ನೇಪಥ್ಯಕ್ಕೆ ಸರಿಯುತ್ತಿರುವ ಸ್ನಾತಕೋತ್ತರ ಕೇಂದ್ರ

| Published : Jul 07 2025, 11:48 PM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ಇದೀಗ ಮುಳುಗುವ ಸ್ಥಿತಿಗೆ ಬಂದಿದೆ. ಇದರಿಂದ ಅರಳಬೇಕಿದ್ದವರ ಭವಿಷ್ಯ ಕಮರುತ್ತಿದೆ. ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲಯ ಎನಿಸಿಕೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದುಕೊಂಡ ವಿದ್ಯಾರ್ಥಿಗಳ ಕನಸು ಭಗ್ನವಾಗಿದೆ. ಮೂಲ ಸೌಲಭ್ಯಗಳೇ ಇಲ್ಲದೆ ಬಳಲುತ್ತಿರುವ ತೊರವಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ಅನಾಥವಾದಂತಾಗಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ಇದೀಗ ಮುಳುಗುವ ಸ್ಥಿತಿಗೆ ಬಂದಿದೆ. ಇದರಿಂದ ಅರಳಬೇಕಿದ್ದವರ ಭವಿಷ್ಯ ಕಮರುತ್ತಿದೆ. ರಾಜ್ಯದ ಅತಿದೊಡ್ಡ ವಿಶ್ವವಿದ್ಯಾಲಯ ಎನಿಸಿಕೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದುಕೊಂಡ ವಿದ್ಯಾರ್ಥಿಗಳ ಕನಸು ಭಗ್ನವಾಗಿದೆ. ಮೂಲ ಸೌಲಭ್ಯಗಳೇ ಇಲ್ಲದೆ ಬಳಲುತ್ತಿರುವ ತೊರವಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ಅನಾಥವಾದಂತಾಗಿದೆ.

ವಿದ್ಯಾರ್ಥಿಗಳಿಲ್ಲದೇ ಅನಾಥ:

ಕಳೆದ 2010ರಲ್ಲಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ನಮ್ಮ ಭಾಗಕ್ಕೆ ಒಂದು ಅಧ್ಯಯನ ಕೇಂದ್ರ ಸಿಕ್ಕಿತು ಎಂದು ಅತೀವ ಸಂತಸಗೊಂಡಿದ್ದರು. ಆದರೆ ದಿನ ಕಳೆದಂತೆ ನಿರಂತರವಾಗಿ ಈ ಅಧ್ಯಯನ ಕೇಂದ್ರ ನಿರ್ಲಿಪ್ತ ಸ್ಥಿತಿ ತಲುಪಿತು. ಸೂಕ್ತ ಅನುದಾನವಿಲ್ಲದೆ ಇಲ್ಲಿ ಆಗಬೇಕಿದ್ದ ಯಾವುದೇ ಕೆಲಸಗಳು ಆಗದಿರುವುದರಿಂದ ಹಾಗೂ ಸರಿಯಾದ ಶಿಕ್ಷಣದ ಕೊರತೆ ಎದುರಾಗಿದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಹೋಯಿತು. ಆರು ಸ್ನಾತಕೋತ್ತರ ವಿಭಾಗಗಳ ಅಧ್ಯಯನ ನಡೆಯುತ್ತಿದ್ದರೂ ಕೇವಲ 178 ವಿದ್ಯಾರ್ಥಿಗಳು ಮಾತ್ರ ಅಭ್ಯಸಿಸುತ್ತಿದ್ದಾರೆ.

ಸುಮಾರು 31 ಎಕರೆಯಲ್ಲಿರುವ ಕೇಂದ್ರದಲ್ಲಿ ಆರು ಸ್ನಾತಕೋತ್ತರ ವಿಭಾಗಗಳು ಮಾತ್ರ ನಡೆಯುತ್ತಿದ್ದು, 178 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಕೇವಲ 8 ಶಿಕ್ಷಕರು ಕಾಯಂ ಇದ್ದು, ಉಳಿದವರೆಲ್ಲ ಅತಿಥಿ ಉಪನ್ಯಾಸಕರೆ ಇದ್ದಾರೆ. ಮೂರು ಕಟ್ಟಡಗಳಲ್ಲಿ ಒಂದು ವಸತಿ ಗೃಹವಾಗಿದ್ದು, ಉಳಿದ ಎರಡು ಕಟ್ಟಡಗಳಲ್ಲಿ ಅಧ್ಯಯನ, ಅಧ್ಯಾಪನ ಹಾಗೂ ಆಡಳಿತ ನಡೆಯುತ್ತಿದೆ. ಇರುವ 31 ಎಕರೆ ಪ್ರದೇಶಕ್ಕೆ ಸುತ್ತಲೂ ಕಾಂಪೌಂಡ್ ಇಲ್ಲವಾಗಿದೆ.

ಸೌಕರ್ಯಗಳ ಕೊರತೆ:

ಆಡಳಿತ ಕೇಂದ್ರದ ಕಟ್ಟಡ, ಗ್ರಂಥಾಲಯ ಅಭಿವೃದ್ಧಿ, ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ತರಗತಿಗಳು, ಕೌಶಲ್ಯಕೇಂದ್ರ ಸಂಕೀರ್ಣ, ದೈಹಿಕ ಶಿಕ್ಷಣ ನಿರ್ದೇಶಕರ ನೇಮಕ, ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ನೇಮಕ ಸೇರಿದಂತೆ ಹತ್ತು ಹಲವಾರು ಸೌಕರ್ಯಗಳ ಕೊರತೆಯನ್ನು ಈ ಅಧ್ಯಯನ ಕೇಂದ್ರ ಎದುರಿಸುತ್ತಿದೆ.

ಅಲ್ಲದೇ, ಇಲ್ಲಿನ ಕೇಂದ್ರಕ್ಕೆ ಹಣಕಾಸು ಸಹಾಯ ಸಿಕ್ಕಿದ್ದೇ ಆದಲ್ಲಿ ಪರಿಸರ ವಿಜ್ಞಾನ, ಖಗೋಳ ಭೌತಶಾಸ್ತ್ರ, ಗಣಕ ವಿಜ್ಞಾನ, ವಿಪತ್ತು ನಿರ್ವಹಣಾ ಶಾಸ್ತ್ರ, ಔದ್ಯೋಗಿಕ ರಸಾಯನ ಶಾಸ್ತ್ರ ಸೇರಿದಂತೆ ಅನೇಕ ಕೋರ್ಸ್‌ಗಳನ್ನು ತಂದರೆ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

-----

ಬಾಕ್ಸ್‌

ಆರು ವಿಭಾಗಗಳಲ್ಲಿರುವ ವಿದ್ಯಾರ್ಥಿಗಳೆಷ್ಟು..?

60 ಪ್ರವೇಶಾತಿ ಮಿತಿ ಇರುವ ಕನ್ನಡ ವಿಭಾಗದಲ್ಲಿ ಪ್ರಥಮ ವರ್ಷ 9 ಹಾಗೂ ಅಂತಿಮ ವರ್ಷದಲ್ಲಿ ಕೇವಲ 8 ವಿದ್ಯಾರ್ಥಿಗಳಿದ್ದಾರೆ. ಸಮಾಜ ಕಾರ್ಯ ವಿಭಾಗ ಈ ಬಾರಿ ಸ್ಥಗಿತಗೊಳ್ಳಲಿದೆ. ಇಂಗ್ಲೀಷ್‌ ವಿಭಾಗದಲ್ಲಿ ಪ್ರಥಮ ವರ್ಷದಲ್ಲಿ ಕೇವಲ 10 ವಿದ್ಯಾರ್ಥಿಗಳಿದ್ದು, ಈ ಬಾರಿ ಅದೂ ಕೂಡ ಕ್ಲೋಸ್ ಆಗಲಿದೆ. ವಾಣಿಜ್ಯಶಾಸ್ತ್ರ ವಿಭಾಗದಲ್ಲಿಯೂ ಸಹ ಕೇವಲ ಬೆರಳೆಣಿಕೆಯಷ್ಟು ಮಾತ್ರ ವಿದ್ಯಾರ್ಥಿಗಳಿದ್ದಾರೆ. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿಯೂ ಸಹ ಪ್ರವೇಶಾತಿ ಕ್ಷೀಣಿಸಿದೆ. ಎಂಸಿಎ ವಿಭಾಗದಲ್ಲೂ ಕೂಡ ಎಲ್ಲವುಗಳಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯೇ ಇದೆ.

ಕೋಟ್

ಸಾಕಷ್ಟು ಮಹತ್ವಾಕಾಂಕ್ಷೆಯುಳ್ಳ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಬೆಳಗಾವಿಯಲ್ಲಿ ನಡೆದಾಡುವ ದೇವರಾದ ಸಿದ್ಧೇಶ್ವರ ಸ್ವಾಮೀಜಿ ಅಧ್ಯಯನ ಕೇಂದ್ರ ಸ್ಥಾಪಿತವಾಗಬೇಕಿದೆ. ಜೊತೆಗೆ ವಿಜಯಪುರದಲ್ಲಿನ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರದಲ್ಲಿಯೂ ಸಹ ಹಳಕಟ್ಟಿ ಅವರ ಅಧ್ಯಯನ ಪೀಠ ಆಗಬೇಕಿದೆ. ಈಗಿರುವ ಕೋರ್ಸ್‌ಗಳ ಜೊತೆಗೆ ಇನ್ನಷ್ಟು ಕೋರ್ಸ್‌ಗಳು ಬಂದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.

ರಫೀ ಭಂಡಾರಿ, ಸಿಂಡಿಕೇಟ ಸದಸ್ಯ.