ವಳೆಗೆರೆಹಳ್ಳಿ ಗ್ರಾಮದ ಪಟಲದಮ್ಮ ದೇವಾಲಯದ ಬಳಿ ಇರುವ ವಿ.ಎಂ.ಶ್ರೀನಿವಾಸ್ ಅವರ ಮನೆ ಬಳಿ ಇದ್ದ ದನದ ಕೊಟ್ಟಿಗೆ ಮೇಲೆ ರಾತ್ರಿ 9ರ ಸುಮಾರಿಗೆ ದಾಳಿ ನಡೆಸಿದ ಚಿರತೆ ಕೊಟ್ಟಿಗೆಯಲ್ಲಿದ್ದ ನಾಲ್ಕು ಕುರಿ ಹಾಗೂ ಎರಡು ಮರಿ ಕುರಿಗಳನ್ನು ಸಮೀಪದ ಕಬ್ಬಿನ ಗದ್ದೆಗೆ ಎಳೆದೊಯ್ದು ತಿಂದು ಹಾಕಿದೆ.

ಮದ್ದೂರು:

ದನದ ಕೊಟ್ಟಿಗೆ ಮೇಲೆ ಚಿರತೆ ದಾಳಿ ನಡೆಸಿ ಕುರಿಗಳನ್ನು ತಿಂದು ಹಾಕಿರುವ ಘಟನೆ ತಾಲೂಕಿನ ವಳೆಗೆರೆಹಳ್ಳಿಯಲ್ಲಿ ಭಾನುವಾರ ರಾತ್ರಿ ಜರುಗಿದೆ.

ಗ್ರಾಮದ ಪಟಲದಮ್ಮ ದೇವಾಲಯದ ಬಳಿ ಇರುವ ವಿ.ಎಂ.ಶ್ರೀನಿವಾಸ್ ಅವರ ಮನೆ ಬಳಿ ಇದ್ದ ದನದ ಕೊಟ್ಟಿಗೆ ಮೇಲೆ ರಾತ್ರಿ 9ರ ಸುಮಾರಿಗೆ ದಾಳಿ ನಡೆಸಿದ ಚಿರತೆ ಕೊಟ್ಟಿಗೆಯಲ್ಲಿದ್ದ ನಾಲ್ಕು ಕುರಿ ಹಾಗೂ ಎರಡು ಮರಿ ಕುರಿಗಳನ್ನು ಸಮೀಪದ ಕಬ್ಬಿನ ಗದ್ದೆಗೆ ಎಳೆದೊಯ್ದು ತಿಂದು ಹಾಕಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯ ಅಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಚಿರತೆ ಸೆರೆ ಹಿಡಿಯಲು ಬೋನ್ ಇರಿಸಲಾಗುವುದು. ರೈತರು ಯಾವುದೇ ಆತಂಕ ಪಡಬಾರದು ಎಂದು ಧೈರ್ಯ ಹೇಳಿದ್ದಾರೆ.

ಚಿರತೆ ದಾಳಿಯಿಂದ ಕುರಿಗಳನ್ನು ಕಳೆದುಕೊಂಡು ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿರುವ ರೈತ ವಿ.ಎಂ.ಶ್ರೀನಿವಾಸ್ ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಸಿ.ಉಮೇಶ್ ಒತ್ತಾಯಿಸಿದ್ದಾರೆ.

ಚಿರತೆ ದಾಳಿಗೆ ಮೇಕೆ ಸಾವು

ಹಲಗೂರು: ಚಿರತೆ ದಾಳಿಯಿಂದ ಒಂದು ಮೇಕೆ ಮೃತಪಟ್ಟು ಹಸು ಗಾಯಗೊಂಡಿರುವ ಘಟನೆ ಸಮೀಪದ ಹುಲ್ಲಹಳ್ಳಿಯಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ.

ಗ್ರಾಮದ ನಾಗೇಂದ್ರ ಅವರು ಹಸು ಮತ್ತು ಮೇಕೆ ಸಾಕಾಣಿಕೆ ಮಾಡಿಕೊಂಡು ಜೀವನ ಜೀವನ ನಡೆಸುತ್ತಿದ್ದರು. ಮನೆಯ ಹಿಂದೆ ಇರುವ ದನದ ಕೊಟ್ಟಿಗೆಯಲ್ಲಿ ರಾತ್ರಿ ಹಸು ಮತ್ತು ಮೇಕೆಗಳನ್ನು ಕಟ್ಟಿದ್ದರು. ಸೋಮವಾರ ಬೆಳಗ್ಗೆ ಎದ್ದು ನೋಡಿದಾಗ ಹಸಿವಿನ ಕಾಲಿನ ಭಾಗದಲ್ಲಿ ರಕ್ತ ಸ್ರಾವವಾಗುತ್ತಿರುವುದನ್ನು ಗಮನಿಸಿದ್ದಾರೆ.

ಒಂದು ಮೇಕೆಯ ಕತ್ತಿನ ಭಾಗದಲ್ಲಿ ಚಿರತೆ ಕಚ್ಚಿದ್ದು, ಒದ್ದಾಡಿ ಮೃತಪಟ್ಟಿದೆ. ಚಿರತೆ ದಾಳಿ ಕಂಡು ಗ್ರಾಮದ ಜನತೆ ಭಯ ಭೀತರಾಗಿದ್ದಾರೆ. ಕೂಡಲೇ ಸಂಬಂಧಿಸಿದ ಅರಣ್ಯ ಇಲಾಖೆಯವರು ಬೋನ್ ಇಟ್ಟು ಚಿರತೆ ಸೆರೆಗೆ ಕ್ರಮವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.