ಸಾರಾಂಶ
ಧಾರವಾಡ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಯುವಕರು ಉತ್ಸಾಹದಿಂದ ಏನೇನೋ ಪೋಸ್ಟ್ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅದರಲ್ಲೂ ಕೋಮು-ಸೌಹಾರ್ದಕ್ಕೆ ಸಂಬಂಧಿಸಿದ ವಿಚಾರಗಳ ಪೋಸ್ಟ್ ಹಾಕುವಾಗ ಎಚ್ಚರಿಕೆ ಸಹ ವಹಿಸುತ್ತಿಲ್ಲ. ಇಲ್ಲಿಯ ಯುವಕನೋರ್ವ ಹಿಂದೂ ಧರ್ಮದ ವಿರುದ್ಧ ಸ್ಟೇಟಸ್ ಇಟ್ಟುಕೊಂಡು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ನಗರದ ಚೈತನ್ಯ ಕಾಲೋನಿಯ ನಿವಾಸಿ ಸಲೀಂ ಮಮದಾಪುರ ಹಿಂದೂ ಹಾಗೂ ಮುಸ್ಲಿಮರ ಪ್ರಮುಖ ಹಬ್ಬಗಳ ದಿನವೇ ಸ್ಟೇಟಸ್ ಇಟ್ಟುಕೊಂಡು ತೊಂದರೆಗೆ ಸಿಲುಕಿದ್ದಾನೆ. ನಿತ್ಯವೂ ಚೈತನ್ಯ ನಗರದಿಂದ ಜಕಣಿ ಬಾವಿ ಬಳಿಯ ಪ್ರಾರ್ಥನಾ ಮಂದಿರಕ್ಕೆ ಬರುತ್ತಿದ್ದ ಸಲೀಂ ಇಲ್ಲಿಯೇ ಗೆಳೆಯರೊಂದಿಗೆ ನಮಾಜ್ ಮಾಡುತ್ತಿದ್ದನು. ತನ್ನ ಧರ್ಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಈತ ಯುಗಾದಿ ದಿನವೇ ಹಿಂದೂ ಧರ್ಮಕ್ಕೆ ಅವಹೇಳನ ಮಾಡುವಂಥ ಫೋಟೋವೊಂದನ್ನು ಸ್ಟೇಟಸ್ ಇಟ್ಟುಕೊಂಡಿದ್ದನು. ಇದು ಬಜರಂಗದಳದ ಕಾರ್ಯಕರ್ತರಿಗೆ ಗೊತ್ತಾಗಿದೆ. ಈ ವಿಚಾರ ಪೊಲೀಸರಿಗೂ ತಿಳಿದು ಮುನ್ನೆಚ್ಚರಿಕೆ ಕ್ರಮವಾಗಿ ಜಕಣಿ ಬಾವಿ ಪ್ರದೇಶದಲ್ಲಿ ಈತನನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದರು.
ಈ ಮೊದಲು ಸಲೀಂ ಧಾರ್ಮಿಕ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದು, ಆತನ ಸ್ನೇಹಿತರು ಬುದ್ದಿ ಹೇಳಿ ಡಿಲಿಟ್ ಮಾಡಿಸಿದ್ದರು. ಅಲ್ಲದೇ ಪವಿತ್ರ ರಂಜಾನ್ ತಿಂಗಳಲ್ಲಂತೂ ಇಂಥ ಕೆಲಸ ಮಾಡಬೇಡ. ನೀನು ಮಾಡುವ ಕೆಲಸದಿಂದ ಹಬ್ಬದ ವೇಳೆ ಕೋಮು ಸೌಹಾರ್ದಕ್ಕೆ ಧಕ್ಕೆ ಆಗುತ್ತದೆ ಎಂಬ ಬುದ್ದಿ ಹೇಳಿದ್ದರು. ಆದರೂ ಬುದ್ಧಿ ಕಲಿಯದ ಸಲೀಂ ಮತ್ತೆ ಅಂಥದ್ದೇ ಸ್ಟೇಟಸ್ ಇಟ್ಟುಕೊಂಡಿದ್ದನು. ಸಲೀಂನನ್ನು ವಶಕ್ಕೆ ಪಡೆದ ನಗರ ಠಾಣೆ ಪೊಲೀಸರು ಆತನನ್ನು ವಿದ್ಯಾಗಿರಿ ಠಾಣೆಯಲ್ಲಿ ಕೆಲ ಹೊತ್ತು ಇಟ್ಟಿದ್ದರು. ಈ ವೇಳೆ ಅಲ್ಲಿಗೆ ಬಂದ ಆತನ ತಾಯಿ ಮತ್ತು ಸಹೋದರ, ಪೊಲೀಸರು ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಂದಿಗೆ ವಾದ ಮಾಡಿದ್ದಾರೆ.ಇದೀಗ ಹಿಂದೂಪರ ಸಂಘಟನೆ ಕಾರ್ಯಕರ್ತರು ನೀಡಿರುವ ದೂರಿನ ಆಧಾರದ ಮೇಲೆ ಸಲೀಂ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ.