ಪೋಪ್ ಫ್ರಾನ್ಸಿಸ್‌ ಶಾಂತಿ, ಪ್ರೀತಿ, ಭರವಸೆಯ ದಾರಿದೀಪ: ಬಿಷಪ್‌

| Published : Apr 25 2025, 11:49 PM IST

ಪೋಪ್ ಫ್ರಾನ್ಸಿಸ್‌ ಶಾಂತಿ, ಪ್ರೀತಿ, ಭರವಸೆಯ ದಾರಿದೀಪ: ಬಿಷಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಥೊಲಿಕ ಕ್ರೈಸ್ತ ಸಮುದಾಯದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥವಾಗಿ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ನೇತೃತ್ವದಲ್ಲಿ ಅಖಿಲ ಕರ್ನಾಟಕ ಮಾನವ ಹಕ್ಕುಗಳ ಕೈಸ್ತ ಐಕ್ಯತಾ ಒಕ್ಕೂಟ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಸರ್ವ ಧರ್ಮ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪೋಪ್ ಫ್ರಾನ್ಸಿಸ್ ಅವರು ದ್ವೇಷ, ಯುದ್ಧ, ವಿಭಜನೆಯಿಂದ ಮೋಡ ಕವಿದಿರುವ ಜಗತ್ತಿನಲ್ಲಿ ಶಾಂತಿ-ಪ್ರೀತಿಯ, ಭರವಸೆಯ ದಾರಿದೀಪವಾಗಿದ್ದರು, ಕರುಣೆ, ದಯೆಯೇ ಧರ್ಮಸಭೆಯ ಅತ್ಯಂತ ಶ್ರೇಷ್ಠ ಬಡಿತ ಎಂದು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಶುಕ್ರವಾರ ಕಥೊಲಿಕ ಕ್ರೈಸ್ತ ಸಮುದಾಯದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥವಾಗಿ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ನೇತೃತ್ವದಲ್ಲಿ ಅಖಿಲ ಕರ್ನಾಟಕ ಮಾನವ ಹಕ್ಕುಗಳ ಕೈಸ್ತ ಐಕ್ಯತಾ ಒಕ್ಕೂಟ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಆಯೋಜಿಸಲಾದ ಸರ್ವ ಧರ್ಮ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪೋಪ್ ಫ್ರಾನ್ಸಿಸ್ ಅವರು ನಮ್ರತೆ, ಸಹಾನುಭೂತಿ ಮತ್ತು ಸುವಾರ್ತೆಗೆ ಅಚಲವಾದ ಬದ್ಧತೆಯೊಂದಿಗೆ ಮುನ್ನಡೆಸಿದರು. ಸತ್ಯ ಮತ್ತು ಧರ್ಮದ ಮಾರ್ಗಗಳನ್ನು ಅನುಸರಿಸಿ, ನಿಷ್ಟೆ, ಧೈರ್ಯ ಹಾಗೂ ಸಾರ್ವತ್ರಿಕ ಪ್ರೀತಿಯಿಂದ, ವಿಶೇಷವಾಗಿ ಬಡವರು, ನಿರ್ಗತಿಕರು, ಗಡಿಅಂಚಿನಲಿಲ್ಲಿ ನೆರವಿನ ಅಗತ್ಯವಿರುವ ಜನರಿಗಾಗಿ ಬದುಕಿದರು ಮತ್ತು ನಮಗೂ ಅದೇ ರೀತಿ ಮುಂದುವರಿಯುವಂತೆ ಸ್ಪೂರ್ತಿ ನೀಡಿದರು. ಅವರ ಅಧಿಕಾರವು ಶಾಂತಿ, ನ್ಯಾಯ, ಬಡವರ ಬಗ್ಗೆ ಕಾಳಜಿ ಮತ್ತು ಸೃಷ್ಟಿಯ ಮೇಲಿನ ಪ್ರೀತಿ, ದಣಿವರಿಯದ ಅನ್ವೇಷಣೆಯಿಂದ ಗುರುತಿಸಲ್ಪಟ್ಟಿತ್ತು ಎಂದರು.

ಪ್ರತಿಯೊಬ್ಬ ಕ್ರೈಸ್ತರು ಕರುಣೆ ಹಾಗೂ ದಯೆಯ ಸಾಧನಗಳಾಗಲು ಕರೆ ನೀಡಿದ್ದಲ್ಲದೇ, ಸ್ವತಃ ಕಾರಾಗೃಹಗಳಿಗೆ ಬೇಟಿಯಿತ್ತು, ಕೈದಿಗಳನ್ನು ಅಪ್ಪಿಕೊಂಡರು, ಅವರ ಪಾದಗಳನ್ನು ತೊಳೆದರು, ವಲಸಿಗರ ಶಿಬಿರಗಳಿಗೆ ಭೇಟಿ ನೀಡಿ ಅವರಿಗೆ ಸಾಂತ್ವನ ನೀಡಿ, ದೇವರ ಕರುಣೆ ಜಗತ್ತಿನ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು ಎಂದು ತೋರಿಸಿದರು ಎಂದು ಧರ್ಮಾಧ್ಯಕ್ಷರು ನುಡಿ ನಮನ ಸಲ್ಲಿಸಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಪೋಪ್ ಫ್ರಾನ್ಸಿಸ್ ಅವರು ವಿಶ್ವದ ಧರ್ಮದ ಗೋಡೆಗಳನ್ನು ಮೀರಿ ಸರ್ವ ಧರ್ಮದ ಪ್ರತೀಕವಾದರು. ದ್ವೇಶ ಅಶಾಂತಿಗೆ ಶಾಂತಿಯ ದೂತರಾಗಿ ಸ್ಪಂದಿಸಿದರು, ಬಡವರ ಹೃದಯದಲ್ಲಿ ದೇವರಿದ್ದಾರೆ ಎನ್ನುವುದನ್ನು ತನ್ನ ಕೃತ್ಯದಲ್ಲಿ ತೋರ್ಪಡಿಸುವುದರ ಮೂಲಕ ಜಗತ್ತಿಗೆ ಮಾದರಿಯಾದರು. ಅವರ ಮಾನವೀಯತೆ ಹಾಗೂ ಪ್ರೀತಿಯ ವ್ಯಕ್ತಿತ್ವ ಸಮಾಜದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದರು.ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಸ್ಟೀವನ್ ಡಿಸೋಜಾ, ವಂ.ಡಾ.ರೋಶನ್ ಡಿಸೋಜಾ, ವಂ.ವಿಶಾಲ್ ಲೋಬೊ, ವಂ.ಅನಿಲ್ ಡಿಸೋಜಾ, ವಂ.ರಾಜೇಶ್ ಪಸಾನ್ನಾ, ವಂ ರೋಮೀಯೋ ಲೂವಿಸ್, ವಂ.ಜೋರ್ಜ್ ಡಿಸೋಜಾ, ವಂ.ವಿಜಯ್ ಡಿಸೋಜಾ, ವಂ.ಅಶ್ವಿನ್ ಆರಾನ್ಹಾ, ವಂ.ಅಲ್ಫೋನ್ಸಸ್ ಡಿಲೀಮಾ, ವಿವಿಧ ಕ್ರೈಸ್ತ ಸಭೆಗಳಾದ ಸಿರೀಯನ್, ಸಿಎಸ್ಐ ಮತ್ತು ಬಾಸೆಲ್ ಮಿಶನ್ ಧರ್ಮಗುರುಗಳು, ಸಭಾ ಪಾಲಕರು ಇದ್ದರು.

ಉಡುಪಿ ವಲಯ ಪ್ರಧಾನ ಧರ್ಮಗುರು ಹಾಗೂ ಶೋಕಮಾತಾ ಚರ್ಚಿನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಸ್ವಾಗತಿಸಿದರು. ಸಹಾಯಕ ಧರ್ಮಗುರು ವಂ. ಲಿಯೋ ಪ್ರವೀಣ್ ಡಿಸೋಜಾ ವಂದಿಸಿದರು. ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.