ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಿ ಅಧಿಕಾರಿಗಳು ಜನಮುಖಿ ಸೇವೆಯಲ್ಲಿ ತೊಡಗಿದಾಗ ಜನರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯ. ನಿವೃತ್ತಿಯ ನಂತರವೂ ಜನಮಾನಸದಲ್ಲಿ ಉಳಿಯುತ್ತೀರಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ನಗರದ ನಾಲ್ವಡಿ ಕೃಷ್ಣರಾಜ ಒಡೆರ್ಯ ಕಲಾ ಮಂದಿರದಲ್ಲಿ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಸಹಯೋಗದಲ್ಲಿ ಶನಿವಾರ ಆಯೋಜೊಸಿದ್ದ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ, ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿ, ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ತಿಮ್ಮೇಗೌಡ ಅವರು ಕಾನೂನು ಪ್ರಕಾರವೇ ಜನಮುಖಿ ಸೇವೆ ನೀಡಿ ಎಲ್ಲರ ಮನಸಲ್ಲಿ ಉಳಿದವರು, ಎಂದಿಗೂ ಅಧಿಕಾರದ ಅಹಂ ತಲೆಗೆ ಹತ್ತಿಸಿಕೊಂಡವರಲ್ಲ. ಐಎಎಸ್ ಅಧಿಕಾರಿಯಾಗಿ ಟಿ.ತಿಮ್ಮೇಗೌಡ ಅವರು ಉತ್ತಮ ಅಡಳಿತ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುವುದು ಕಷ್ಟ. ಆದರೆ, ದಯಾನಂದ ಅವರಿಗೆ ಎರಡು ಬಾರಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿದೆ. ಅದನ್ನು ಜನಮುಖಿ ಸೇವೆಗೆ ಬಳಸಿಕೊಂಡಿರುವುದು ಅವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ನಂಜೇಗೌಡ ಅವರಿಗೆ ಪ್ರಶಸ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಜೊತೆಗೆ ವೆಂಕಟಪ್ಪ ಅವರು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.ಅಧಿಕಾರದಲ್ಲಿದ್ದ ತಿಮ್ಮೇಗೌಡ ಅವರು ಹಣದ ಹಿಂದೆ ಹೋದವರಲ್ಲ, ಶ್ರೀಮಠದ ಭಕ್ತರಾಗಿರುವ ಇವರು ಜನಾನುರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡ ವ್ಯಕ್ತಿಯಾಗಿದ್ದಾರೆ, ನಿವೃತ್ತಿಯ ನಂತರವೂ ಜಾನಪದ ಲೋಕದ ಬೆಳವಣಿಗೆಗೆ ಶ್ರಮಿಸಿದ್ದಾರೆ. ೮೦ರ ವಯಸ್ಸಿನಲ್ಲೂ ಸಮಾಜಮುಖಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿರುವುದು ಅವರ ಜೀವನೋತ್ಸಾಹಕ್ಕೆ ಹಿಡಿದ ಕೈಗನ್ನಡಿ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು, ತಿಮ್ಮೇಗೌಡರು ಉತ್ತಮ ಅಧಿಕಾರಿ ಹಾಗೂ ಅವರನ್ನ ಹತ್ತಿರದಿಂದ ನೋಡಿದಂತೆ ಗಾಂಧಿ ಗ್ರಾಮದ ಬಗ್ಗೆ ಅವರ ಅಧಿಕಾರದ ಅವಧಿಯಲ್ಲೇ ಸಲಹೆ ನೀಡಿದ್ದರು, ಇವರ ಜನಪರ ಸೇವೆಯನ್ನು ಎಲ್ಲರೂ ಕಂಡಿದ್ದಾರೆ. ಆದರೆ, ತಿಮ್ಮೇಗೌಡ ಅವರ ಹೆಸರಿನಲ್ಲಿ ಸಮಾಜಮುಖಿ ಪ್ರಶಸ್ತಿ ನೀಡುತ್ತಿರುವುದು ವಿಶೇಷ ಎನಿಸುತ್ತದೆ ಎಂದು ಶ್ಲಾಘಿಸಿದರು.ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರು ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಣ ಆಯುಕ್ತ ಕೆ.ಎ.ದಯಾನಂದ ಮಾತನಾಡಿ, ಜನಮುಖಿ ಆಡಳಿತ ನಡೆಸಿದ್ದ ತಿಮ್ಮೇಗೌಡ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಆನಂದ ಉಂಟು ಮಾಡಿದೆ. ಮಂಡ್ಯ ಜಿಲ್ಲೆಯ ಪಕ್ಕದ ಮೈಸೂರು ಜಿಲ್ಲೆಯವನಾದರೂ ನನಗೂ ಮಂಡ್ಯಕ್ಕೂ ಅವಿನಾಭಾವ ಸಂಬಂಧ ಹೊಂದಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ನಿವೃತ್ತ ಜಿಲ್ಲಾಧಿಕಾರಿ ತಿಮ್ಮೇಗೌಡ ಮಾತನಾಡಿ, ಅಧಿಕಾರಿಗಳನ್ನ ತುಚ್ಛವಾಗಿ ಕಾಣುವುದು ಬೇಡ. ಏಕೆಂದರೆ ಮೊನ್ನೆ ನಡೆದ ಘಟನೆ ಸರಿಯಲ್ಲ, ಅಧಿಕಾರಿಗಳನ್ನ ಗೌರವಿಸುವುದು ಮುಖ್ಯವಾಗಬೇಕು. ರಾಜಕಾರಣಿಗಳು ಅಧಿಕಾರ ಮುಗಿದ ಮೇಲೆ ನಿಷ್ಕ್ರೀಯರಾಗುತ್ತಾರೆ. ಆದರೆ, ಅಧಿಕಾರಿಗಳು ನಿರಂತರವಾಗಿ ಇರುತ್ತಾರೆ. ಅವರನ್ನು ಗೌರವಯುತವಾಗಿ ಸಮಾಜದಲ್ಲಿ ಕಾಣಬೇಕಿದೆ. ಹಾಗಂತ ಎಲ್ಲಾ ರಾಜಕಾರಣಿಗಳು ಕೆಟ್ಟವರಲ್ಲ. ಮೌಲ್ಯ ಉಳಿಸಿಕೊಂಡಿರುವ ರಾಜಕಾರಣಿಗಳೂ ನಮ್ಮೊಂದಿಗಿದ್ದು ಇತರೆ ರಾಜಕಾರಣಿಗಳಿಗೆ ಮಾದರಿ ಆಗಲಿ ಎಂದರು.ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿಯನ್ನು ಕೆ.ಎ.ದಯಾನಂದ, ಲಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿಯನ್ನು ಬಿ.ಎಂ.ನಂಜೇಗೌಡ ಅವರಿಗೆ ೨೫ ಸಾವಿರ ಒಳಗೊಂಡಂತೆ ಹಾಗೂ ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರವನ್ನು ಪ್ರತಿಭಾವಂತ ವಿದ್ಯಾರ್ಥಿಗಳಾದ ಕೆ.ಆರ್.ಪೇಟೆ ಧೃತಿ, ಸೌಮ್ಯ, ಮೋನಿಷಾ ಅವರಿಗೆ ನೀಡಲಾಯಿತು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು.ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ದಂಪತಿ ಹಾಗೂ ಕುಟುಂಬ ಸೇರಿದಂತೆ ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸಲಹೆಗಾರ ಎಚ್.ಎಂ.ವೆಂಕಟಪ್ಪ ಭಾಗವಹಿಸಿದ್ದರು.