ಧಾರವಾಡ:
ವಿಶ್ವ ಜನಸಂಖ್ಯೆ 8.2 ಬಿಲಿಯನ್‍ಗಿಂತಲೂ ಹೆಚ್ಚಾಗಿದೆ. ಜನಸಂಖ್ಯೆಯ ಈ ಆಗಾದ ಬೆಳವಣಿಗೆಯು ಹಲವು ಸವಾಲುಗಳನ್ನು ತಂದೊಡ್ಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಹೇಳಿದರು.ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜೆಎಸ್‌ಎಸ್ ಆವರಣದಲ್ಲಿರುವ ಉತ್ಸವ ಸಭಾಂಗಣದಲ್ಲಿ ವಿಶ್ವ ಜನಸಂಖ್ಯೆ ದಿನ ಉದ್ಘಾಟಿಸಿದ ಅವರು, ಅತಿ ಜನಸಂಖ್ಯೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆ, ಪರಿಸರ ಮಾಲಿನ್ಯ, ನಿರುದ್ಯೋಗ, ಬಡತನ ಮತ್ತು ಆಹಾರದ ಕೊರತೆ ಹೆಚ್ಚಾಗುತ್ತಿದೆ. ಜನಸಂಖ್ಯೆ ಹೆಚ್ಚಳಕ್ಕೆ ಬಡತನ, ಅನಕ್ಷರತೆ ಮತ್ತು ಅರಿವಿನ ಕೊರತೆಯೇ ಮುಖ್ಯ ಕಾರಣಗಳಾಗಿವೆ ಎಂದರು.
ನಾವು ಸುಸ್ಥಿರ ಭವಿಷ್ಯ ಹೊಂದಬೇಕಾದರೆ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯವಾಗಿದೆ. ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಸಣ್ಣ ಕುಟುಂಬದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಾಗಿದೆ. ಯುವ ಜನಾಂಗಕ್ಕೆ ಜನಸಂಖ್ಯೆ ಸ್ಫೋಟದ ಬಗ್ಗೆ ಜಾಗೃತಿ ಮೂಡಿಸಬೇಕು. ಸಣ್ಣ ಕುಟುಂಬ-ಸುಖೀ ಕುಟುಂಬ” ಎಂಬ ಪರಿಕಲ್ಪನೆ ಅಳವಡಿಸಿಕೊಳ್ಳಬೇಕು. ಸಂಪನ್ಮೂಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉತ್ತಮ ಜೀವನ ನೀಡಲು ಕೈಜೋಡಿಸಬೇಕೆಂದು ಹೇಳಿದರು.ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಮಹೇಶ ಚಿತ್ತರಗಿ ಮಾತನಾಡಿ, ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ಸೇವೆ ಒದಗಿಸುತ್ತಿದೆ. ತಾತ್ಕಾಲಿಕ ಹಾಗೂ ಶಾಶ್ವತ ಕುಟುಂಬ ಯೋಜನಾ ವಿಧಾನ, ಗರ್ಭಿಣಿಯರ ಆರೈಕೆ, ಸುರಕ್ಷಿತ ಹೆರಿಗೆ, ಮಕ್ಕಳ ಲಸಿಕಾಕರಣ, ಹದಿಹರೆಯದವರ ಆರೋಗ್ಯ ಸೇವೆ ಹಾಗೂ ಸಂತಾನೋತ್ಪತ್ತಿ ಆರೋಗ್ಯ ಸೇವೆ, ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿವೆ ಎಂದು ಹೇಳಿದರು.
ವಿಶೇಷವಾಗಿ ಯುವಜನರು ಮತ್ತು ನವದಂಪತಿಗಳ ವಿವಾಹದ ಸೂಕ್ತ ವಯಸ್ಸು, ಗರ್ಭಧಾರಣೆ ನಡುವಿನ ಅಂತರ, ಮಹಿಳೆಯರ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಲಿಂಗ ಸಮಾನತೆಯ ಮಹತ್ವವನ್ನು ಅರಿತುಕೊಳ್ಳಬೇಕು. ಆರೋಗ್ಯಕರ ಕುಟುಂಬವೇ ಆರೋಗ್ಯಕರ ಸಮಾಜ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯವಾಗಿದೆ ಎಂದರು.
ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜನಸಂಖ್ಯಾ ಮಾಹಿತಿಯುಳ್ಳ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಡಾ. ಸುಜಾತಾ ಆನಿಶೆಟ್ಟರ್ ಉಪನ್ಯಾಸ ನೀಡಿದರು. ಡಾ. ಸಂಜಯ ಡುಮ್ಮಗೋಳ, ಡಾ. ತನುಜಾ ಕೆ.ಎನ್, ಪ್ರಾಚಾರ್ಯ ಡಾ. ರವಿವರ್ಮ ಜೋಶಿ, ಡಾ. ಪ್ರಸಾದ ಬಿ.ಆರ್. ಪಾತ್ರೋಟ, ಸುಧಾ ತಿವಾರಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶೋಭಾ ಕುಲಕರ್ಣಿ ಇದ್ದರು. ಎಂ.ಎನ್. ಅಗಡಿ ಸ್ವಾಗತಿಸಿದರು, ಅನುಷಾ ಎಂ.ಎಚ್. ನಿರೂಪಿಸಿದರು.