ಸಾರಾಂಶ
ರೈತರಿಗೆ ಪರಿಹಾರ ಇಲ್ಲ । ಪೈಪ್‌ಲೈನ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿತಾಲೂಕಿನ ರಾಜವಾಳ ಗ್ರಾಮದ ವ್ಯಾಪ್ತಿಯ ತುಂಗಭದ್ರಾ ನದಿಯಿಂದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಕಳಪೆಯಾಗಿದ್ದು, ಜತೆಗೆ ರೈತರ ಬೆಳೆ ಹಾನಿ ಮಾಡಿ ದೌರ್ಜನ್ಯ ಎಸಗಿ, ಪೈಪ್‌ಲೈನ್ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ರೈತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಎಐಟಿಯುಸಿ ಮುಖಂಡ ಸುರೇಶ ಹಲಗಿ ಮಾತನಾಡಿ, ಕೂಡ್ಲಿಗಿಯ 74 ಕೆರೆ ತುಂಬಿಸುವ ಯೋಜನೆಗಾಗಿ ಭೂ ಸ್ವಾಧೀನ ಮಾಡಿಕೊಂಡಿರುವ ರೈತರಿಗೆ ತಿಳುವಳಿಕೆಯ ಪತ್ರ ನೀಡದೇ, ಕಾನೂನು ಬಾಹಿರವಾಗಿ ಜೆಸಿಬಿಯನ್ನು ಹೊಲಕ್ಕೆ ನುಗ್ಗಿಸಿ, ಪೊಲೀಸರ ದರ್ಪದಿಂದ ಅಕ್ರಮವಾಗಿ ರೈತರ ಬೆಳೆಗಳನ್ನು, ಹಾನಿ ಮಾಡಿ ಪೈಪ್‌ಲೈನ್ ಮಾಡುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ತಾಲೂಕಿನ ರಾಜವಾಳ ಗ್ರಾಮದ ತುಂಗಭದ್ರ ನದಿ ತೀರದಲ್ಲಿ ಪೈಪ್‌ಹೌಸ್ ನಿರ್ಮಾಣ ಮಾಡಿದ್ದು, ಹೊನ್ನೂರು, ಹಾಲ್ ತಿಮ್ಲಾಪುರ, ತಿಪ್ಪಾಪುರ, ಹೂವಿನಹಡಗಲಿ. ಹನುಕನಹಳ್ಳಿ, ದೇವಗೊಂಡನಹಳ್ಳಿ, ಹುಗಲೂರು, ಸೋಗಿ, ಅಡವಿ ಮಲ್ಲನಕೆರೆ ಗ್ರಾಮಗಳಲ್ಲಿ ಪೈಪ್‌ಲೈನ್ ಕಾಮಗಾರಿ ಹಾಯ್ದು ಹೋಗುತ್ತಿದೆ. ಯೋಜನೆಗಾಗಿ ₹619,42,61,240 ಮೊತ್ತದಲ್ಲಿ ಈಗಾಗಲೇ ₹371,75,6,725 ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿದೆ. 2021 ರಲ್ಲಿ ಕಾಮಗಾರಿ ಆದೇಶ ನೀಡಲಾಗಿದೆ. 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸದೇ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡ ಬಸವರಾಜ ಸಂಶಿ ಮಾತನಾಡಿ, ಇಲ್ಲಿವರೆಗೂ ರೈತರಿಗೆ ಭೂ ಪರಿಹಾರ ನೀಡಿಲ್ಲ. ಬೆಳಗಾವಿಯ ಬೃಹತ್ ನೀರಾವರಿ ಯೋಜನೆಯ ವಿಶೇಷ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಬಡಪಾಯಿ ರೈತರ ಮೇಲೆ ದೌರ್ಜನ್ಯ ಮಾಡುವ ಜತೆಗೆ, ಬೆದರಿಕೆ ಹಾಕಿರುವ ವೀಡಿಯೋಗಳಿಂದ ಗೊತ್ತಾಗಿದೆ. ತಾಲೂಕು ಆಡಳಿತ ಗುತ್ತಿಗೆದಾರರ ಪರವಾಗಿ ನಿಂತಿದ್ದು, ರೈತರನ್ನು ಬೀದಿಗೆ ತಂದು ನಿಲ್ಲಿಸಿದೆ. ಈ ಕೂಡಲೇ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು, ಗುಣಮಟ್ಟದ ಕಾಮಗಾರಿ ಕುರಿತು ತನಿಖೆ ಮಾಡಬೇಕು. ಅಧಿಕಾರ ಮತ್ತು ಕರ್ತವ್ಯ ದುರುಪಯೋಗ ಮಾಡಿಕೊಂಡಿರುವ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅನ್ಯಾಯಕ್ಕೆ ಒಳಗಾಗಿರುವ ರೈತರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭ ಹರಪನಹಳ್ಳಿ ತಾಲೂಕು ಕಾರ್ಯದರ್ಶಿ ರಮೇಶ ನಾಯ್ಕ, ಬಾವಾಜಿ ಜಂಗ್ಲಿ ಸಾಬ್, ಕಿಸಾನ್ ಸಭಾ ಅಧ್ಯಕ್ಷ ಮುಕುಂದಗೌಡ, ಎಂ.ಪ್ರಕಾಶ, ನಾಗರಾಜ, ಕೆ.ಮಾಬುಸಾಬ್, ಕೆ.ಮಹಮದ್ ರಫಿ, ಎ.ಮಂಜುನಾಥ ಸೇರಿ ಇತರರಿದ್ದರು.