ಸಾರಾಂಶ
ಯಾವುದೇ ಅರ್ಹ ಮತದಾರರು ಈ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರವಹಿಸುವಂತೆ ಡಿಸಿ ಸೂಚನೆ ನೀಡಿದರು.
ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ 85 ವರ್ಷ ಮೀರಿದವರು, ಅಂಗವಿಕಲರು ಮತ್ತು ಕೋವಿಡ್ ಪೀಡಿತರಿಗೆ ವಿತರಿಸಲಾಗುವ ಅಂಚೆಪತ್ರ ಪತ್ರಗಳ ವಿತರಣಾ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ, ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿರ್ದೇಶನ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂಚೆ ಮತಪತ್ರ ವಿತರಣೆ ಕಾರ್ಯದ ಕುರಿತಂತೆ ಜಿಲ್ಲೆಯಲ್ಲಿನ 85 ವರ್ಷ ಮೀರಿದವರು, ಅಂಗವಿಕಲರು ಮತ್ತು ಕೋವಿಡ್ ಪೀಡಿತರಿಗೆ ಮತಪತ್ರ ವಿತರಣೆ ನೀಡುವ ಕುರಿತು ಮನೆ ಮನೆಗಳಿಗೆ ಭೇಟಿ ನೀಡುವ ಕುರಿತಂತೆ ಸಾಕಷ್ಟು ಮುಂಚಿತವಾಗಿ ಪ್ರಚಾರ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಪ್ರತಿಯೊಬ್ಬರ ಅರ್ಹರ ಮನೆಗಳಿಗೂ ಭೇಟಿ ನೀಡಿ ಫಾರಂ ವಿತರಿಸಿ, ಒಪ್ಪಿಗೆ ಪತ್ರ ಪಡೆಯುವಂತೆ ತಿಳಿಸಿದರು.
ಚುನಾವಣಾ ಆಯೋಗದ ಸೂಚನೆಯಂತೆ ನಿಗದಿತ ದಿನಾಂಕದೊಳಗೆ ಅಂಚೆ ಮತಪತ್ರ ವಿತರಣೆ ಮತ್ತು ಒಪ್ಪಿಗೆ ಪತ್ರಗಳನ್ನು ಸಂಗ್ರಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಅರ್ಹ ಮತದಾರರು ಈ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಅಂಚೆಪತ ಪತ್ರ ವಿತರಣೆಗೆ ನಿಯೋಜಿಸಲಾಗಿರುವ ವಿವಿಧ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.