ಸರ್ಕಾರದಿಂದ ಪಂಚಾಯ್ತಿ ಮಟ್ಟದಲ್ಲಿ ಹವಾಮಾನ ಬದಲಾವಣೆ ಬಗ್ಗೆ ಏನೇನು ಕೆಲಸ ಮಾಡಬೇಕು ಎಂಬುದನ್ನು ಕ್ರಿಯೆ ಯೋಜನೆಯಲ್ಲಿ ಸೇರಿಸಬೇಕಿದೆ. ಈ ಕುರಿತು ಖಾಸಗಿ ಮಸೂದೆ ಮಂಡನೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಮಸೂದೆ ಅಂಗೀಕಾರವಾದರೆ ರಾಜ್ಯದ ಎಲ್ಲಾ ಕಡೆ ಒಂದೇ ರೀತಿ ಕ್ರಮಗಳನ್ನು ಅನುಸರಿಸಬಹುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹವಾಮಾನ ಬದಲಾವಣೆಯಿಂದಾಗಿ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಖಾಸಗಿ ಮಸೂದೆಯನ್ನು ಸದನದ ಮುಂದಿಡಲಾಗಿದೆ. ಶೀಘ್ರದಲ್ಲಿ ಆ ಮಸೂದೆ ಜಾರಿಗೊಳ್ಳುವ ಸಾಧ್ಯತೆ ಇದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಅರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ಹಾಗೂ ಆನೋಡ್ ಸಂಸ್ಥೆ ಸಹಯೋದಲ್ಲಿ ಆಯೋಜಿಸಿದ್ದ ‘ಹವಾಮಾನ ಬದಲಾವಣೆ ಮತ್ತು ಹವಾಮಾನ ಬದವಾವಣೆಯ ಪರಿಣಾಮವನ್ನು ತಡೆಗಟ್ಟುವಲ್ಲಿ ಗ್ರಾಪಂಗಳ ಪಾತ್ರ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದಿಂದ ಪಂಚಾಯ್ತಿ ಮಟ್ಟದಲ್ಲಿ ಹವಾಮಾನ ಬದಲಾವಣೆ ಬಗ್ಗೆ ಏನೇನು ಕೆಲಸ ಮಾಡಬೇಕು ಎಂಬುದನ್ನು ಕ್ರಿಯೆ ಯೋಜನೆಯಲ್ಲಿ ಸೇರಿಸಬೇಕಿದೆ. ಈ ಕುರಿತು ಖಾಸಗಿ ಮಸೂದೆ ಮಂಡನೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಮಸೂದೆ ಅಂಗೀಕಾರವಾದರೆ ರಾಜ್ಯದ ಎಲ್ಲಾ ಕಡೆ ಒಂದೇ ರೀತಿ ಕ್ರಮಗಳನ್ನು ಅನುಸರಿಸಬಹುದು ಎಂದರು.

ಹವಾಮಾನ ಬದಲಾವಣೆಯಿಂದ ಭೂಮಿ ಮೇಲೆ ದುಷ್ಪರಿಣಾಮ ಉಂಟಾಗಿದೆ. ಅದರಲ್ಲೂ ಗ್ರಾಮೀಣ ಜನರು, ಕೃಷಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದನ್ನು ತಡೆಗಟ್ಟಲು ಪಂಚಾಯ್ತಿ ಮಟ್ಟದಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎಂಬುದರ ಬಗ್ಗೆ ಅನೋಡ್ ಸಂಸ್ಥೆಯವರು ತಾಲೂಕಿನ 14 ಗ್ರಾಪಂಗಳಲ್ಲಿ ಕಾರ್ಯಾಗಾರ ನಡೆಸುತ್ತಿದ್ದಾರೆ ಎಂದರು.

ಬಿಸಿಲಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಈಗಾಗಲೇ ಉತ್ತರ ಕರ್ನಾಟಕ ಭಾಗದ ಕಲ್ಬುರ್ಗಿಯಲ್ಲಿ ಕೂಲಿ ಕಾರ್ಮಿಕರು ಹಾಗೂ ಸರ್ಕಾರಿ ಕಚೇರಿಗಳಲ್ಲಿ 11ರಿಂದ ಮಧ್ಯಾಹ್ನ 3ರವರೆಗೆ ಕೆಲಸ ಮಾಡಬಾರದು ಎಂಬ ನಿರ್ಧಾರ ಮಾಡಲಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತಿದೆ. ಹೀಗಾಗಿ ಅದನ್ನು ತಡೆಗಟ್ಟಲು ಹಲವಾರು ಕ್ರಮಗಳ ಅನುಸರಣೆ ಮಾಡಬೇಕಿದೆ ಎಂದರು.

ಆನೋಡ್ ಸಂಸ್ಥೆಯ ಹುಣಸೂರು ರಾಜಾ, ಪ್ರದೀಪ್ ಕಾರ್ಯಾಗಾರದ ನಿರ್ವಹಣೆ ಮಾಡಿದರು. ಈ ವೇಳೆ ಹವಾಮಾನ ಕುರಿತು ಪರಿಚಯ, ಗುಂಪು ಚಟುವಟಿಕೆ, ಗ್ರಾ.ಪಂಗೆ ಸಲಹೆಗಳ ಪಟ್ಟಿ ಹಾಗೂ ಯೋಜನೆ ತಯಾರಿ ಕುರಿತು ತಿಳಿಸಿಕೊಡಲಾಯಿತು.

ಗ್ರಾಪಂ ಅಧ್ಯಕ್ಷ ಕೆ.ರವಿಕುಮಾರ್, ಸದಸ್ಯೆ ರೂಪಾ, ಪಿಡಿಒ ರಘು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆ.ಎನ್.ವಿಜಯಕುಮಾರ್, ಪುಟ್ಟಣ್ಣಯ್ಯ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ರಣಜಿತ್, ತಾಪಂ ಇಒ ಎಂ.ಎಸ್.ವೀಣಾ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಲವೇಗೌಡ, ಆನೋಡ್ ಸಂಸ್ಥೆ ಲಿಂಗದೇವರು, ಸೊನಾಲಿ ಶ್ರೀವಾಸ್ತವ, ಅಸರ್ ಸಂಸ್ಥೆಯ ಸುದೀಪ್ ಇತರರಿದ್ದರು.