ಪಿಎಂ ಜನ್‌ಮನ್ ಯೋಜನೆಗೆ ಪೂವನಹಳ್ಳಿ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ

| Published : Jan 20 2025, 01:33 AM IST

ಪಿಎಂ ಜನ್‌ಮನ್ ಯೋಜನೆಗೆ ಪೂವನಹಳ್ಳಿ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಬುಡಕಟ್ಟು ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತಂದು ಅವರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆದಿವಾಸಿ ಜಾತಿ ನ್ಯಾಯ ಅಭಿಯಾನ (ಪಿಎಂ ಜನ್‌ಮನ್ ಯೋಜನೆ) ಕಾರ್ಯಕ್ರಮಕ್ಕೆ ಮಂಡ್ಯ ಲೋಕಸಭೆ ಕ್ಷೇತ್ರದ ಕೆ.ಆರ್.ಪೇಟೆ ತಾಲೂಕಿನ ಪೂವನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬುಡಕಟ್ಟು ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತಂದು ಅವರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆದಿವಾಸಿ ಜಾತಿ ನ್ಯಾಯ ಅಭಿಯಾನ (ಪಿಎಂ ಜನ್‌ಮನ್ ಯೋಜನೆ) ಕಾರ್ಯಕ್ರಮಕ್ಕೆ ಮಂಡ್ಯ ಲೋಕಸಭೆ ಕ್ಷೇತ್ರದ ಕೆ.ಆರ್.ಪೇಟೆ ತಾಲೂಕಿನ ಪೂವನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ.

ಈ ವಿಷಯವನ್ನು ಸಂಸದ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ, ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದು, ಈ ಯೋಜನೆಯನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಸಮರೋಪದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಗಂಜಿಗೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಪೂವನಹಳ್ಳಿ ಗ್ರಾಮವನ್ನು ಪಿಎಂ ಜನ್ ಮನ್ ಯೋಜನೆಗೆ ಪರಿಗಣಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ಈ ಯೋಜನೆಯನ್ನು ಘೋಷಿಸಿ ಬುಡಕಟ್ಟು ಸಮುದಾಯದ ಜನರು ವಾಸವಿರುವ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಘೋಷಣೆ ಮಾಡಿದ್ದರು.೭೯,೦೦೦ ಕೋಟಿ ರು. ಬೃಹತ್ ಯೋಜನೆಯ ಮೂಲಕ ದೇಶದ ೬೩,೦೦೦ ಹಳ್ಳಿಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಶಿಕ್ಷಣ, ಆರೋಗ್ಯ, ವಸತಿ, ನೈರ್ಮಲ್ಯ, ಮೂಲಸೌಕರ್ಯ, ಶುದ್ಧ ಕುಡಿಯುವ ನೀರು, ಕೌಶಲ್ಯಾಭಿವೃದ್ಧಿ ಸೇರಿದಂತೆ ೨೫ಕ್ಕೂ ಹೆಚ್ಚು ಜನೋಪಯೋಗಿ ಕಾರ್ಯಕ್ರಮಗಳನ್ನು ೧೮ ಇಲಾಖೆಗಳು ಅನುಷ್ಠಾನಕ್ಕೆ ತರುತ್ತವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಪಿಆರ್‌ಡಿಐ ಮೂಲಕ ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ಪೌಷ್ಟಿಕಾಂಶ ಹೆಚ್ಚಿಸುವ ಜತೆಗೆ ರಸ್ತೆ, ದೂರ ಸಂಪರ್ಕ ಸುಸ್ಥಿರ ಜೀವನಾವಕಾಶಗಳನ್ನು ಕಲ್ಪಿಸುವ ಉದ್ದೇಶದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದಿವಾಸಿಗಳ ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ತರಬೇತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ಯಾವುದೇ ಗ್ರಾಮವನ್ನು ಆಯ್ಕೆ ಮಾಡಬೇಕಾದರೆ ಹಲವಾರು ಮಾನದಂಡಗಳನ್ನು ಬುಡಕಟ್ಟು ಸಚಿವಾಲಯ ನಿಗದಿ ಮಾಡಿದೆ. ಆ ಮಾನ ದಂಡಕ್ಕೆ ಅನುಗುಣವಾಗಿ ಗ್ರಾಮಗಳನ್ನು ಆಯ್ಕೆ ಮಾಡುವ ಕೆಲಸ ಮಾಡಲಾಗುತ್ತಿದೆ. ಪ್ರಥಮ ಪ್ರಯತ್ನವಾಗಿ ಮಾನದಂಡಗಳ ಅನುಗುಣವಾಗಿ ಪೂವನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಅತ್ಯಂತ ಬದ್ಧತೆಯಿಂದ ಅನುಷ್ಠಾನ ಮಾಡಲಾಗುತ್ತಿದೆ. ಮೊದಲಿಗೆ ಪೂವನಹಳ್ಳಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಳ್ಳಿಗಳನ್ನು ಈ ಯೋಜನೆ ವ್ಯಾಪ್ತಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.