ಸಾರಾಂಶ
ಲಕ್ಷ್ಮೇಶ್ವರ: ಅಂಚೆ ಇಲಾಖೆಯು ಬದಲಾದ ದಿನಮಾನಗಳಿಗೆ ತಕ್ಕಂತೆ ತನ್ನನ್ನು ಬದಲಾಯಿಸಿಕೊಂಡು ಜನಸಾಮಾನ್ಯರೊಂದಿಗೆ ಸಾಗುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಬುಧವಾರ ಪಟ್ಟಣದ ಚನ್ನಮ್ಮನ ವನದಲ್ಲಿ ನಡೆದ ಅಂಚೆ ಜನಸಂಪರ್ಕ ಅಭಿಯಾನ ಹಾಗೂ ನನ್ನ ಮಣ್ಣು ನನ್ನ ದೇಶ ಎನ್ನುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಂಚೆ ಇಲಾಖೆಯು ತನ್ನ ಗತವೈಭವವನ್ನು ಮರಳಿ ಪಡೆಯುವ ಸಲುವಾಗಿ ಜನರ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುವ ಮೂಲಕ ಜನಮಾನಸದಲ್ಲಿ ಉಳಿಯುವ ಕಾರ್ಯ ಮಾಡುತ್ತಿದೆ. ಅಂಚೆ ಇಲಾಖೆಯಲ್ಲಿ ಭ್ರಷ್ಟಾಚಾರ ಕಂಡುಬರುವುದಿಲ್ಲ ಎನ್ನುವುದು ಸ್ವಾಗತಾರ್ಹ, ಹಿಂದಿನ ಕಾಲದಲ್ಲಿ ಪೋಸ್ಟ್ ಮ್ಯಾನ್ ಅವರಿಗೆ ನೀಡುವ ಗೌರವ ಇಂದಿಗೂ ಕೂಡಾ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿವೆ. ಡಿಜಿಟಲ್ ಯುಗದಲ್ಲಿ ಅಂಚೆ ಇಲಾಖೆಯು ಅನೇಕ ಜನಪರ ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಜನರ ಸೇವೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಮಾಡುತ್ತಿದೆ. ಬ್ಯಾಂಕಿಂಗ್ ಹಾಗೂ ರಾಷ್ಟ್ರೀಯ ಯೋಜನೆಗಳ ಫಲಾನುಭವಿಗಳಿಗೆ ಹಣ ಮುಟ್ಟಿಸುವ ಕಾರ್ಯವನ್ನು ಈಗ ಅಂಚೆ ಇಲಾಖೆ ಮಾಡುತ್ತಿದೆ. ಸಾರ್ವಜನಿಕರಿಗೆ ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ನೀಡುವ ಮೂಲಕ ಜನರಿಗೆ ಸೇವೆ ನೀಡುತ್ತಿದೆ ಎಂದು ಹೇಳಿದರು. ಈ ವೇಳೆ ಗದಗ ಅಂಚೆ ವಿಭಾಗದ ಅಧೀಕ್ಷಕ ನಿಂಗನಗೌಡ ಭಂಗಿಗೌಡ್ರ, ಹಿರಿಯ ಸಾಹಿತಿ ಸಿ.ಜಿ. ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ, ತಹಸೀಲ್ದಾರ್ ಕೆ. ಆನಂದ ಶೀಲ್ ಮಾತನಾಡಿದರು. ಲಕ್ಷ್ಮೇಶ್ವರ ಅಂಚೆ ಇಲಾಖೆಯ ಮ್ಯಾನೇಜರ್ ದೊಡ್ಡಪ್ಪ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಶಕುಂತಲಾ ಹೊರಟ್ಟಿ ಇದ್ದರು. ಸಮಾರಂಭದಲ್ಲಿ ಕೊತಬಾಳದ ಕಲಾ ತಂಡವು ಸಂಗೀತ ಸೇವೆ ನೀಡಿತು. ಪೌರ ಕಾರ್ಮಿಕರನ್ನು ಸನ್ಮಾನಿಸುವ ಕಾರ್ಯ ಮಾಡಿದರು. ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಕಾರ್ಯಕ್ರಮ ನಿರ್ವಹಿಸಿದರು.