ಸಾರಾಂಶ
ನಾಗರಾಜ್ ನ್ಯಾಮತಿ
ಕನ್ನಡಪ್ರಭ ವಾರ್ತೆ ಸುರಪುರನಗರದ ಹೃದಯ ಭಾಗದಲ್ಲಿರುವ ಮುಖ್ಯ ಅಂಚೆಕಚೇರಿ ಕಾಂಪೌಂಡ್ ಮತ್ತು ಸುತ್ತಮುತ್ತಲಿನ ಜಾಗದಲ್ಲಿ ಗೂಡಂಗಡಿಗಳು ತಲೆ ಎತ್ತಿದ್ದು, ಗಲಾಟೆ, ವಾಹನಗಳ ಶಬ್ದದಿಂದ ಅಂಚೆ ಸಿಬ್ಬಂದಿ - ಗ್ರಾಹಕರು ನೆಮ್ಮದಿಯಾಗಿ ಕೆಲಸ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿರುವ ಅಂಚೆಕಚೇರಿ ಸುತ್ತಮುತ್ತ ವ್ಯಾಪಾರಿಗಳು ಗೂಡಂಗಡಿ ಆರಂಭಿಸಿದ್ದಾರೆ. ಕಚೇರಿ ಎದುರು ಮತ್ತು ಬಲ ಭಾಗ ಎಲ್ಲಲ್ಲೂ ಗೂಡಂಗಡಿ ಹಾವಳಿ. ಏಳೆಂಟು ವರ್ಷ ಹಿಂದೆ ಗೂಡಂಗಡಿ ಇದ್ದಿಲ್ಲ. ನಗರ ಬೆಳೆದಂತೆ, ಜನಸಂಖ್ಯೆ ಹೆಚ್ಚಾದಂತೆ ಗೂಡಂಗಡಿಗಳೂ ಬೆಳೆದು ನಿಂತಿವೆ.ಅಂಚೆಕಚೇರಿಗೆ ಬರಬೇಕೆಂದರೆ ಆಟೋಗಳು, ಬೈಕ್‌ಗನ್ನು ದಾಟುವ ಕಿರಿಕಿರಿ. ಅಂಚೆ ಕಚೇರಿ ಮುಂದೆ ಬೈಕ್‌ಗಳು ನಿಲ್ಲುತ್ತವೆ. ಆಟೋಗಳು ನಿಲ್ಲುತ್ತವೆ. ಇದರಿಂದ ಅಂಚೆ ಗ್ರಾಹಕರು, ಏಜೆಂಟರ್‌ಗಳು ಕಚೇರಿ ಒಳಗಡೆ ಬರಲು ಹರಸಾಹಸ ಮಾಡಬೇಕಿದೆ. ಮಕ್ಕಳು, ವೃದ್ಧರು, ಆಶಕ್ತರು ಬರುವುದು ತುಸು ಕಷ್ಟವೇ ಸರಿ. ಇದರಿಂದ ಅಂಚೆಕಚೇರಿ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ವಾಗ್ವಾದಗಳು ನಡೆಯುತ್ತಿವೆ. ವಾಹನ ನಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಲ್ಲವೇ? ನಾವು ಒಳಗಡೆ ಹೇಗೆ ಬಂದು ಹೋಗಬೇಕು? ಎಂದು ಗ್ರಾಹಕರು ಸಿಬ್ಬಂದಿಯನ್ನು ಕೇಳುತ್ತಲೇ ಇರುತ್ತಾರೆ.
ಆಟೋ ದರ್ಬಾರ್:ದರಬಾರ ರಸ್ತೆ ಮಾರ್ಗವಾಗಿ ಹೋಗುವ ಆಟೋಗಳು ಅಂಚೆಕಚೇರಿ ಬಾಗಿಲಿಗೆ ಬಂದು ನಿಲ್ಲುತ್ತವೆ. ಸಿಬ್ಬಂದಿ ಎಷ್ಟೇ ಹೇಳಿದರೂ ಕ್ಯಾರೆ ಎನ್ನಲ್ಲ. ಇದರಿಂದ ಗ್ರಾಹಕರು, ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ಆದರೆ ಪೊಲೀಸ್ ಮಾತ್ರ ಇಲ್ಲಿ ಜಾಣ ಕುರುಡು.
ಅಂಚೆಕಚೇರಿ ಎದುರು ಏಳೆಂಟು, ಬಲಭಾಗದಲ್ಲಿ ಏಳೆಂಟು ಗೂಡಂಗಡಿಗಳಿವೆ. ತಳ್ಳು ಗಾಡಿಯಲ್ಲಿ ಹೋಟೆಲ್, ಫೋಟೋ ಮಾರಾಟ, ಎಳೆನೀರು, ಪಾನ್‌ಶಾಪ್, ಇಸ್ತ್ರಿ, ಮಡಿಕೆ ವ್ಯಾಪಾರ, ಹಣ್ಣಿನ ವ್ಯಾಪಾರದ ಅಂಗಡಿಗಳಿವೆ. ಇವುಗಳಿಂದ ತ್ಯಾಜ್ಯವೂ ಊಂಟಾಗಿ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಇಲ್ಲಿ ಸೊಳ್ಳೆಗೂ ಹೆಚ್ಚು. ಸಿಬ್ಬಂದಿ - ಜನ ಡೆಂಘೀ ಮತ್ತಿತರ ಕಾಲೆಗೂ ತುತ್ತಾಗಬಹುದು. ಗ್ರಾಹಕರು, ಅಂಚೆಕಚೇರಿ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳಿಗೆ ಮನವಿ ನೀಡಿ 40 ದಿನವಾದರೂ ಕ್ರಮವಿಲ್ಲ.ಪ್ರಭಾವ:
ಇಲ್ಲಿ ರಾಜಕೀಯ ಪ್ರಭಾವವೂ ಉಂಟು. ಗೂಡಂಗಡಿ ಹಾಕದಂತೆ ವ್ಯಾಪಾರಿಗಳಿಗೆ ಹೇಳಿದರೆ ರಾಜಕೀಯ ಮುಖಂಡರಿಂದ ಫೋನ್ ಮಾಡಿಸಿ ಪ್ರಭಾವ ಬೀರುತ್ತಾರೆ ಎಂಬುದು ಕಚೇರಿ ಸಿಬ್ಬಂದಿ ಅಂಬೋಣ. ಇದಕ್ಕೆಲ್ಲ ಪರಿಹಾರ ದೊರೆಯುವುದು ಎಂದು?.ಪೋಸ್ಟ್ ಆಫೀಸ್ ಮುಂದೆ ಹಾಗೂ ಸುತ್ತಮುತ್ತಲೂ ಸಣ್ಣಪುಟ್ಟ ವ್ಯಾಪಾರಿಗಳಿಂದ ಇನ್ನಿಲ್ಲದಂತೆ ತೊಂದರೆ ಎದುರಿಸುವಂತಾಗಿದೆ. ಆಫೀಸ್ ಕಾಂಪೌಂಡ್ ಒತ್ತುವರಿ ಮಾಡಿಕೊಂಡು ಫುಟ್‌ಪಾತ್ ಮೇಲೆ ಶೆಡ್ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ತಾತ್ಕಲಿಕ ಪರಿಹಾರದ ನಮಗೆ ಬೇಡ. ಶಾಶ್ವತ ಪರಿಹಾರ ಬೇಕಿದೆ. ಇಲ್ಲದಿದ್ದರೆ ಇಲ್ಲದಿದ್ದರೆ ಅಂಚೆ ಕೇಂದ್ರ ಕಚೇರಿಗೆ ಪತ್ರ ಬರೆಯುತ್ತೇವೆ.
ಶ್ರೀದೇವಿ ಎನ್. ಭಜಂತ್ರಿ, ಪೋಸ್ಟ್ ಮಾಸ್ಟರ್, ಸುರಪುರಅಂಚೆ ಕಚೇರಿಯವರು ಸುತ್ತಮುತ್ತಲಿನ ಜಾಗ ಅತಿಕ್ರಮಿಸಿಕೊಂಡು ಶೆಡ್ ಮತ್ತು ಗೂಡಂಗಡಿಗಳನ್ನು ನಿರ್ಮಿಸಿಕೊಂಡಿರುವ ಕುರಿತು ಮನವಿ ನೀಡಿದ್ದಾರೆ. ಶೀಘ್ರವೇ ಪೊಲೀಸ್ ಇಲಾಖೆ ಮತ್ತು ನಗರಸಭೆ ಜಂಟಿಯಾಗಿ ತೆರವು ಕಾರ್ಯವನ್ನು ಮಾಡುತ್ತೇವೆ.
ಆನಂದ ವಾಘ್ಮೋಡೆ, ಪಿಐ, ಸುರಪುರ.ಚುನಾವಣೆ ನಿಮಿತ್ತ ಬೇರೆಡೆ ವರ್ಗಾವಣೆಯಾಗಿತ್ತು. ಮನವಿ ನೀಡಿರುವುದು ನನ್ನ ಗಮನಕ್ಕಿಲ್ಲ. ಮನವಿ ಪರಿಶೀಲಿಸಲಾಗುವುದು. ಏಕಾಏಕಿ ತೆರವುಗೊಳಿಸುವುದು ಸೂಕ್ತವಲ್ಲ. ಆದ್ದರಿಂದ ಮಾನವೀಯತೆ ಆಧಾರದ ಮೇಲೆ ಗೂಡಂಗಡಿಗಳ ವ್ಯಾಪಾರಿಗಳಿಗೆ ಒಂದು ವಾರದ ಗಡುವು ನೀಡಿ ತೆರವುಗೊಳಿಸಲು ತೀರ್ಮಾನಿಸಲಾಗುತ್ತದೆ.
ಜೀವನ್ ಕಟ್ಟಿಮನಿ, ಪೌರಾಯುಕ್ತ, ಸುರಪುರ.