ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಮುಡಾ ಹಗರಣ ಕುರಿತು ರಾಜ್ಯವ್ಯಾಪಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಭಾನಗಡಿ ಕುರಿತು ಚರ್ಚೆ ಪ್ರಾರಂಭವಾಗಿದೆ. ಪ್ರಾಧಿಕಾರದಲ್ಲಿ ಅಕ್ರಮದ ವಾಸನೆ ಜೋರಾಗಿದೆ.ಹೌದು, 20 ವರ್ಷಗಳ ಹಿಂದೆಯೇ ಸೈಟ್ ಕೊಡುವುದಾಗಿ ಸಾರ್ವಜನಿಕರಿಂದ ವಂತಿಗೆ ತುಂಬಿಸಿಕೊಂಡಿರುವ ಕುಡಾ ಇದುವರೆಗೂ ಒಂದೇ ಒಂದು ನಿವೇಶನ ನೀಡಿದ ಉದಾಹರಣೆ ಇಲ್ಲ. ಈಗ ಮತ್ತೆ ನಿವೇಶನ ನೀಡುವುದಾಗಿ ಹೇಳಿ, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
20 ವರ್ಷಗಳ ಹಿಂದೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ ಲಕ್ಷಾಂತರ ರುಪಾಯಿ ಈಗ ಎಲ್ಲಿದೆ? ಯಾರ ಪಾಲಾಗಿದೆ? ಎನ್ನುವ ಕುರಿತು ಚರ್ಚೆಯಾಗುತ್ತಿದೆ.1998ರಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. 2000ರಲ್ಲಿ ನಿವೇಶನಕ್ಕಾಗಿ ಸಾರ್ವಜನಿಕರಿಂದ ಅರ್ಜಿ ಕರೆಯಲಾಯಿತು. 3500 ಜನ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸುವಾಗ ಬೇಡಿಕೆ ನಿವೇಶನದ ಅಳತೆಗೆ ಅನುಗುಣವಾಗಿ ಹಣ ಪಾವತಿ ಮಾಡಿದ್ದಾರೆ. ಇದಾದ ಮೇಲೆ 2004ರಲ್ಲಿ ಪುನಃ ಅರ್ಜಿ ಕರೆಯಲಾಯಿತು. ಆಗಲೂ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದಾರೆ. ಹೀಗೆ ನಾಲ್ಕೈದು ಸಾವಿರಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದು, ಇದರೊಂದಿಗೆ ಲಕ್ಷಾಂತರ ರುಪಾಯಿ ಪಾವತಿ ಮಾಡಿದ್ದಾರೆ. ಇದ್ಯಾವ ಲೆಕ್ಕವೂ ಪ್ರಾಧಿಕಾರದಲ್ಲಿ ಇಲ್ಲ. ಇದುವರೆಗೂ ಸಾರ್ವಜನಿಕರಿಗೆ ಒಂದೇ ಒಂದು ಸೈಟ್ ನೀಡಿಲ್ಲ.
ಸರೋಜಮ್ಮ ಬಡಾವಣೆ ಮಾಡಲಾಯಿತಾದರೂ ಕೊನೆ ಗಳಿಗೆಯಲ್ಲಿ ಆ ಭೂಮಿಯನ್ನು ಮೆಡಿಕಲ್ ಕಾಲೇಜಿಗೆ ಬಿಟ್ಟುಕೊಡಲಾಯಿತು. ಅದರಲ್ಲಿಯೇ ಉಳಿದಿದ್ದ 84 ನಿವೇಶನಗಳನ್ನು ಹಂಚಿಕೆ ಮಾಡಿದೆಯಾದರೂ ಇನ್ನೂ ಹಸ್ತಾಂತರ ಮಾಡಿಲ್ಲ. ಇದರ ಹೊರತಾಗಿ ಒಂದೇ ಒಂದು ನಿವೇಶನವನ್ನು ಪ್ರಾಧಿಕಾರ ಇದುವರೆಗೂ ಹಂಚಿಕೆ ಮಾಡಿಲ್ಲ ಮತ್ತು ಯಾವುದೇ ಲೇ ಔಟ್ ಸಹ ಮಾಡಿ, ಭೂಮಿ ಸಹ ಗುರುತಿಸಿಲ್ಲ. 20 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದವರು ಇಂದಿಗೂ ನಿವೇಶನ ಸಿಗುತ್ತದೆ ಎಂದು ಕಾಯುತ್ತಾ ಕುಳಿತಿದ್ದಾರೆ.ಮತ್ತೆ ಅರ್ಜಿ ಆಹ್ವಾನ: ಈಗ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಮತ್ತೆ ಅರ್ಜಿ ಆಹ್ವಾನ ಮಾಡಿದೆ. ಈ ಬಾರಿ ಸಾರ್ವಜನಿಕರಿಂದ 20-30 ಅಳತೆಗೆ ನಿವೇಶನಕ್ಕೆ ಅರ್ಜಿ ಸಲ್ಲಿಸುವವರು ₹1 ಸಾವಿರ, 30-40 ಅಳತೆ ನಿವೇಶನಕ್ಕಾಗಿ ₹2 ಸಾವಿರ ಹಾಗೂ ಅದಕ್ಕಿಂತ ದೊಡ್ಡ ನಿವೇಶನಕ್ಕೆ ₹3 ಸಾವಿರ ನಿಗದಿ ಮಾಡಿದ್ದಾರೆ.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಕರೆದಿರುವ ಅರ್ಜಿಗೆ ಸಾರ್ವಜನಿಕರು ಮುಗಿಬಿದ್ದು ಅರ್ಜಿ ಸಲ್ಲಿಸುತ್ತಿದ್ದಾರೆ. ಈಗಾಗಲೇ 2100 ಅರ್ಜಿಗಳು ಸಲ್ಲಿಕೆ ಮಾಡಲಾಗಿದ್ದು, ಇದರಿಂದಲೇ ಬರೋಬ್ಬರಿ ₹30-40 ಲಕ್ಷ ಸಂಗ್ರಹವಾಗಿದೆ.ಈಗ ಅರ್ಜಿ ಸಲ್ಲಿಕೆಯ ಅವಧಿಯನ್ನು ಸೆ. 6ರ ವರೆಗೂ ವಿಸ್ತರಣೆ ಮಾಡಿದ್ದು, ಇನ್ನು ಸಾವಿರಾರು ಜನರು ಅರ್ಜಿ ಸಲ್ಲಿಸಲಿದ್ದಾರೆ.
ಗೋಲ್‌ಮಾಲ್: ನಿವೇಶನ ನೀಡದೆ, ಬಡಾವಣೆ ಅಭಿವೃದ್ಧಿ ಮಾಡದೆ ಕೇವಲ ಅರ್ಜಿ ಕರೆದು ದುಡ್ಡು ಮಾಡುವ ಕಾಯಕಕ್ಕೆ ಪ್ರಾಧಿಕಾರ ಮುಂದಾಗಿದೆಯೇ ಎನ್ನುವ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ. ಕಾರಣ, ಅರ್ಜಿ ಆಹ್ವಾನದ ವೇಳೆಯಲ್ಲಿಯೇ ಹಣ ಮರಳಿಸಲಾಗುವುದಿಲ್ಲ ಎನ್ನುವ ಷರತ್ತು ವಿಧಿಸುತ್ತಿದೆ.ತನಿಖೆ ಅಗತ್ಯ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಕುರಿತು ಸಮಗ್ರ ತನಿಖೆಯ ಅಗತ್ಯವಿದೆ. ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಸಿಎ ಸೈಟ್‌ಗಳನ್ನು ಮಾರಿಕೊಳ್ಳುತ್ತದೆ. ಅದರ ಲೆಕ್ಕಪತ್ರವನ್ನು ಸಾರ್ವಜನಿಕರಿಗೆ ಇದುವರೆಗೂ ನೀಡಿಲ್ಲ. ಹೀಗಾಗಿ ಮೂಡಾ ಮಾದರಿಯಲ್ಲಿಯೇ ಕುಡಾದಲ್ಲಿಯೂ ಹಗರಣದ ವಾಸನೆ ಕಾಣುತ್ತಿದ್ದು, ತನಿಖೆಯ ಅಗತ್ಯವಿದೆ ಎಂಬ ಆಗ್ರಹ ಕೇಳಿಬಂದಿದೆ.ಸಾರ್ವಜನಿಕರಿಂದ ಹಿಂದೆಯೂ ಅರ್ಜಿ ಕರೆದಿರುವುದು ನಿಜ. ಈಗಲೂ ಕರೆದಿದ್ದೇವೆ. ಅಲ್ಲವೂ ಸೇರಿ ಏಕಕಾಲದಲ್ಲಿ ನಾಲ್ಕೂವರೆ ಸಾವಿರ ನಿವೇಶನ ಹಂಚುವ ಗುರಿ ಹೊಂದಿದ್ದೇವೆ ಎಂದು ಕುಡಾ ಆಯುಕ್ತ ಯೋಗಾನಂದ ಹೇಳಿದರು.
ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ನಿವೇಶನ ನೀಡಿಲ್ಲ. ಸಾವಿರಾರು ಅರ್ಜಿಗಳು ಕಳೆದ 20 ವರ್ಷಗಳಿಂದ ಕೊಳೆಯುತ್ತಿವೆ. ಈಗ ಅರ್ಜಿ ಆಹ್ವಾನ ಮಾಡುವುದು ಎಷ್ಟು ಸರಿ? ಮೊದಲು ಒಂದು ಬಡಾವಣೆ ಮಾಡಿ, ನಿವೇಶನ ಹಂಚಿಕೆಯಾಗುವಂತಾಗಬೇಕು ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಮೈನಳ್ಳಿ ಹೇಳಿದರು.ಹಣ ಸಂಗ್ರಹ ಮಾಡುವ ದಂಧೆ ಮಾಡಿಕೊಂಡಂತೆ ಕಾಣುತ್ತದೆ. ಈ ಹಿಂದೆ ಕರೆದಿರುವ ಅರ್ಜಿಗಳಿಗೆ ನಿವೇಶನ ನೀಡಿಲ್ಲ, ಈಗ ಮತ್ತೆ ಅರ್ಜಿ ಕರೆಯುವುದು ಎಷ್ಟು ಸರಿ? ಎಂದು ಕುಡಾ ಮಾಜಿ ಸದಸ್ಯರಾದ ಮಧುರಾ ಕರಣಂ ಹೇಳುತ್ತಾರೆ.