ವಿಜಯನಗರೋತ್ತರ ಪಾಳೆಗಾರರ ಕಾಲದ ದಾನ ಶಾಸನ ಪತ್ತೆ

| Published : Feb 13 2025, 12:46 AM IST

ಸಾರಾಂಶ

ಸೂರ್ಯ- ಚಂದ್ರರ ಚಿಹ್ನೆಗಳಿದ್ದರೆ ಮಧ್ಯಭಾಗದಲ್ಲಿ ಬಸವ ಎಂಬ ಪದ ಬಳಸಲಾಗಿದೆ.

ಕುರುಗೋಡು: ತಾಲೂಕಿನ ಬಾದನಹಟ್ಟಿ ಗ್ರಾಮದ ಹೊರವಲಯದಲ್ಲಿ ವಿಜಯನಗರೋತ್ತರ ಪಾಳೆಗಾರರ ಕಾಲದ ಶಾಸನವನ್ನು ಪತ್ತೆ ಹಚ್ಚಲಾಗಿದೆ.

ಶಾಪುರ ದೇವೇಂದ್ರ, ಜಿ.ದೇವರಾಜ, ತಿಮ್ಮರೆಡ್ಡಿ ಸಹಕಾರದಿಂದ ವಿಜಯನಗದ ತಿರುಗಾಟ ಸಂಶೋಧನಾ ತಂಡದ ಎಚ್.ತಿಪ್ಪೇಸ್ವಾಮಿ, ಗೋವಿಂದ, ಕೆ.ವೀರಭದ್ರಗೌಡ. ಕೃಷ್ಣೇಗೌಡ, ವೀರಾಂಜಿನೇಯ, ಸಂಶೋಧನಾರ್ಥಿ ಎಚ್.ರವಿ, ಮಂಜುನಾಥ ಸೇರಿ ಈ ಶಾಸನ ಪತ್ತೆ ಹಚ್ಚಿದ್ದಾರೆ.

೧೨ಅಡಿ ಎತ್ತರ, ೩ ಅಡಿ ಅಗಲದ ಶಾಸನದ ಎಡ ಮತ್ತು ಬಲ ಬದಿಯಲ್ಲಿ ಸೂರ್ಯ- ಚಂದ್ರರ ಚಿಹ್ನೆಗಳಿದ್ದರೆ ಮಧ್ಯಭಾಗದಲ್ಲಿ ಬಸವ ಎಂಬ ಪದ ಬಳಸಲಾಗಿದೆ. ಕನ್ನಡ ಭಾಷೆಯಲ್ಲಿ ೧೫ ಸಾಲುಗಳಿರುವ ಶಾಸನ ೧೬೬೪ರ ಕಾಲಕ್ಕೆ ಸೇರಿದೆ. ಈ ಅವಧಿಯಲ್ಲಿ ಕುರುಗೋಡಿನಲ್ಲಿ ಪಾಳೆಗಾರ ಇಮ್ಮಡಿ ಯಲ್ಯನಾಯಕರ ಮಗನಾದ ಬಾದನಹಟ್ಟಿ ಬಸವನಗೌಡ ಆಳ್ವಿಕೆ ನಡೆಸುತ್ತಿದ್ದ. ಸುಖ ಸಂತೋಷ ಪರಿಯಂತ ಆಧಾರಪೂರ್ವಕವಾಗಿ ರಾಯರೇಖೆಯಲ್ಲಿ ಪಡೆದ ಮಾನ್ಯದಲ್ಲಿ ಹಿರೇಬಾಗಣ ಗೌಡನಿಗೆ ಗದ್ಯಾಣ, ರಣಗೌಡನಿಗೆ ಭತ್ರಿಕೆ (ಕೊಡುಗೆ) ನೀಡಲಾಗಿತ್ತು. ಈ ಜಮೀನನ್ನು ಕವಲುಸೇವೆ ಮಾಡಿಕೊಡಲು ಮಜಕೂರನಿಗೆ ಕೊಡಬೇಕು. ಹಾಗೆಯೇ ದಕ್ಷಿಣ ಮೂಡಲ ದಿಕ್ಕಿನ ಅಂದರೆ ಈಶಾನ್ಯ ದಿಕ್ಕಿನಲ್ಲಿರುವ ಮೂರ್ತಿಗೆ ಆರತಿ ಮಾಡಿಕೊಂಡು ಜಮೀನನ್ನು ಅನುಭವಿಸಬೇಕೆಂದು ದಾನ ನೀಡಿದ ವಿವರವಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಚ್.ತಿಪ್ಪೇಸ್ವಾಮಿ ತಿಳಿಸಿದರು.

ಕುರುಗೋಡಿನ ಬಾವಿಯ ನೀರಗೌಡರ ಮಾನ್ಯದ ಮಹಾಂತಯ್ಯ ಗೌಡರ ಪುತ್ರರಿಗೆ ತೋಯ ಹಾಲಬಾವಿ ದಾನ ನೀಡಿದರು. ಇಂದಿನ ಹಾಲಬಾವಿ ಮೂಲೆ ಬಗ್ಗೆ ಉಲ್ಲೇಖವಿರುವ ನಾಲ್ಕು ಸಾಲಿನ ಮತ್ತೊಂದು ಶಾಸನ ಕುರುಗೋಡಿನಲ್ಲಿ ಪತ್ತೆಯಾಗಿದೆ. ಇದು ೧೦ನೇ ಶತಮಾನದ ಪಾಳೆಗಾರರಿಗೆ ಸಂಬಂಧಿಸಿದ ದಾನ ಶಾಸನವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಡಾ.ಗೋವಿಂದ ಮಾಹಿತಿ ನೀಡಿದರು.

ಕುರುಗೋಡು ತಾಲೂಕಿನ ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ವಿಜಯನಗದ ತಿರುಗಾಟ ಸಂಶೋಧನಾ ತಂಡ ಪತ್ತೆ ಹಚ್ಚಿದ ಅಪ್ರಕಟಿತ ಪಾಳೆಗಾರರ ಶಾಸನ