ಜನಮನ ಸೂರೆಗೊಂಡ ಯುಗಾದಿ ರಸಸಂಜೆ

| Published : Apr 09 2025, 02:03 AM IST

ಸಾರಾಂಶ

ಸಂಗೀತ, ಸಂಸ್ಕೃತಿಯ ಸಂಸ್ಕಾರವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.

ಧಾರವಾಡ: ಉಭಯ ಗಾಯನಾಚಾರ್ಯರು ಹಾಕಿ ಕೊಟ್ಟ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಸಂಗೀತ, ಸಂಸ್ಕೃತಿಯ ಸಂಸ್ಕಾರವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.

ಸೃಷ್ಟಿ ರಸಿಕರ ರಂಗ ಪ್ರತಿಷ್ಠಾನ ಇಲ್ಲಿಯ ನಿಸರ್ಗ ಬಡಾವಣೆಯ ಸೌರಭ ವೇದಿಕೆಯಲ್ಲಿ ಆಯೋಜಿಸಿದ್ದ ಯುಗಾದಿ ರಸ ಸಂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸುರೇಖಾ ಸುರೇಶ ದಂಪತಿ ಮಾಡುತ್ತಿರುವ ಕಾರ್ಯಕ್ಕೆ ಗುರುಗಳ ಕೃಪಾಶೀರ್ವಾದವಿದೆ. ಮಕ್ಕಳಿಬ್ಬರೂ ಉತ್ತಮ ಗಾಯಕಿ ಮತ್ತು ಸಿತಾರ ವಾದಕಿಯರನ್ನಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಶ್ರೀಗುರು ಕುಮಾರ ಪಂಚಾಕ್ಷರ ಸಮ್ಮಾನ್‌ವನ್ನು ಕಲ್ಲಯ್ಯಜ್ಜನವರಿಗೆ ಪ್ರದಾನ ಮಾಡಲಾಯಿತು. ನಿಜಗುಣಿ ರಾಜಗುರು ಅವರಿಗೆ ಸಂಗೀತ ಸಿರಿ ಡಾ. ಸೌಭಾಗ್ಯ ಕುಲಕರ್ಣಿಯವರಿಗೆ ವೈದ್ಯೆ-ರತ್ನ, ಮಲ್ಲಿಕಾರ್ಜುನಸ್ವಾಮಿ ಚಿಕ್ಕಮಠರಿಗೆ ಶಿಕ್ಷಣ ಶಿಲ್ಪಿ, ವೈಷ್ಣವಿ ಹಾನಗಲ್ ಅವರಿಗೆ ಗಾಯನ ಜ್ಯೋತಿ, ಎಂ. ಕಲ್ಲಿನಾಥ ಶಾಸ್ತ್ರಿಗಳಿಗೆ ಕೀರ್ತನ ಕಿರೀಟ, ಮುರಳೀಧರ ಮಳಗಿಯವರಿಗೆ ನಾಡ ಸಂಸ್ಕೃತಿ ರಕ್ಷಕ ಹೀಗೆ ಶ್ರೀಗುರು ಪುಟ್ಟರಾಜ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನಂತರ ಕಲಾವಿದೆ ಜಿ. ಸುರಭಿ ಸುರೇಶ ರಾಗ್ ಗಾಯನ ಪ್ರಸ್ತುತ ಪಡಿಸಿದರು. ಪ್ರವೀಣ ಹೂಗಾರ ಸಿತಾರ್ ವಾದನದಲ್ಲಿ ರಾಗ್- ಸಿಂಹೆಂದ್ರ ಮದ್ಯಮ ನುಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ವೈಷ್ಣವಿ ಹಾನಗಲ್ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಪಂಚಮ ಉಪಾಧ್ಯೆ ಮತ್ತು ಬಸವರಾಜ ಹಿರೇಮಠ ಹಾಗೂ ಹಾರ್ಮೊನಿಯಂನಲ್ಲಿ ಪ್ರಮೋದ ಹೆಬ್ಬಳ್ಳಿ ಸಾಥ್ ನೀಡಿದರು. ನಿಸರ್ಗ ಬಡಾವಣೆಯ ಆದಿಶಕ್ತಿ ಮಹಿಳಾ ಮಂಡಳದ ಸದಸ್ಯೆಯರಿಂದ ಸಮೂಹ ಗಾಯನ ಜರುಗಿತು.

ಜಿ. ಸೃಷ್ಟಿ ಸುರೇಶ ಪ್ರಾರ್ಥಿಸಿದರು. ಸುರೇಶ ಗೋವಿಂದರೆಡ್ಡಿ ಸ್ವಾಗತಿಸಿದರು. ಸುರೇಖಾ ಸುರೇಶ ವಂದಿಸಿದರು. ವಿಜಯಲಕ್ಷ್ಮೀ ಹಿರೇಮಠ ನಿರೂಪಿಸಿದರು.