78 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಸಾಧ್ಯತೆ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Mar 04 2025, 12:30 AM IST

78 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಸಾಧ್ಯತೆ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಅವಧಿಯಲ್ಲಿ ಉಂಟಾಗುವ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆಗಳ ಕುರಿತು ಪೂರ್ವಸಿದ್ಧತೆಗಾಗಿ ಸೋಮವಾರ ಜಿಲ್ಲಾಧಿಕಾರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದರು.

ಧಾರವಾಡ: ಹಿಂದಿನ ವರ್ಷಗಳ ಮಾಹಿತಿ ಹಾಗೂ ಅನುಭವದ ಆಧಾರದಲ್ಲಿ ಜಿಲ್ಲಾಡಳಿತದಿಂದ 2025-2026ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ 78 ಗ್ರಾಮಗಳನ್ನು ಗುರುತಿಸಲಾಗಿದ್ದು, ತಹಸೀಲ್ದಾರರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

2025ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಉಂಟಾಗುವ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆಗಳ ಕುರಿತು ಪೂರ್ವಸಿದ್ಧತೆಗಾಗಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ ಮಾತನಾಡಿದರು.

ಎಲ್ಲ ತಾಪಂ ಕಚೇರಿಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಕುಡಿಯುವ ನೀರು, ಜಾನುವಾರು ಮೇವು ಸರಬರಾಜು ಕುರಿತ ದೂರುಗಳನ್ನು ಸ್ವೀಕರಿಸಿ, ತುರ್ತು ಕ್ರಮ ವಹಿಸಲು ಸಾಧ್ಯವಾಗುವಂತೆ ಸಹಾಯವಾಣಿ ಆರಂಭಿಸಲು ಸೂಚಿಸಿದರು.

ಬೇಸಿಗೆ ಅವಧಿಯ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಧಾರವಾಡ ತಾಲೂಕಿನ 30 ಗ್ರಾಮಗಳಲ್ಲಿ, ಅಳ್ನಾವರ ತಾಲೂಕಿನ ನಾಲ್ಕು, ಹುಬ್ಬಳ್ಳಿಯ 19, ಕಲಘಟಗಿಯ 16, ಕುಂದಗೋಳದ ಒಂಭತ್ತು ಗ್ರಾಮಗಳು. ಹೀಗೆ ಸಮೀಕ್ಷೆ ಮಾಡಿ ಒಟ್ಟು 78 ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಮಾರ್ಚ್‌ ತಿಂಗಳಲ್ಲಿ 29, ಏಪ್ರಿಲ್ ತಿಂಗಳಲ್ಲಿ 26 ಮತ್ತು ಮೇ ತಿಂಗಳಲ್ಲಿ 23 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಎಂದು ಗುರುತಿಸಿ, ಕುಡಿಯುವ ನೀರು ಸರಬರಾಜಿಗಾಗಿ ಖಾಸಗಿ ಕೊಳವೆಬಾವಿ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

162 ಬೋರವೆಲ್‌

ಪ್ರಸ್ತುತ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕೆಲವು ವಾರ್ಡಗಳಿಗೆ ಒಂದು ಖಾಸಗಿ ಕೊಳವೆಬಾವಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯಾತ್ಮಕವೆಂದು ಗುರುತಿಸಿರುವ 78 ಗ್ರಾಮಗಳಲ್ಲಿ ಅಗತ್ಯಬಿದ್ದಾಗ ತಕ್ಷಣ ಕುಡಿಯುವ ನೀರು ಸರಬರಾಜು ಮಾಡಲು ಈಗಾಗಲೇ ಒಟ್ಟು 162 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಕೊಳವೆಬಾವಿ ಮಾಲೀಕರೊಂದಿಗೆ ಒಪ್ಪಂದ ಸಹ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ನಿಗಾವಹಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕಿನಲ್ಲಿ ಮಲಪ್ರಭಾ ಕಾಲುವೆಯ ಮುಖಾಂತರ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದೆ. ನವಲಗುಂದ ತಾಲೂಕಿನ 37 ಕೆರೆಗಳು, ಅಣ್ಣಿಗೇರಿ 13 ಕೆರೆಗಳು, ಹುಬ್ಬಳ್ಳಿ ತಾಲೂಕಿನ ಏಳು ಕೆರೆಗಳು ಮತ್ತು ಕುಂದಗೋಳದ ಮೂರು ಕೆರೆಗಳು ಸೇರಿ ಒಟ್ಟು 60 ಕುಡಿಯುವ ನೀರಿನ ಕೆರೆಗಳನ್ನು ಕಾಲುವೆ ನೀರಿನಿಂದ ತುಂಬಿಸಲಾಗಿದೆ. ಇವುಗಳಲ್ಲಿ ಎಪ್ರಿಲ್ ತಿಂಗಳಲ್ಲಿ ಹತ್ತು ಮತ್ತು ಮೇ ತಿಂಗಳಲ್ಲಿ 50 ಕೆರೆಗಳು ಬಳಕೆ ಆಗುವ ಸಾಧ್ಯತೆ ಇದೆ ಎಂದವರು ತಿಳಿಸಿದರು.

ಮೇವಿನ ಲಭ್ಯತೆ

ಜಿಲ್ಲೆಯಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಮೇವಿನ ಲಭ್ಯತೆ ಇದೆ. ಇದನ್ನು ಸರಿಯಾದ ಕ್ರಮದಲ್ಲಿ ರಕ್ಷಿಸಿ, ಬೇಡಿಕೆಗಳಿಗೆ ಅನುಗುಣವಾಗಿ ಸರಬರಾಜು ಮಾಡುವ ವ್ಯವಸ್ಥೆ ಆಗಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಸಮಸ್ಯೆ ಕಂಡುಬಂದಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಇಲ್ಲಿ ವರೆಗೆ ವರದಿ ಆಗಿಲ್ಲ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಕೋಳಿ ಸಾಕಾಣಿಕೆದಾರರಿಗೆ ಸೂಕ್ತ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ಪಶುಪಾಲನೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಳವಾಗುವ ಕುರಿತು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸಾರ್ವಜನಿಕರಲ್ಲಿ ಈ ಕುರಿತು ಸುರಕ್ಷತಾ ಕ್ರಮವಹಿಸುವಂತೆ ಸೂಕ್ತ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಸೇರಿದಂತೆ ಜಿಲ್ಲೆಯ ಎಲ್ಲ ತಹಸೀಲ್ದಾರರು, ತಾಪಂ ಅಧಿಕಾರಿಗಳು, ಪಶುಸಂಗೋಪನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿದ್ದರು.