ಕಂಪ್ಯೂಟರ್ ಆಧಾರಿತ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯು (NEET PG) ಆಗಸ್ಟ್ 30ರಂದು ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಸುಗಮವಾಗಿ ಮತ್ತು ಶಿಸ್ತಿನಿಂದ ಜರುಗಿಸಲು ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

- 3 ಪರೀಕ್ಷಾ ಕೇಂದ್ರಗಳಲ್ಲಿ 557 ಪರೀಕ್ಷಾರ್ಥಿಗಳು । ಪರೀಕ್ಷೆ ಸುಗಮವಾಗಿ ನಡೆಸಲು ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಂಪ್ಯೂಟರ್ ಆಧಾರಿತ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯು **(NEET PG)** ಆಗಸ್ಟ್ 30ರಂದು ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಸುಗಮವಾಗಿ ಮತ್ತು ಶಿಸ್ತಿನಿಂದ ಜರುಗಿಸಲು ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನೀಟ್‌ ಪಿಜಿ ಪರೀಕ್ಷಾ ಸಿದ್ಧತೆಗಳ ಕುರಿತು ಏರ್ಪಡಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷೆಯು ಆಗಸ್ಟ್‌ 30ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿದೆ. ಪರೀಕ್ಷಾರ್ಥಿಗಳಿಗೆ ಬೆಳಗ್ಗೆ 7 ಗಂಟೆಯಿಂದಲೇ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಗಾಳಿ, ಬೆಳಕು, ಕುಡಿಯುವ ನೀರು, ಶೌಚಾಲಯ, ಸಿಸಿಟಿವಿ ಕ್ಯಾಮೆರಾ, ನಿರಂತರ ಇಂಟರ್‌ನೆಟ್‌ ಸಂಪರ್ಕ ಹಾಗೂ ವಿದ್ಯುತ್‌ ಪೂರೈಕೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸೂಚಿಸಿದರು.

ಸೈಬರ್‌ ಭದ್ರತೆ- ಬಿಗಿ ಪೊಲೀಸ್‌ ಬಂದೋಬಸ್ತ್:

ಆನ್‌ಲೈನ್ ಪರೀಕ್ಷೆಯ ಭದ್ರತೆ ಹಾಗೂ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಸೈಬರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಯಾವುದೇ ರೀತಿಯ ಸೈಬರ್ ಬೆದರಿಕೆ ಅಥವಾ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು. ಪರೀಕ್ಷೆಯ ಸುಸೂತ್ರ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಗಣಕ ಯಂತ್ರಗಳು ಹಾಗೂ ಐಟಿ ಉಪಕರಣಗಳಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ:

ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಹಾಗೂ ನೆಟ್‌ವರ್ಕ್ ಜ್ಯಾಮಿಂಗ್‌ನಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾನೂನು- ಸುವ್ಯವಸ್ಥೆ ಕಾಪಾಡಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ''''ನಿಷೇಧಿತ ಪ್ರದೇಶ''''ವೆಂದು ಘೋಷಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಲಾಗಿದೆ. ಈ ನಿಷೇಧಾಜ್ಞೆಯು ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಅನ್ವಯಿಸುವುದಿಲ್ಲ.

ಪರೀಕ್ಷಾ ಕೇಂದ್ರಗಳು ಮತ್ತು ಪರೀಕ್ಷಾರ್ಥಿಗಳ ವಿವರ:

ಜಿಲ್ಲೆಯಲ್ಲಿ ಒಟ್ಟು 3 ಪರೀಕ್ಷಾ ಕೇಂದ್ರಗಳಿದ್ದು, 557 ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ:

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ** (BIET)**, ಶಾಮನೂರು ರಸ್ತೆ: 362 ಪರೀಕ್ಷಾರ್ಥಿಗಳು ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವೀರೇಶ್ವರ ಪುಣ್ಯಾಶ್ರಮದ ಹತ್ತಿರ, ಆವರಗೆರೆ: 105 ಪರೀಕ್ಷಾರ್ಥಿಗಳು ಹಾಗೂ ಜಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ **(GMIT)**, ಪಿ.ಬಿ. ರಸ್ತೆ: 90 ಪರೀಕ್ಷಾರ್ಥಿಗಳು.

ತೀವ್ರ ತಪಾಸಣೆ- ನಿಷೇಧಿತ ವಸ್ತುಗಳು:

ಪ್ರವೇಶ ದ್ವಾರದಲ್ಲೇ ಅಭ್ಯರ್ಥಿಗಳನ್ನು ಕಡ್ಡಾಯವಾಗಿ ತೀವ್ರ ತಪಾಸಣೆಗೆ **(Frisking) ** ಒಳಪಡಿಸಲಾಗುತ್ತದೆ. ಮೈಕ್ರೋ ಕ್ಯಾಮೆರಾ, ಸ್ಪೈ ಕ್ಯಾಮೆರಾ, ಬ್ಲೂಟೂತ್ ಸಾಧನಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಚೀಟಿಗಳು ಅಥವಾ ಯಾವುದೇ ರೀತಿಯ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ತಡೆಯಲು ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಎಎಸ್ಪಿ ಪರಮೇಶ್ವರ ಹೆಗಡೆ, ಸೈಬರ್‌ ಕ್ರೈಂ ಡಿವೈಎಸ್ಪಿ ನಾಗಪ್ಪ ಬಿ., ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಪ್ಪೇಸ್ವಾಮಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್‌, ಡಯಟ್‌ ಪ್ರಾಂಶುಪಾಲರಾದ ಗೀತಾ ಹಾಗೂ ಇತರರು ಉಪಸ್ಥಿತರಿದ್ದರು.

- - -

-27ಕೆಡಿವಿಜಿ35: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ನೀಟ್‌ ಪಿಜಿ ಪರೀಕ್ಷಾ ಸಿದ್ಧತೆಗಳ ಕುರಿತ ಸಭೆ ನಡೆಯಿತು.