ಸಾರಾಂಶ
ಕೊಡವ ಸಮುದಾಯ ಮಾತ್ರವಲ್ಲ ಎಲ್ಲ ಸಮುದಾಯಗಳ ಜನಸಂಖ್ಯೆ ತೀವ್ರವಾಗಿ ಕ್ಷೀಣಿಸುತ್ತಿದೆ. ಇದು ಗಂಭೀರವಾದ ಸಂಗತಿ ಎಂದು ಚಿಂತಕ ಸೂದನ ಎಸ್. ಈರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡವ ಸಮುದಾಯ ಮಾತ್ರವಲ್ಲ ಎಲ್ಲಾ ಸಮುದಾಯಗಳ ಜನಸಂಖ್ಯೆ ತೀವ್ರವಾಗಿ ಕ್ಷೀಣಿಸುತ್ತಿದೆ. ಇದು ಗಂಭೀರವಾದ ಸಂಗತಿ ಎಂದು ಚಿಂತಕ ಸೂದನ ಯಸ್. ಈರಪ್ಪ ಪ್ರತಿಪಾದಿಸಿದ್ದಾರೆ.ಕೆಲವು ದಿನಗಳ ಹಿಂದೆ ಕೊಡವ ಸಮುದಾಯದ ಹಿರಿಯರೊಬ್ಬರು ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವವರಿಗೆ ರು. 50 ಸಾವಿರ ಬಹುಮಾನವನ್ನು ಘೋಷಿಸಿದ್ದರು. ಕೊಡವಹಾಕಿ ಉತ್ಸವದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಪ್ಪ ಸಹ ಕೊಡವ ಸಮುದಾಯದ ಜನಸಂಖ್ಯೆ ತೀವ್ರವಾಗಿ ಕ್ಷೀಣಿಸುತ್ತಿದ್ದು ಆತಂಕಕಾರಿಯಾದ ವಿಷಯ. ಜನಸಂಖ್ಯೆ ಹೆಚ್ಚಾಗಬೇಕೆಂದು ಕರೆ ನೀಡಿದ್ದಾರೆ. ಆ ಮೂಲಕ ಕೊಡವ ಸಮುದಾಯದ ತಾಯಂದಿರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಕೊಡಗಿನಲ್ಲಿ ಕೊಡವ, ಗೌಡ ಹಾಗೂ ಇನ್ನಿತರ ಸಮುದಾಯಗಳ ಜನಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕೆಲವೇ ವರ್ಷಗಳಲ್ಲಿ ಅಲ್ಪಸಂಖ್ಯಾತ ರಾಗುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಕೊಡಗು ಮಾತ್ರವಲ್ಲ ದೇಶದಲ್ಲಿ ಎಲ್ಲಾ ಹಿಂದೂ ಸಮುದಾಯದವರ ಸಂಖ್ಯೆ ಕಡಿಮೆಯಾಗುತ್ತಿದ್ದು ಆತಂಕ ವಿಷಯವಾಗಿದೆ . ಕೊಡಗಿನ ಮಟ್ಟಿಗೆ ಜಾತಿ ಹೊರತುಪಡಿಸಿ ಹೇಳುವುದಾದರೆ ಕೊಡವ, ಗೌಡ, ಒಕ್ಕಲಿಗರು, ಬ್ರಾಹ್ಮಣ, ಲಿಂಗಾಯಿತರು, ಮಡಿವಾಳ ಸೇರಿದಂತೆ ಎಲ್ಲ ಸಣ್ಣ ಸಣ್ಣ ಸಮುದಾಯಗಳ ಜನಸಂಖ್ಯೆ ಸಂಸ್ಕೃತಿ ಮತ್ತು ಭಾಷೆ ನಿಧಾನವಾಗಿ ಕ್ಷೀಣಿಸುತ್ತಿದೆ. ಒಂದು ಪತ್ನಿ ಇಬ್ಬರು ಮಕ್ಕಳನ್ನು ಹೊಂದಿದ ಬಡ ಬಿಪಿಎಲ್ ಕಾರ್ಡ್‌ದಾರರಿಗೆ 20 ಕೆಜಿ ಉಚಿತ ಪಡಿತರ ಪಡೆದರೆ ಎರಡು ಮೂರು ಪತ್ನಿ, ಹತ್ತಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ಕುಟುಂಬ ತಿಂಗಳಿಗೆ 50 ರಿಂದ 60 ಕೆಜಿ ಉಚಿತ ಪಡಿತರ ಪಡೆಯುತ್ತಿದ್ದಾರೆ ಎಂದಿರುವ ಅವರು ಬಿಪಿಎಲ್ ಪಡಿತರ ಕಾರ್ಡ್ ಅನ್ನು ಮಾರ್ಪಾಡು ಮಾಡಿ ಕಠಿಣ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ. ಮತ ಗಳಿಕೆಗಾಗಿ ವ್ಯವಸ್ಥೆಗಳನ್ನು ಪುಕ್ಕಟೆಯಾಗಿ ಕೊಟ್ಟರೆ ಸಾಮಾನ್ಯ ಜನರ ಸ್ಥಿತಿಗತಿ ಮತ್ತಷ್ಟು ಆತಂಕಕಾರಿಯಾಗಲಿದೆ ಎಂದಿದ್ದಾರೆ.ಜಿಲ್ಲೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಹೋರಾಟ ನಡೆಸುವ ಬದಲು ಜನಸಂಖ್ಯೆ ಅಂತಹ ಗಂಭೀರ ಸಮಸ್ಯೆಗಳಿಗೆ ಕೊಡವರು ಮತ್ತು ಗೌಡ ಸಮುದಾಯದವರು ಇತರ ಎಲ್ಲ ಸಮುದಾಯದವರು ಜೊತೆಯಲ್ಲಿ ಸಾಗಿ ಮುಂದಕ್ಕೆ ಹೋಗಬೇಕಾದುದು ಅನಿವಾರ್ಯ ಎಂದ ಅವರು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 370 ವಿಧಿಯನ್ನು ರದ್ದುಪಡಿಸಿದಂತೆ ಜನಸಂಖ್ಯಾ ನಿಯಂತ್ರಣಕ್ಕೆ ಗಂಭೀರವಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.