ಸಕಾರಾತ್ಮಕ ವಿಷಯಗಳತ್ತ ವಿದ್ಯಾರ್ಥಿಗಳ ಚಿತ್ತ ಅಗತ್ಯ: ಡಾ.ಇಂದಿರಾ ಶ್ಯಾಮ್ ಪ್ರಸಾದ್

| Published : Jun 10 2024, 12:30 AM IST

ಸಕಾರಾತ್ಮಕ ವಿಷಯಗಳತ್ತ ವಿದ್ಯಾರ್ಥಿಗಳ ಚಿತ್ತ ಅಗತ್ಯ: ಡಾ.ಇಂದಿರಾ ಶ್ಯಾಮ್ ಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ಶಿಸ್ತು, ಇದರಲ್ಲಿ ಭಾಗವಹಿಸುವುದರಿಂದ ಇದು ಎತ್ತರದ ಮಟ್ಟಕ್ಕೆ ಕರೆದೊಯ್ಯುತ್ತದೆ‌. ಸಮಾಜದ ವಸ್ತು ಸ್ಥಿತಿಯನ್ನು ತಿಳಿಯಲು ಗ್ರಾಮಗಳಿಗೆ ಭೇಟಿ ನೀಡಬೇಕು. ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ವಿದ್ಯಾರ್ಥಿಗಳು ತಮ್ಮ ಕನಸು ಹಾಗೂ ಶಕ್ತಿಯನ್ನು ಉನ್ನತವಾದ ಸಾಧನೆಗೆ ಬಳಸಿಕೊಳ್ಳಬೇಕು ಎಂದು ಡಾ.ಇಂದಿರಾ ಶ್ಯಾಮ್ ಪ್ರಸಾದ್ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಏಳು ದಿನಗಳ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಈ ವಯಸ್ಸು ಹೊಸ ಹೊಸ ಕನಸು ಕಾಣುವ, ನಾನಾ ಆಸೆಗಳನ್ನು ಇಟ್ಟುಕೊಂಡಿರುವಂತಹ ವಯಸ್ಸು, ಅದೇ ರೀತಿ ಹೆಚ್ಚು ಶಕ್ತಿಯೂ ಸಹ ಇರುತ್ತದೆ. ವಿದ್ಯಾರ್ಥಿಗಳಿಗೆ ಏನಾದರೂ ಸಾಧಿಸಬೇಕು ಎಂಬ ಛಲವಿರಬೇಕು, ಯುವ ಮನಸ್ಸಿನ ವಿದ್ಯಾರ್ಥಿಗಳ ಕನಸು ಮತ್ತು ಶಕ್ತಿಯನ್ನು ಉನ್ನತವಾದುದನ್ನು ಸಾಧಿಸಲು ಬಳಸಿಕೊಳ್ಳಬೇಕು ಎಂದರು.

ಏನನ್ನಾದರೂ ಸಾಧಿಸಲು ಆರೋಗ್ಯ ಮುಖ್ಯ ಎಂದ ಅವರು, ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹಲವು ಸಲಹೆ ನೀಡಿದರು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಹೊಂದಿಕೊಂಡಿರುವುದರಿಂದ ಅವುಗಳಲ್ಲಿ ಸಾಕಷ್ಟು ಕಲಿಯುವ ವಿಷಯವಿದೆ. ಅವುಗಳಲ್ಲಿ ಸಕಾರಾತ್ಮಕ ವಿಷಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮದ ಮುಖಂಡ ರಾಜಗೋಪಾಲ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಮತ್ತು ಸ್ವಚ್ಛತೆ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಅವರು ಗ್ರಾಮ ಸ್ವರಾಜ್ಯದ ಕನಸು ಕಂಡವರು. ಅವರ ಕನಸುಗಳನ್ನು ಇಂತಹ ಶಿಬಿರಗಳ ಮೂಲಕ ಸಾಕಾರ ಮಾಡಬಹುದು. ರಾಷ್ಟ್ರೀಯ ಸೇವಾ ಯೋಜನೆಗೆ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ವಿಷಯ. ಎಲ್ಲರಿಗೂ ಮೆಚ್ಚುಗೆಯಾಗುವಂತೆ ಶಿಬಿರದಲ್ಲಿ ಭಾಗವಹಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾಧ್ಯಾಪಕ ಮಾಳವ ನಾರಾಯಣ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ಶಿಸ್ತು, ಇದರಲ್ಲಿ ಭಾಗವಹಿಸುವುದರಿಂದ ಇದು ಎತ್ತರದ ಮಟ್ಟಕ್ಕೆ ಕರೆದೊಯ್ಯುತ್ತದೆ‌. ಸಮಾಜದ ವಸ್ತು ಸ್ಥಿತಿಯನ್ನು ತಿಳಿಯಲು ಗ್ರಾಮಗಳಿಗೆ ಭೇಟಿ ನೀಡಬೇಕು. ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಭಾಗವಹಿಸಿ ಎಂದು ತಿಳಿಸಿದರು.

ಪ್ರಭಾರ ಪ್ರಾಂಶುಪಾಲರು ಡಾ.ಬಿ.ಆರ್.ಗಂಗಾಧರ ಮಾತನಾಡಿ, ವಿದ್ಯಾರ್ಥಿಗಳಾದ ನಿಮ್ಮ ಕಾರ್ಯವನ್ನು ಗಮನಿಸಿ ಗ್ರಾಮದ ಜನತೆ ಯಾವಾಗಲೂ ನೆನೆಯುವಂತಿರಬೇಕು, ಆ ರೀತಿಯಾಗಿ ಶಿಬಿರವನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಪ್ರೊ. ಎಂ.ನೀರಜಾದೇವಿ, ಡಾ.ಪ್ರಕಾಶ್ ಮಂಟೇದ, ಗ್ರಾಪಂ ಸದಸ್ಯರಾದ ಸುನಿತಾ ಶ್ರೀನಿವಾಸ್, ಲೋಕೇಶ್ ಶಿಬಿರದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.