ಕಳಪೆ ಕಾಮಗಾರಿ: ರಸ್ತೆ ದುರಸ್ತಿಗೆ ಆಗ್ರಹ

| Published : Apr 24 2025, 11:50 PM IST

ಸಾರಾಂಶ

ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಹೋಗಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ರಸ್ತೆಯಲ್ಲಿನ ಗುಂಡಿಗೆ ಇಳಿಸಿದರೆ ಪಂಕ್ಚರ್‌ ಆಗಿ ನಿಲ್ಲುತ್ತಿವೆ. ದೊಡ್ಡ ಗಾತ್ರದಲ್ಲಿ ಗುಂಡಿಬಿದ್ದಿದ್ದರು ಸಹ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ಹೃದಯಭಾಗದ ಮಧುಗಿರಿ ರಸ್ತೆಯಲ್ಲಿ ಸಾರ್ವಜನಿಕರು ಜೀವ ಹಿಡಿದು ರಸ್ತೆಯಲ್ಲಿ ಸಾಗುವ ಪರಿಸ್ಥಿತಿ ಉಂಟಾಗಿದ್ದು, ವಾಹನ ಸವಾರರು ಸಂಕಷ್ಟದಲ್ಲಿ ವಾಹನ ಚಲಾಯಿಸುವಂತಾಗಿದ್ದು, ಈ ದುರವಸ್ಥೆ ವಿರುದ್ಧ ಮನದಲ್ಲೇ ಶಪಿಸುತ್ತಿದ್ದಾರೆ.ಮುಖ್ಯರಸ್ತೆಯ ಕಾಮಗಾರಿ ಮುಗಿದು ಕೇವಲ 2 ವರ್ಷ ಕಳೆಯುಷ್ಟರಲ್ಲಿ ರಸ್ತೆ ಕಿತ್ತುಹೋಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿದ್ರಾವಸ್ಥೆಯಿಂದ ಹೊರಬಂದು ರಸ್ತೆ ಸುಧಾರಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದರು.ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಹೋಗಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ರಸ್ತೆಯಲ್ಲಿನ ಗುಂಡಿಗೆ ಇಳಿಸಿದರೆ ಪಂಕ್ಚರ್‌ ಆಗಿ ನಿಲ್ಲುತ್ತಿವೆ. ದೊಡ್ಡ ಗಾತ್ರದಲ್ಲಿ ಗುಂಡಿಬಿದ್ದಿದ್ದರು ಸಹ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲವೆಂದು ನಾಗರಿಕರು ಕಿಡಿಕಾರಿದರು.

ಮತ್ತೊಂದೆಡೆ ನಗರದ ಎನ್.ಸಿ.ನಾಗಯ್ಯರೆಡ್ಡಿ ವೃತ್ತದಲ್ಲಿ ಪೈಪ್‌ಲೈನ್‌ ಕಾಮಗಾರಿಗೆಂದೇ ರಸ್ತೆಯ ಮಧ್ಯದಲ್ಲಿ ಅಗೆದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಬೈಕ್‌ ಸವಾರನೊಬ್ಬ ಬಿದ್ದು ಕೇವಲ ಗಾಯಗೊಂಡಿದ್ದಾನೆ. ಆದ್ದರಿಂದ ಈ ರಸ್ತೆಯಲ್ಲಿ ಚಲಿಸುವುದು ಅಪಾಯ ಮೈಮೇಲೆ ಎಳೆದು ಕೊಳ್ಳುವುದು ಒಂದೇ ಎಂಬ ಸ್ಥಿತಿ ನಿರ್ಮಾಣವಾಗಿದೆ.ರಸ್ತೆಯಲ್ಲಿ ಜಲ್ಲಿಕಲ್ಲುಗಳಿದ್ದು ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಅಪಘಾತಗಳು ಸಾಮಾನ್ಯವಾಗಿವೆ. ಬೃಹತ್‌ ಕಲ್ಲುಗಳು ರಸ್ತೆಯಲ್ಲಿದ್ದು ವೃದ್ಧರು ಈ ರಸ್ತೆಗಳಲ್ಲಿ ಸಂಚಾರ ಮಾಡಲು ಪರದಾಡುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಜನರು ಪರಿತಪಿಸುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಈ ಕಡೆ ತಿರುಗಿ ನೋಡುತ್ತಿಲ್ಲ.ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಒಳಗೊಂಡಂತೆ ಅನೇಕ ಶಾಲಾ ಕಾಲೇಜಿನ ವಾಹನಗಳು ಸಂಚರಿಸುತ್ತವೆ. ರಸ್ತೆ ಮಧ್ಯ ಅಗಲವಾದ ಗುಂಡಿಗಳೂ ನಿರ್ಮಾಣ ಆಗಿರುವುದರಿಂದ ಅಪಾಯ ಕಟ್ಟಿಕೊಂಡು ವಾಹನ ಚಾಲನೆ ಮಾಡಬೇಕಾಗಿದೆ.ಬಾಕ್ಸ್‌.......

ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ಅಗತ್ಯ

ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ ಅಗತ್ಯ, ನಗರಸಭೆ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ತ್ವರಿತವಾಗಿ ಸ್ಪಂದಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ. ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು ರಸ್ತೆ ಮೇಲೆ ಸರ್ಕಸ್‌ ಮಾಡುವಂತಾಗಿದೆ. ಜನಪ್ರತಿನಿಧಿ ಅಧಿಕಾರಿಗಳು ರಸ್ತೆ ಸುಧಾರಣೆಗೆ ಮುಂದಾಗಬೇಕು.