ಸಾರಾಂಶ
ಕುಳ್ಳೂರು ಗ್ರಾಮದಲ್ಲಿ ನೂತನ ಗ್ರಾಮೀಣ ಅಂಚೆ ಕಚೇರಿಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಅಂಚೆ ಇಲಾಖೆಯ ಸೇವೆಯು ಅನನ್ಯವಾದುದು. ಕಾಡಂಚಿನ ಮನೆಗಳಿಗೂ ಇಲಾಖೆಯು ಸೇವೆ ನೀಡುತ್ತಿದೆ. ಕಾಡು ಮಧ್ಯದಲ್ಲಿರುವ ಕುಳ್ಳೂರು ಗ್ರಾಮದಲ್ಲಿ ಗ್ರಾಮೀಣ ಅಂಚೆ ಕಚೇರಿ ತೆರೆದಿರುವುದು ಬಹಳ ಸಂತೋಷದ ವಿಷಯ ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಹರದನಹಳ್ಳಿ ಹೋಬಳಿಗೆ ಸೇರಿದ ಕುಳ್ಳೂರು ಗ್ರಾಮದಲ್ಲಿ ನೂತನ ಗ್ರಾಮೀಣ ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಭಾಗದ ಜನರು ೬ ಕಿಲೋ ಮೀಟರ್ ಮೂಕನಪಾಳ್ಯದ ಅಂಚೆ ಇಲಾಖೆಗೆ ಹೋಗಬೇಕಿತ್ತು. ಈಗ ಹತ್ತಿರವೇ ಬಂದಿದೆ. ಗ್ರಾಮದ ಜನರು ಇದರ ಉಪಯೋಗ ಪಡೆದು ನಿಮ್ಮ ಗ್ರಾಮದ ಅಂಚೆ ಕಚೇರಿಗೆ ಹೆಸರು ತರಬೇಕು ಎಂದರು.
ನಂಜನಗೂಡು ಅಂಚೆ ಅಧೀಕ್ಷಕ ಎನ್.ಗೋವಿಂದರಾಜು ಮಾತನಾಡಿ, ಅಂಚೆ ಇಲಾಖೆಗೆ ೧೬೦ ವರ್ಷಗಳ ಇತಿಹಾಸವಿದ್ದು, ಪ್ರತಿಯೊಂದು ಗ್ರಾಮಗಳ ಸಂರ್ಪಕವನ್ನು ಅಂಚೆ ಇಲಾಖೆ ಹೊಂದಿದೆ. ೫- ೧೦ ಗ್ರಾಮಗಳಿಗೆ ಒಂದು ಗ್ರಾಮಾಂತರ ಅಂಚೆ ಕಚೇರಿ ಒಳಗೊಂಡಿದೆ ಎಂದು ತಿಳಿಸಿದರು.ಕಾಡಂಚಿನ ಕುಳ್ಳೂರು ಗ್ರಾಮವು ಮೊದಲು ಮೂಕನಪಾಳ್ಯ ಗ್ರಾಮದ ಗ್ರಾಮೀಣ ಅಂಚೆ ಕಚೇರಿಗೆ ಸೇರಿತ್ತು. ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಮಾಡಿದ್ದರು. ಅದು ಈಗ ಪ್ರತಿಫಲ ನೀಡಿದೆ. ೪೦ ವರ್ಷಗಳ ನಂತರ ನೂತನ ಅಂಚೆ ಕಚೇರಿಯನ್ನು ಇಲಾಖೆಯ ವತಿಯಿಂದ ತೆರೆಯಲಾಗುತ್ತಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಣ್ಣ ಉಳಿತಾಯ ಯೋಜನೆಯಿಂದ ಅಂಚೆ ಇಲಾಖೆ ಮೊದನೇ ಸ್ಥಾನದಲ್ಲಿದೆ. ಬ್ಯಾಂಕ್‌ಗಳು ಯಾವ ರೀತಿಯಲ್ಲಿ ಸೇವೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಅಂಚೆ ಇಲಾಖೆಯೂ ಸಾರ್ವಜನಿಕರಿಗೆ ಸೇವೆ ನೀಡುತ್ತ ಬಂದಿದೆ ಎಂದು ಹೇಳಿದರು.ಅಂಚೆ ಇಲಾಖೆಯಲ್ಲಿ ಸಾರ್ವಜನಿಕರಿಗೆ ವಿಮೆ, ಆರ್.ಡಿ, ಹಣವನ್ನು ಠೇವಣಿಮಾಡುವುದು ಸೇರಿದಂತೆ ಇತ್ಯಾದಿ ಹಲವಾರು ಯೋಜನೆಗಳು ಲಭ್ಯದ್ದು, ಇದರ ಉಪಯೋಗವನ್ನು ತಿಳಿದುಕೊಂಡು ಅಂಚೆ ಗ್ರಾಹಕರಾಗಬೇಕು ಎಂದು ತಿಳಿಸಿದರು.
ಕೃಷ್ಣದಾಸ್.ಎ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಟ್ಟಗುಳಿಪುರದ ಗ್ರಾಪಂ ಅಧ್ಯಕ್ಷೆ ಶಿವಮ್ಮ, ಅಂಚೆ ಮೇಲ್ವಿಚಾರಕರಾದ ಮಹೇಂದ್ರ, ಅಂಚೆ ನಿರಿಕ್ಷಕರಾದ ಜೆ.ಶ್ರೀಧರ್, ಎಂ.ಇ.ಮಹದೇವಪ್ಪ, ಗಿರೀಶ್, ಉಮೇಶ್, ಕುಶಲ್, ಎ.ಎಸ್.ಪಿ ರಾಧಾಕೃಷ್ಣ ಮಲ್ಯ, ಕುಮಾರನಾಯ್ಕ, ಶಾಂತರಾಜು, ಗ್ರಾಪಂ ಸದಸ್ಯರಾದ ಸಣ್ಣಕ್ಕಿ ಗೌಡ ಮತ್ತಿತರು ಇದ್ದರು.