ಸಾರಾಂಶ
ಬಸ್ರೂರಿನ ಮಹೋತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅಪ್ಪಣ್ಣ ಹೆಗ್ಡೆ 90 ಜನ್ಮ ದಿನೋತ್ಸವ ಸಮಿತಿ ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಜೊತೆಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಅಪ್ಪಣ್ಣ ಹೆಗ್ಡೆ -90’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರ
ಸಮಾಜದಲ್ಲಿನ ಧೀನದಲಿತರ ಹಾಗೂ ದುರ್ಬಲ ವರ್ಗದವರ ಸೇವೆಯನ್ನು ಮಾಡುವುದರಿಂದಲೇ ಭಗವಂತನ ಸೇವೆಯನ್ನು ಮಾಡುವಂತಾಗುತ್ತದೆ ಎನ್ನುವ ಸಾಕ್ಷಾತ್ಕಾರವನ್ನು ಕಂಡು ಅದನ್ನು ತಮ್ಮ ಜೀವನದಲ್ಲಿ ರೂಢಿಸಿ, ಅಳವಡಿಸಿಕೊಂಡು ಬಂದವರು ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿಂದಿನ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಅಭಿಪ್ರಾಯಪಟ್ಟರು.ಬಸ್ರೂರಿನ ಮಹೋತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಸಂಜೆ ಬಸ್ರೂರು ಅಪ್ಪಣ್ಣ ಹೆಗ್ಡೆ 90 ಜನ್ಮ ದಿನೋತ್ಸವ ಸಮಿತಿ ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಜೊತೆಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಅಪ್ಪಣ್ಣ ಹೆಗ್ಡೆ -90’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಮಾಜಕ್ಕೆ ಹೊರೆಯಾಗದೆ, ಅಪ್ಪಣ್ಣ ಹೆಗ್ಡೆಯವರು ರಾಜಕೀಯ ಸಿದ್ಧಾಂತಗಳನ್ನು ಮೀರಿ ಶುಭ್ರತೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಯಾವುದೇ ಸಂದರ್ಭದಲ್ಲೂ ವಯಕ್ತಿಕ ವ್ಯಕ್ತಿತ್ವಗಳಿಗೆ ಕಳಂಕ ಬಾರದಂತೆ ನಡೆದು ಬದುಕುತ್ತಿರುವವರು ಎಂದರು.
ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಧಾರ್ಮಿಕತೆಯ ಹರಿಕಾರರಂತೆ ಶೋಭಿಸುತ್ತಿರುವ ಅಪ್ಪಣ್ಣ ಹೆಗ್ಡೆಯವರದ್ದು ಜಾತಿ ಮತಗಳ ಗೋಡೆಯ ಪರಿಧಿಯನ್ನು ಮೀರಿ ನಿಂತಿರುವ ವ್ಯಕ್ತಿತ್ವ ಅವರದು ಎಂದರು.ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ತೆಗ್ಗರ್ಸೆ ಬಾಬು ಶೆಟ್ಟಿ ಹಾಗೂ ಗಿಳಿಯಾರು ಕುಶಲ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಬಿ. ಉದಯ್ ಕುಮಾರ್ ಹೆಗ್ಡೆ ಮಾತನಾಡಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ರಾಮ್ ರತನ್ ಹೆಗ್ಡೆ, ರಾಮ್ ಕಿಶನ್ ಹೆಗ್ಡೆ ಇದ್ದರು.
ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಾಬು ಶೆಟ್ಟಿ ತೆಗ್ಗರ್ಸೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ರಘುರಾಮ್ ದೇವಾಡಿಗ ಆಲೂರು ಹಾಗೂ ಸುರೇಂದ್ರ ಶೆಟ್ಟಿ ಸಹನಾ ಗ್ರೂಪ್ಸ್ ಅವರನ್ನು ಗೌರವಿಸಲಾಯಿತು.ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಸ್ವಾಗತಿಸಿದರು. ಜನಸೇವಾ ಟ್ರಸ್ಟ್‌ನ ವಸಂತ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಪೂಜಾರಿ ಬಸ್ರೂರು ವಂದಿಸಿದರು. ಕೆ.ಸಿ. ರಾಜೇಶ್ ನಿರೂಪಿಸಿದರು.