ಸಾರಾಂಶ
- ಊರಮ್ಮ ಉತ್ಸವ, ರಂಜಾನ್, ಉಗಾದಿ ಹಬ್ಬವೆಂಬ ಉತ್ತರಕ್ಕೆ ಆಕ್ರೋಶ- - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ಗಾಂಧಿ ಮೈದಾನ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆ ಗುರುವಾರ ದಿಢೀರ್ ಮತ್ತೆ ಮುಂದೂಡಲಾಗಿದೆ. ಏ.1ರಂದು ಬೆಳಗ್ಗೆ 11 ಗಂಟೆಗೆ ಹರಾಜು ನಡೆಯಲಿದೆ.ನಗರದಲ್ಲಿ ಗ್ರಾಮದೇವತೆ ಉತ್ಸವ, ರಂಜಾನ್ ಹಬ್ಬ ಹಾಗೂ ಉಗಾದಿ ಹಬ್ಬ ಹಿನ್ನೆಲೆ ಸಾರ್ವಜನಿಕರು ಹಾಗೂ ಮಳಿಗೆದಾರು ಹರಾಜು ಮುಂದೂಡಲು ಮನವಿ ಮಾಡಿದ್ದರು. ಈ ಹಿನ್ನೆಲೆ ಡಿಸಿ ಆದೇಶದಂತೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆ:22 ಮಳಿಗೆಗಳಿಗೆ ಸುಮಾರು 74 ಅರ್ಜಿಗಳು ಬಂದಿದ್ದು, ಗುರುವಾರ ಬೆಳಗ್ಗೆ ಹರಾಜು ಪ್ರಕ್ರಿಯೆ ಆರಂಭ ಆಗಬೇಕಿತ್ತು. ಆದರೆ ಬೆಳಗ್ಗೆ ಹರಾಜಿನಲ್ಲಿ ಭಾಗವಹಿಸಲು ಸಂತಸದಿಂದ ಆಗಮಿಸಿದ್ದ ಕೆಲ ಅರ್ಜಿದಾರರಿಗೆ ಹರಾಜು ಮುಂದೂಡಿದ ಇಲಾಖೆ ಆದೇಶದಿಂದ ತಣ್ಣೀರೆರಚಿದಂತಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಗೋವಿಂದ ಹಾಗೂ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತ ಪಡಿಸಿದರು.
ಈ ಹಿಂದೆ ಮರುಹರಾಜು ಮಾಡುವುದಾಗಿ ಪ್ರಕಟಿಸಿದಾಗ ಅನೇಕರು ತಲಾ ₹500ರಂತೆ ನೀಡಿ ಅರ್ಜಿಗಳನ್ನು ಪಡೆದಿದ್ದರು. ಈಗ ಮತ್ತೆ ಅರ್ಜಿ ಕರೆದಿದ್ದಾರೆ. ಡಿ.ಡಿ. ಕೂಡ ಪಡೆದಿದ್ದಾರೆ. ವಿವಿಧ ಹಬ್ಬಗಳು ವರ್ಷಗಳು ಪೂರ್ತಿ ಇರುತ್ತವೆ. ಕ್ಷುಲ್ಲಕ ಕಾರಣ ನೀಡಿ ಹರಾಜು ಪ್ರಕ್ರಿಯೆ ಮುಂದೂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಆಗಮಿಸುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ, ಅವರು ಆಗಮಿಸದೇ ಕಚೇರಿಯ ಸೂಪರ್‌ವೈಸರ್ ಅರ್ಪಿತಾ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕಳಿಸಲಾಯಿತು. ಆದರೆ, ಅವರು ಯಾವುದೇ ನಿರ್ಣಯ ತಿಳಿಸಲಿಲ್ಲ.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಎಂ.ಆರ್. ಆನಂದ್, ಪ್ರಧಾನ ಕಾರ್ಯದರ್ಶಿ ಸಿ.ಎಚ್. ಸುನಿಲ್ ಕುಮಾರ್, ಶ್ರೀನಿವಾಸ್, ಮಾರುತಿ ಹಾಗೂ ಅರ್ಜಿದಾರರು ಭಾಗವಹಿಸಿದ್ದರು.- - - -5ಎಚ್‍ಆರ್‍ಆರ್01:
ಹರಿಹರದ ಗಾಂಧಿ ಮೈದಾನದ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಹರಾಜು ಮುಂದೂಡಿದ್ದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿದರು.