ಸಾರಾಂಶ
ಬೆಳೆ ನಾಶವಾಗಿರುವ ರೈತರಿಗೆ ಕಂಪನಿಯವರಿಂದಲೇ ಕೃಷಿ ಇಲಾಖೆಯವರು ಪ್ರತಿ ಎಕರೆಗೆ ೫೦ ಸಾವಿರ ರು. ಪರಿಹಾರ ಕೊಡಿಸಬೇಕು ಹಾಗೂ ಹಾಸನ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಹೆಸರನ್ನು ಅವರ ಅನುಮತಿ ಇಲ್ಲದೆ ಬಳಸಿಕೊಂಡು ಕರಪತ್ರವನ್ನು ಮುದ್ರಿಸಿ, ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಿರುವ ಬಿತ್ತನೆ ಬೀಜದ ಹೈಟೆಕ್ ಕಂಪನಿ ಮತ್ತು ಏಜೆನ್ಸಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು.
ಕನ್ನಡಪ್ರಭ ವಾರ್ತೆ ಹಾಸನ
ಈ ಮುಂಗಾರಿನಲ್ಲಿ ಜಿಲ್ಲೆಯ ರೈತರಿಗೆ ಕಳಪೆ ಬಿತ್ತನೆ ಬೀಜಗಳ ಪೂರೈಕೆ ಆಗಿದೆ, ಇದರಿಂದ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ. ಬಿತ್ತನೆ ಬೀಜ ಪೂರೈಕೆ ಬಗ್ಗೆ ಗಮನಹರಿಸಬೇಕಿದ್ದ ಸರ್ಕಾರ ಹಾಗೂ ಇಲಾಖೆ ತನ್ನ ಹೊಣೆಗಾರಿಕೆ ನಿರ್ವಹಿಸುವಲ್ಲಿ ವಿಫಲವಾಗಿದೆ. ಹಾಗಾಗಿ ರೈತರಿಗೆ ಆಗಿರುವ ನಷ್ಟವನ್ನು ಸರ್ಕಾರ ತುಂಬಿಕೊಡಬೇಕೆಂದು ಆಗ್ರಹಿಸಿ, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ನಕಲಿ ಬೀಜ ಪೂರೈಸಿದ ಕಂಪನಿಗಳ ಪ್ರತಿಕೃತಿ ದಹಿಸಿ, ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ನಕಲಿ ಕಂಪನಿಗಳ ಪ್ರತಿಕೃತಿಯನ್ನು ಹೆಗಲು ಮೇಲೆ ಹೊತ್ತುಕೊಂಡು ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ಸಂತೇಪೇಟೆ ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿ ಪ್ರತಿಕೃತಿ ಸುಟ್ಟು ಹಾಕಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗಂಗಾಧರ್ ಮಾತನಾಡಿ, ಉತ್ತಮ ಮಳೆಯಾಗಿ ಜೂನ್ ತಿಂಗಳಲ್ಲೇ ಜಲಾಶಯಗಳು ಭರ್ತಿಯಾಗಿವೆ, ರಾಜ್ಯದಲ್ಲಿ ಉತ್ತಮ ಬಿತ್ತನೆಯಾಗಿದೆ. ಆದರೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಬೀಜ ಸಂಬಂಧಿತ ಕಾಯಿದೆ ಪರಿಪಾಲನೆ ಮಾಡುವಲ್ಲಿ ಸೋತಿದೆ, ಅಧಿಕೃತವಾಗಿ ಸರ್ಕಾರದ ಬಿಡ್ಡಿಗೆ ಮತ್ತು ಕೃಷಿ ಇಲಾಖೆಗೆ ಸರಬರಾಜು ಮಾಡದೆ ಇರುವ ಕಂಪನಿಗಳ ಜೊತೆ ಕೃಷಿ ನಿರ್ದೇಶಕರು ಶಾಮಿಲಾಗಿ ರೈತರಿಗೆ ಕಳಪೆ ಬೀಜ ನೀಡಿದ್ದಾರೆಂದು ಆರೋಪಿಸಿ, ಕಂಪನಿಯವರು ರೈತರಿಗೆ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ನಷ್ಟವನ್ನು ತುಂಬಿಕೊಡಬೇಕು. ಸಾಮೂಹಿಕವಾಗಿ ರೈತರಿಗೆ ಜಿಲ್ಲಾಡಳಿತ ವತಿಯಿಂದ ಉಚಿತವಾಗಿ ಬೆಳೆ ವಿಮೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಕೃಷಿ ಇಲಾಖೆಯವರ ಹೆಸರು ಬಳಸಿಕೊಂಡು ಕಳಪೆ ಬೀಜದ ಪ್ರಚಾರದಲ್ಲಿ ತೊಡಗಿರುವರ ವಿರುದ್ಧ ಮೊಕದ್ದಮೆ ದಾಖಲಿಸಿ ಮತ್ತು ಕೃಷಿ ಇಲಾಖೆಗೆ ಸರಬರಾಜು ಮಾಡದೆ ಇರುವ ಕಂಪನಿಯವರನ್ನು ಅಂಗಡಿ ಮುಖಾಂತರ ಮಾರುವುದನ್ನು ನಿರ್ಬಂಧಿಸಬೇಕು. ಬೆಳೆ ಸಮೀಕ್ಷೆಯನ್ನು ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜೊತೆಗೂಡಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ನಡೆಸಿ, ವರದಿಯನ್ನು ಜಿಲ್ಲಾಡಳಿತಕ್ಕೆ ಮಂಡಿಸಬೇಕು ಎಂದು ಒತ್ತಾಯಿಸಿದರು.
ಬೆಳೆ ನಾಶವಾಗಿರುವ ರೈತರಿಗೆ ಕಂಪನಿಯವರಿಂದಲೇ ಕೃಷಿ ಇಲಾಖೆಯವರು ಪ್ರತಿ ಎಕರೆಗೆ ೫೦ ಸಾವಿರ ರು. ಪರಿಹಾರ ಕೊಡಿಸಬೇಕು ಹಾಗೂ ಹಾಸನ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಹೆಸರನ್ನು ಅವರ ಅನುಮತಿ ಇಲ್ಲದೆ ಬಳಸಿಕೊಂಡು ಕರಪತ್ರವನ್ನು ಮುದ್ರಿಸಿ, ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಿರುವ ಬಿತ್ತನೆ ಬೀಜದ ಹೈಟೆಕ್ ಕಂಪನಿ ಮತ್ತು ಏಜೆನ್ಸಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದ ಮಂಡಳಿಯ ಸದಸ್ಯ, ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ತಿಪಟೂರು ಜಯಚಂದ್ರ ಶರ್ಮ, ಮೈಸೂರಿನ ಕಿರಣ್, ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ, ಗ್ಯಾರಂಟಿ ರಾಮಣ್ಣ, ಮಂಜು ಬಿಟ್ಟಗೌಡನಹಳ್ಳಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮರ್ಕುಲಿ ಪ್ರಕಾಶ್, ಹಾಸನ ತಾಲೂಕು ಅಧ್ಯಕ್ಷ ಬಿಟ್ಟಗೌಡನಹಳ್ಳಿ ಮಂಜುನಾಥ್, ಪಾಲಾಕ್ಷ ಮಾರನಹಳ್ಳಿ, ಶಿವಕುಮಾರ್ ಹಳೇಬೀಡು, ಶೇಷಣ್ಣ, ಕಾಂತರಾಜು ಇತರರು ಉಪಸ್ಥಿತರಿದ್ದರು.