ಸಾರಾಂಶ
ಶಾಸಕ ವೇದವ್ಯಾಸ ಕಾಮತ್ ಅವರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಬೆಂಬಲಿಗ ಅವಾಚ್ಯವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಯಕರು ತೇಪೆ ಹಚ್ಚಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಬಿಜೆಪಿಯಲ್ಲೂ ಬಣಗಳ ಬಡಿದಾಟ ಆರಂಭವಾಗಿದೆಯೇ? ಈ ಬಗ್ಗೆ ಪುಷ್ಟಿ ನೀಡುವಂತೆ ಪ್ರಕರಣವೊಂದು ಮಂಗಳೂರಿನ ಫುಡ್ ಫೆಸ್ಟಿವಲ್‌ನಲ್ಲಿ ಸಂಭವಿಸಿದೆ. ದ.ಕ. ಬಿಜೆಪಿ ಸಂಸದ ಹಾಗೂ ಮಂಗಳೂರು ದಕ್ಷಿಣ ಶಾಸಕರ ಬೆಂಬಲಿಗರ ನಡುವೆ ಮುಸುಕಿನ ಯುದ್ಧ ನಡೆದಿದ್ದು, ಮಂಗಳೂರು ಆಹಾರ ಉತ್ಸವದಲ್ಲಿ ಶಾಸಕ ವೇದವ್ಯಾಸ ಕಾಮತ್‌ಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಬೆಂಬಲಿಗರು ನಿಂದಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ.ಇದೇ ವಿಚಾರವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಆರೋಪ ಪ್ರತ್ಯಾರೋಪಗಳು ಶುರುವಾಗಿವೆ. ಶಾಸಕ ವೇದವ್ಯಾಸ್ ಕಾಮತ್‌ನ್ನು ಸಂಸದರ ಬೆಂಬಲಿಗರು ನಿಂದಿಸಿರುವುದು ಸಂಸದ ವರ್ಸಸ್ ಶಾಸಕರ ಬೆಂಬಲಿಗರ ನಡುವೆಯೂ ಮನಸ್ತಾಪಕ್ಕೆ ಕಾರಣವಾಗಿದೆ.
ಮಂಗಳೂರು ಫುಡ್‌ಫೆಸ್ಟ್ ದ.ಕ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ನಡೆಯುತ್ತಿದೆ. ಶಾಸಕ ವೇದವ್ಯಾಸ್ ಕಾಮತ್ ಆಹ್ವಾನದ ಮೇರೆಗೆ ಫುಡ್ ಫೆಸ್ಟ್‌ಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಬೆಂಬಲಿಗರೊಂದಿಗೆ ಆಗಮಿಸಿದ್ದರು. ಈ ವೇಳೆ ಶಾಸಕ ವೇದವ್ಯಾಸ್ ಕಾಮತ್ ಅವರು ಸಂಸದರನ್ನು ಸ್ಮರಣಿಕೆ ನೀಡಲೆಂದು ವೇದಿಕೆಗೆ ಆಹ್ವಾನಿಸಿದ್ದರು. ಆದರೆ ವೇದಿಕೆ ಏರಿ ಸ್ಮರಣಿಕೆ ಸ್ವೀಕರಿಸಲು ಸಂಸದರು ನಿರಾಕರಿಸಿದರು ಎಂಬುದು ವ್ಯಕ್ತಗೊಂಡ ಆರೋಪ. ಇದೇ ವಿಚಾರಕ್ಕೆ ಸಂಸದ ಕ್ಯಾ.ಚೌಟ ಬೆಂಬಲಿಗ ಹಾಗೂ ಶಾಸಕ ಕಾಮತ್ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು. ಒಂದು ಹಂತದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಬೆಂಬಲಿಗರಿಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಬಣಕ್ಕೆ ಎಚ್ಚರಿಕೆ ನೀಡಿದ ವಿದ್ಯಮಾನವೂ ನಡೆದಿದೆ. ‘ಸಂಸದ ಬ್ರಿಜೇಶ್ ಚೌಟರೇ ಎಂಥ ನೀಚರನ್ನು ಸಾಕುತ್ತಿದ್ದೀರಿ ನೀವು’ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ‘ಫುಡ್ ಫೆಸ್ಟ್‌ನಲ್ಲಿ ನಿಮ್ಮ ಜೊತೆಗಿದ್ದ ಇನ್ನೂ ಮೀಸೆ ಚಿಗುರದ ಪುಡಾರಿಯೋರ್ವ ನಿಮ್ಮ ಮುಂದೆಯೇ ಹಿರಿಯ ಶಾಸಕರ ಮೇಲೆಯೇ ಕೈಯೇರಿಸಿ ರೇಗುವಾಗ ನೋಡುತ್ತಾ ಸುಮ್ಮನಿದ್ದೀರಲ್ವಾ? ನೀವು ಜನರನ್ನು ಹೇಗೆ ರಕ್ಷಿಸುತ್ತೀರಿ?, ಹೋದಲ್ಲಿ ಬಂದಲ್ಲಿ ನಿಮ್ಮ ಜೊತೆಗಿರುವ ಚೇಲಾಗಳು ಗೂಂಡಾಗಳ ಹಾಗೆ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುವಾಗ ಅವರಿಗೆ ಬುದ್ಧಿ ಹೇಳದ ನೀವೆಂತಾ ಸಂಸದರು?, ನೆನಪಿಡಿ, ನೀವು ಹಾಗೂ ನಿಮ್ಮ ಚೇಲಾಗಳು ಬಂದಿದ್ದೇ ಮೊನ್ನೆಮೊನ್ನೆಯಿಂದ, ಅನೇಕ ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತರು ಈ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ್ದಾರೆ. ನಿಮ್ಮ ಬಕೆಟುಗಳನ್ನು ತೆಪ್ಪಗಿರಿಸಿದರೆ ಸರಿ, ನಂತರದ ಪರಿಣಾಮಕ್ಕೆ ನಾವು ಜವಾಬ್ದಾರಿ ಅಲ್ಲ, ನಮ್ಮ ನಾಯಕರು ಸುಮ್ಮನಿರಬಹುದು, ಆದರೆ ಕಾರ್ಯಕರ್ತರು ಇನ್ನು ಸುಮ್ಮನಿರಲ್ಲ’ ಎಂದು ಎಚ್ಚರಿಕೆ ಪೋಸ್ಟ್ ಹಾಕಲಾಗಿದೆ. ಭಿನ್ನಮತವಿಲ್ಲ, ಅಭಿಪ್ರಾಯ ಭೇದ ಸಾಮಾನ್ಯಶಾಸಕ ವೇದವ್ಯಾಸ ಕಾಮತ್ ಅವರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಬೆಂಬಲಿಗ ಅವಾಚ್ಯವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಯಕರು ತೇಪೆ ಹಚ್ಚಿದ್ದಾರೆ.ಈ ಬಗ್ಗೆ ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸುದ್ದಿಗಾರರ ಪ್ರಶ್ನೆಗೆ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟ ತೇಪೆ ಹಚ್ಚುವ ಕಾರ್ಯ ಮಾಡಿದ್ದಾರೆ.
ನಮ್ಮಲ್ಲೇನೂ ಭಿನ್ನಮತವಿಲ್ಲ. ದೊಡ್ಡ ಕುಟುಂಬದಲ್ಲಿ ಅಭಿಪ್ರಾಯಭೇದ ಸಾಮಾನ್ಯ ಎಂದು ವೇದವ್ಯಾಸ ಕಾಮತ್ ಸ್ಪಷ್ಟೀಕರಣ ನೀಡಿದರು.ಸಂಸದ ಕ್ಯಾ. ಚೌಟ ಕೂಡಾ, ನಮ್ಮದು ಅತಿ ದೊಡ್ಡ ಪಕ್ಷ, ಪ್ರಜಾಪ್ರಭುತ್ವ ರೀತಿಯಲ್ಲಿ ಕಾರ್ಯವೆಸಗುತ್ತದೆ. ಎಲ್ಲರಿಗೂ ಅಭಿಪ್ರಾಯ ಹೇಳುವುದಕ್ಕೆ ಸ್ವಾತಂತ್ರ್ಯ ಕೂಡಾ ಇದೆ, ಅಂತಹ ಯಾವ ಘಟನೆಯನ್ನೂ ಬೆಳೆಸಿಕೊಂಡು ಹೋಗುವುದಿಲ್ಲ ಎಂದಿದ್ದಾರೆ.