಯ ಪ್ರತಿಧ್ವನಿಗೂ ಸಾಕ್ಷಿಯಾಯಿತು.