ಒಳಮೀಸಲಾತಿಗಾಗಿ ರಕ್ತದಲ್ಲಿ ಪೋಸ್ಟರ್‌

| Published : Aug 19 2025, 01:00 AM IST

ಸಾರಾಂಶ

ಮಾದಿಗ ಮಹಾಸಭಾ ಪದಾಧಿಕಾರಿಗಳು ರಕ್ತದಲ್ಲಿ ಪೋಸ್ಟರ್‌ ಬರೆದು ಒಳಮೀಸಲಾತಿ ಕೂಡಲೇ ಜಾರಿಗೊಳಿಸಬೇಕು. ಈ ಕುರಿತು ಜಿಲ್ಲೆಯ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕೆಂದು ಒತ್ತಾಯಿಸಿ ಶಾಸಕ ಮನೆ ಎದುರು ಪ್ರತಿಭಟನೆ ನಡೆಸಿದರು.

ಕೊಪ್ಪಳ:

ಒಳ ಮೀಸಲಾತಿ ಜಾರಿಗೊಳಿಸುವಂತೆ ಸದನದಲ್ಲಿ ಧ್ವನಿ ಎತ್ತಬೇಕೆಂದು ಒತ್ತಾಯಿಸಿ ಮಾದಿಗ ಮಹಾಸಭಾ ಪದಾಧಿಕಾರಿಗಳು ಶಾಸಕ ರಾಘವೇಂದ್ರ ಹಿಟ್ನಾಳ ಮನೆ ಎದುರು ತಮಟೆ ಚಳಿವಳಿ ನಡೆಸಿದರು. ಈ ವೇಳೆ ರಕ್ತದಲ್ಲಿ ಮೀಸಲಾತಿ ಜಾರಿಗೊಳಿಸುವಂತೆ ಬರೆದ ಪೋಸ್ಟರ್‌ ಪ್ರದರ್ಶಿಸಿದರು.

ನಗರದ ಈಶ್ವರ್ ಪಾರ್ಕ್‌ನಿಂದ ತಮಟೆ ಚಳವಳಿ ಆರಂಭಿಸಿದ ಮಾದಿಗ ಮಹಾಸಭಾ ಪದಾಧಿಕಾರಿಗಳು, ರಕ್ತದಲ್ಲಿ ಪೋಸ್ಟರ್‌ ಬರೆದು ಒಳಮೀಸಲಾತಿ ಕೂಡಲೇ ಜಾರಿಗೊಳಿಸಬೇಕು. ಈ ಕುರಿತು ಜಿಲ್ಲೆಯ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕೆಂದು ಒತ್ತಾಯಿಸಿ ಶಾಸಕ ಮನೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಶಾಸಕರ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಿದ ಸಂಸದ ರಾಜಶೇಖರ ಹಿಟ್ನಾಳ, ನಿಮ್ಮ ಹೋರಾಟಕ್ಕೆ ಬೆಂಬಲಿದ್ದು, ನೀವು ಎಲ್ಲಿ ಕರೆದರೂ ಹೋರಾಟಕ್ಕೆ ಬರುತ್ತೇವೆಂದು ತಿಳಿಸಿದರು.

ಈ ವೇಳೆ ಮಾತನಾಡಿದ ಸಮಾಜದ ಯುವ ಮುಖಂಡ ಗಣೇಶ ಹೊರತಟ್ನಾಳ, ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ವರದಿಯನ್ನು ಕೂಡಲೇ ಯಥಾವತ್ತ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ವಿಳಂಬ ಮಾಡುತ್ತಿದೆ. ಮೀಸಲಾತಿ ಜಾರಿಗೊಳಿಸುವಲ್ಲಿ ವಿಳಂಬ ಮಾಡಿದರೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಸಿದರು. ಮೂರು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೂ ಈ ವರೆಗೂ ಯಾವ ಸರ್ಕಾರ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿತ್ತು. ಕೊಟ್ಟ ಮಾತಿನಂತೆ ವರದಿ ಜಾರಿಗೊಳಿಸಲಿ. ಈ ಕುರಿತು ಚರ್ಚಿಸಲು ಆ. 16ರಂದು ಕರೆದಿದ್ದ ಸಭೆಯನ್ನು 19ಕ್ಕೆ ಮುಂದೂಡಿದೆ. ಹೀಗಾಗಿ ಇದರಲ್ಲಿ ಹುನ್ನಾರ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇದರಲ್ಲಿ ಕಾಂಗ್ರೆಸ್‌ ವಿಳಂಬ ನೀತಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರು 2013-2018ರ ವರೆಗೆ ಮುಖ್ಯಮಂತ್ರಿ ಆದಾಗಲೂ ವಿಳಂಬ ಧೋರಣೆ ಅನುಸರಿಸಿದರು. ಕಳೆದ ವರ್ಷ ಆ. 1ಕ್ಕೆ ಸುಪ್ರೀಂಕೋರ್ಟ್‌ ಒಳಮೀಸಲಾತಿ ಜಾರಿಗೊಳಿಸುವುದು ಆ ಸರ್ಕಾರಕ್ಕೆ ಬಿಟ್ಟು ವಿಷಯ ಎಂದು ಹೇಳಿದರೂ ಸಿಎಂ ಕಾಲಹರಣ ಮಾಡುತ್ತಿದ್ದಾರೆ. ಆ.19ಕ್ಕೆ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಖಚಿತ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, ಆ. 19ರಂದು ಸರ್ಕಾರ ಶಿಫಾರಸು ಮಾಡಿ ರಾಜ್ಯಪಾಲರ ಅಂಕಿತ ಬೀಳದಿದ್ದರೆ ಕೊಪ್ಪಳ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು ಎಂದು ಹೇಳಿದರು.

ಈ ವೇಳೆ ಮಾದಿಗ ಸಮುದಾಯದ ಮುಖಂಡರಾದ ಹನುಮೇಶ ಕಡೆಮನಿ, ಯಲ್ಲಪ್ಪ ಹಳೇಮನಿ ಮುದ್ಲಾಪುರ, ರಾಮಣ್ಣ ಚೌಡಕಿ, ದ್ಯಾಮಣ್ಣ ಪೂಜಾರ, ಪರಶುರಾಮ ಕೆರೆಹಳ್ಳಿ, ಗಾಳೆಪ್ಪ ಹಿಟ್ನಾಳ್, ಸಿದ್ದು ಮಣ್ಣಿನವರ, ಮಹಾಲಕ್ಷ್ಮಿ ಕಂದಾರಿ, ಯಂಕಪ್ಪ ಹೊಸಳ್ಳಿ, ಹನುಮಂತಪ್ಪ ಮ್ಯಾಗಳಮನಿ, ನಿಂಗಪ್ಪ ಮೈನಳ್ಳಿ, ಮಂಜುನಾಥ ಮುಸಲಾಪುರ, ಮಾರುತೆಪ್ಪ ಬಿಕನಳ್ಳಿ, ಚಂದ್ರಸ್ವಾಮಿ ಬಹದ್ದೂರಬಂಡಿ, ಶಂಕರ ನರೇಗಲ್, ಸುಧೀರ್ ಕಾತರಕಿ, ಗಾಳೆಪ್ಪ ಹಿರೇಮನಿ, ಬಸವರಾಜ್ ಮ್ಯಗಳಮನಿ, ಸಂತೋಷ ಕಾತರಿಕಿ ಇದ್ದರು.