ಕಳಪೆ ಕಾಮಗಾರಿಗೆ ನನ್ನ ಕ್ಷೇತ್ರದಲ್ಲಿ ಅವಕಾಶ ಇಲ್ಲ: ಶಾಸಕ ಮುನಿರಾಜು

| Published : Jan 30 2024, 02:00 AM IST

ಸಾರಾಂಶ

ಕಳಪೆ ಕಾಮಗಾರಿಗೆ ನನ್ನ ಕ್ಷೇತ್ರದಲ್ಲಿ ಅವಕಾಶ ಇಲ್ಲ: ಶಾಸಕ ಮುನಿರಾಜು. ದಾಸರಹಳ್ಳಿಯ 8 ರಸ್ತೆಗಳ ಮರು ಡಾಂಬರೀಕರಣಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ‌

ಕ್ಷೇತ್ರದ ಕಿರ್ಲೋಸ್ಕರ್‌ ಬಡಾವಣೆಯ 8 ರಸ್ತೆಗಳಲ್ಲಿ ಕೈಗೊಳ್ಳಲಾಗಿದ್ದ ಡಾಂಬರೀಕರಣದ ಕಳಪೆ ಎಂಬುದನ್ನು ಪತ್ತೆ ಹಚ್ಚಿದ್ದ ಶಾಸಕ ಎಸ್‌.ಮುನಿರಾಜು, ಕಾಮಗಾರಿಗೆ ತಡೆ ನೀಡಿದ್ದರು. ಈಗ ಮತ್ತೆ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಮೊದಲು ಕಿರ್ಲೋಸ್ಕರ್ ಬಡಾವಣೆಯಲ್ಲಿ ಸುಮಾರು 8 ರಸ್ತೆಗಳಿಗಲ್ಲಿ ಕಳಪೆ ಕಾಮಗಾರಿ ಮಾಡಲಾಗಿತ್ತು. ಚುನಾವಣೆಯ ಬಳಿಕ ಶಾಸಕ ಎಸ್‌.ಮುನಿರಾಜು ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಹಾಕಿದ್ದ ಡಾಂಬರನ್ನು ಕಿತ್ತು ಅಧಿಕಾರಿಯ ಕೈಗೆ ಕೊಟ್ಟಿದ್ದರು. ಈ ಕಾಮಗಾರಿಗೆ ನೀಡುವ ಬಿಲ್‌ ಅನ್ನು ತಡೆ ಹಿಡಿಯಬೇಕು ಎಂದು ತಾಕೀತು ಮಾಡಿದ್ದರು. ಕಳಪೆ ರಸ್ತೆಯ ಬಗ್ಗೆ ‘ಕನ್ನಡಪ್ರಭ’ 2023ರ ಜುಲೈ 30ರಂದು ‘ಕಳಪೆ ಕಾಮಗಾರಿ: ರಸ್ತೆಯ ಟಾರು ಕಿತ್ತು ಅಧಿಕಾರಿ ಕೈಗೆ ಕೊಟ್ಟ ಶಾಸಕ!’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಗುತ್ತಿಗೆದಾರನಿಗೆ ಬಿಲ್‌ ನೀಡಲು ತಡೆ ನೀಡಲಾಗಿತ್ತು.

ಸೋಮವಾರ ಕಿರ್ಲೋಸ್ಕರ್‌ ಬಡಾವಣೆಯ ರಸ್ತೆಗೆ ಮರು ಡಾಂಬರೀಕರಣಕ್ಕೆ ಶಾಸಕ ಎಸ್‌.ಮುನಿರಾಜು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗೆ ಅವಕಾಶವಿಲ್ಲ, ಯಾವುದೇ ಕಾರಣಕ್ಕೂ ಗುಣಮಟ್ಟದ ಕಾಮಗಾರಿ ಇಲ್ಲದೆ ಹೋದರೆ ಬಿಲ್ ತಡೆಹಿಡಿಯುತ್ತೇನೆ. ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ನಾನು ಸೂಚನೆ ಕೊಟ್ಟು ನಾಲ್ಕು ತಿಂಗಳಾಗಿತ್ತು. ಅವರು ಬಿಲ್ ಮಾಡಿಕೊಳ್ಳುವ ಪ್ರಯತ್ನ ಫಲ ಕೊಡದೇ ಅಂತಿಮವಾಗಿ ಡಾಂಬರೀಕರಣ ಮಾಡುತ್ತಿದ್ದಾರೆ. ಹಲವು ಕಾಮಗಾರಿಗಳಲ್ಲಿ ಹಿಂದೆ ಅಕ್ರಮ ನಡೆದಿದ್ದು, ಅವುಗಳಲ್ಲಿ ಕೆಲವನ್ನು ಲೋಕಾಯುಕ್ತರು ಪರಿಶೀಲನೆ ಮಾಡಿ ಹೋಗಿದ್ದಾರೆ. ಇನ್ನೂ ಕೆಲವು ನಾಗಮೋಹನ್ ದಾಸ್ ಕಮಿಟಿಯಲ್ಲಿ ತನಿಖೆ ನಡೆಯುತ್ತಿದೆ. ಗುಣಮಟ್ಟದ ಕಾಮಗಾರಿ ಮಾಡಿ ಬಿಲ್ ಪಡೆಯಲಿ. ಕಳಪೆ ಕಾಮಗಾರಿ ಮಾಡಲು ಎಂದಿಗೂ ಬಿಡುವುದಿಲ್ಲ ಎಂದರು.

ಮುಖಂಡರಾದ ಆನಂದ್ ರೆಡ್ಡಿ, ಎಚ್‌.ಎಸ್‌.ಮಂಜುನಾಥ, ಅಧಿಕಾರಿ ವೆಂಕಟೇಶ್, ಗುತ್ತಿಗದಾರ ಚಿಕ್ಕಲಕ್ಕಣ್ಣ ಉಪಸ್ಥಿತರಿದ್ದರು.