ಸಾರಾಂಶ
ಕನ್ನಡಭ ವಾರ್ತೆ ಶ್ರೀಮಂಗಲ
ಹಣ ದುಂದು ವೆಚ್ಚ ಮಾಡಲು ಹಾಗೂ ಕಳಪೆ ಕಾಮಗಾರಿ ಮಾಡಲು ಎಂದಿಗೂ ಅವಕಾಶ ನೀಡುವುದಿಲ್ಲ, ಹಾಗೆಯೇ ಅನುದಾನದ ದುರ್ಬಳಕೆ ಆಗಲು ಏನೇ ಆದರೂ ಬಿಡುವುದಿಲ್ಲ ಎಂದು ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಹೇಳಿದ್ದಾರೆ.ಬಿರುನಾಣಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಹೆಚ್ಚು ಪ್ರೀತಿ, ವಿಶ್ವಾಸದ ಸಂಬಂಧದಿಂದ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ. ಅಂತಹ ಸಂಬಂಧವನ್ನು ನಾವು ಜಿಲ್ಲೆಯಲ್ಲಿ ಬೆಳೆಸೋಣ. ಜಿಲ್ಲೆಯಲ್ಲಿ ಬಡತನ, ಶಿಕ್ಷಣ, ಕುಡಿಯುವ ನೀರು, ರಸ್ತೆ ಹಾಗೂ ಮೂಲಭೂತ ಸಮಸ್ಯೆಗಳನ್ನುಸರಿಪಡಿಸಲು ಪ್ರಾಮಾಣಿಕವಾದ ಪ್ರಯತ್ನ ನಡೆಸುವುದಾಗಿ ಹೇಳಿದರು.
ಜಿಲ್ಲೆಯ ವಿದ್ಯುತ್ ಸಮಸ್ಯೆ ನಿವಾರಣೆಗೆ ಉಪ ವಿದ್ಯುತ್ ಸರಬರಾಜು ಕೇಂದ್ರಗಳನ್ನು ರು. 112 ಕೋಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಬಾಳೆಲೆ,ಹುದಿಕೇರಿ, ಸಿದ್ದಾಪುರ, ಮುರ್ನಾಡುಗಳಲ್ಲಿ ಟೆಂಡರ್ ಆಗಿದೆ. ಭಾಗಮಂಡಲ, ಕಾಟಗೇರಿ, ಹೊಸೂರು ಕಳತ್ಮಾಡು, ಸಂಪಾಜೆಗಳಿಗೆ ಇನ್ನೆರಡು ತಿಂಗಳಲ್ಲಿ ಟೆಂಡರ್ ಆಗುತ್ತದೆ. ವಿದ್ಯುತ್ ಉನ್ನತೀಕರಣಕ್ಕೆ ಜಿಲ್ಲೆಗೆ 208 ಕೋಟಿ ರು. ಮಂಜೂರಾಗಿದೆ ಎಂದು ತಿಳಿಸಿದರು.ಪೊನ್ನಂಪೇಟೆ ನೂತನ ತಾಲೂಕು ನಾವು ಅಧಿಕಾರಕ್ಕೆ ಬರುವ ಮೊದಲೇ ಆದರೂ ಯಾವುದೇ ಮೂಲಭೂತ ಸೌಲಭ್ಯ ಮಾಡಿರಲಿಲ್ಲ. ಇದೀಗ ತಾಲೂಕು ಸೌಧ ನಿರ್ಮಾಣಕ್ಕೆ 10 ಕೋಟಿ ರು. ಅನುದಾನ ತಂದಿದ್ದೇವೆ ಎಂದರು.
ಭಾಗಮಂಡಲ ಮೇಲ್ಸೇತುವೆಗೆ ನಮ್ಮ ಸರ್ಕಾರವೇ ಹಣ ಮಂಜೂರು ಮಾಡಿ ಚಾಲನೆ ನೀಡಿತ್ತು. ಆದರೆ ಅದರಲ್ಲಿ ರಾಜಕಾರಣ ಮಾಡಿ ಕಾಮಗಾರಿ ಮಾಡದೆ ಇದೀಗ ನಮ್ಮ ಸರ್ಕಾರ ಬಂದ ನಂತರ ಆ ಕಾಮಗಾರಿ ಪೂರ್ಣಗೊಳಿಸಿದೆ ಎಂದು ತಿಳಿಸಿದರು.ಹಿಂದಿನ ಬಿಜೆಪಿ ಸರ್ಕಾರ ಹಾಗೂ 20 ವರ್ಷಗಳಿಂದ ಅಧಿಕಾರ ನಡೆಸಿದವರು ಏನು ಮಾಡಿದ್ದಾರೆ ಎಂದು ಟೀಕಿಸಿದರು.
ನಮಗೆ ಸಿಕ್ಕಿರುವ ಒಂದುವರೆ ವರ್ಷ ಅವಧಿ, ಇದರಲ್ಲಿ ಮೂರು ತಿಂಗಳು ಲೋಕಸಭಾ ಚುನಾವಣೆಗೆ ಹೋಗಿದೆ. ನಾವು ಸಿಂಗಾಪುರ ಮಾಡುತ್ತೇವೆ ಎಂದು ಹೇಳುವುದಿಲ್ಲ. ಆದರೆ ನಮ್ಮ ಕ್ಷೇತ್ರದ ಎಲ್ಲಾ ಜನ, ಜಾತಿ- ಜನಾಂಗದ ಹಾಗೂ ಎಲ್ಲಾ ಭಾಗಗಳ ಸಮಸ್ಯೆಗೆ ಸ್ಪಂದಿಸಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.ಗೋಣಿಕೊಪ್ಪ, ಪೊನ್ನಂಪೇಟೆ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ತಂದಿದ್ದೇವೆ, ಇದಕ್ಕೂ ಸಹ ಅನುದಾನ ತರುತ್ತೇವೆ. ಪಾದಚಾರಿ ರಸ್ತೆ, ದಾರಿದೀಪ ಉದ್ಯಾನವನ ಮಾಡುತ್ತೇವೆ. ರು. 15 ಕೋಟಿಗಿಂತ ಹೆಚ್ಚು ಡಾರ್ಟ್ ಸಂಸ್ಥೆಯಿಂದ ವಿರಾಜಪೇಟೆ ಪುರಸಭೆಗೆ ತಂದಿದ್ದೇವೆ. ಇದಲ್ಲದೆ ರು. 58 ಕೋಟಿ ಅನುದಾನದಲ್ಲಿ ಕುಡಿಯುವ ನೀರು ಯೋಜನೆ ಬೇತ್ರಿ ಕಾವೇರಿ ನದಿಯಿಂದ ಸಂಗ್ರಹಿಸಿ ಕದನೂರಿನಲ್ಲಿ ಟ್ರೀಟ್ಮೆಂಟ್ ಪ್ಲಾಂಟ್ ಹಾಕಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕ್ ಗಳನ್ನು ನಿರ್ಮಿಸುತ್ತಿದ್ದೇವೆ. ಇದರಿಂದ ಪಟ್ಟಣದ 24 ಸಾವಿರ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದು ಜನರು ಶಾಸಕರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಪೇಟೆ ತಾಲೂಕು ಬಗರ್ ಹುಕುಂ ಸಕ್ರಮೀಕರಣ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಬಿರುನಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣಮಾಡ ಪ್ರೀತಮ್, ತಾ. ಪಂ. ಮಾಜಿ ಸದಸ್ಯ ಬೊಳ್ಳೇರ ಪೊನ್ನಪ್ಪ ಹಾಜರಿದ್ದರು.