ಕಾವೇರಿ ಜಾತ್ರೆಯ ಸಂದರ್ಭ ಇದೇ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಸಲಾಗಿದ್ದು, ಜಾತ್ರೆ ಮುಗಿಯುತ್ತಿದ್ದಂತೆ ರಸ್ತೆಯಲ್ಲಿ ಮತ್ತೆ ಗುಂಡಿ ಬಿದ್ದಿದೆ. ಜತೆಗೆ ರಸ್ತೆ ಕಾಮಗಾರಿ ವೇಳೆ ಜಲ್ಲಿ ಹುಡಿ ಸುರಿದಿದ್ದು, ಇದರಿಂದ ವ್ಯಾಪಕವಾಗಿ ಧೂಳು ಆವರಿಸುತ್ತಿದೆ.

ಕಾವೇರಿ ಜಾತ್ರಾ ಸಮಯದಲ್ಲಿ ನಡೆದಿದ್ದ ರಸ್ತೆ ದುರಸ್ತಿ ಕಾಮಗಾರಿ

ಕನ್ನಡಪ್ರಭ ವಾರ್ತೆ ನಾಪೋಕ್ಲು

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಹಿನ್ನೆಲೆ ಇಲ್ಲಿಗೆ ಸಂಪರ್ಕಿಸುವ ಹದಗೆಟ್ಟ ರಸ್ತೆಗೆ ತೇಪೆ ಹಚ್ಚಲಾಗಿತ್ತು, ಆದರೆ ಈಗ ಜಾತ್ರೆ ಮುಗಿದಂತೆ ರಸ್ತೆಯ ತೇಪೆ ಎದ್ದು ಹೋಗಿ ಮತ್ತೆ ಹೊಂಡಮಯವಾಗಿದೆ. ಇದು ಕಳಪೆ ಕಾಮಗಾರಿಗೆ ಸಾಕ್ಷಿ ಹೇಳುತ್ತಿದೆ.ತಲಕಾವೇರಿ ಸಂಪರ್ಕಿಸುವ ಮಡಿಕೇರಿ- ಭಾಗಮಂಡಲದ ಮಧ್ಯ ಬರುವ ಬೆಟ್ಟಗೇರಿಯ ಸಮೀಪ ಬಕ್ಕದಲ್ಲಿ ಮುಖ್ಯರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು, ಧೂಳುಮಯವಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಈ ರಸ್ತೆಯನ್ನು ಸೆಪ್ಟೆಂಬರ್‌ನಲ್ಲಿ ಚೌತಿ ಹಬ್ಬದ ಸಂದರ್ಭ ಸರಿಪಡಿಸಲಾಗಿತ್ತು. ಆದರೆ ಹಬ್ಬ ಮುಗಿದ ಒಂದೇ ತಿಂಗಳಲ್ಲಿ ರಸ್ತೆ ಮತ್ತೆ ಹದಗೆಟ್ಟಿದ್ದು, ಸಂಚಾರ ಅಯೋಗ್ಯವಾಗಿತ್ತು.

ಮತ್ತೆ ಕಾವೇರಿ ಜಾತ್ರೆಯ ಸಂದರ್ಭ ಇದೇ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿ ನಡೆಸಲಾಗಿದ್ದು, ಜಾತ್ರೆ ಮುಗಿಯುತ್ತಿದ್ದಂತೆ ರಸ್ತೆಯಲ್ಲಿ ಮತ್ತೆ ಗುಂಡಿ ಬಿದ್ದಿದೆ. ಜತೆಗೆ ರಸ್ತೆ ಕಾಮಗಾರಿ ವೇಳೆ ಜಲ್ಲಿ ಹುಡಿ ಸುರಿದಿದ್ದು, ಇದರಿಂದ ವ್ಯಾಪಕವಾಗಿ ಧೂಳು ಆವರಿಸುತ್ತಿದೆ. ಧೂಳಿನಿಂದಾಗಿ ವಾಹ ಸಂಚಾರಕ್ಕೂ ತೊಡಕಾಗುತ್ತಿದೆ. ಜತೆಗೆ ಇದರಿಂದ ಆರೋಗ್ಯ ಸಮಸ್ಯೆಗಳೂಕುಂಟಾಗುತ್ತಿವೆ.

ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ. ಸೂಕ್ತ ಪರಿಹಾರ ದೊರಕದಿದ್ದಲ್ಲಿ ಮುಂದೆ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.