ಆಲೂಗಡ್ಡೆ ದರ ಕುಸಿತ: ಸಂಕಷ್ಟಕ್ಕೆ ಸಿಲುಕಿದ ರೈತ

| Published : Mar 28 2025, 12:33 AM IST

ಸಾರಾಂಶ

ಒಂದು ತಿಂಗಳ ಹಿಂದೆಯಷ್ಟೇ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲದ ಗುಣಮಟ್ಟದ ಆಲೂಗಡ್ಡೆ ಮೂಟೆ 2100 ರಿಂದ 2500 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಹಿಂದಿನ ವಾರದಲ್ಲಿ ಒಂದು ಚೀಲದ ಆಲೂಗಡ್ಡೆ ಮೂಟೆ 700 ರಿಂದ 800 ರೂ.ವರೆಗೆ ಮಾರಾಟವಾಗುತ್ತಿತ್ತು. ಆದರೆ, ಮಾರುಕಟ್ಟೆಯಲ್ಲಿ 580 ರಿಂದ 650 ರೂ. ವರೆಗೆ ಮಾರಾಟವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲಿ ಆಲೂಗಡ್ಡೆಯೂ ಒಂದು. ವರ್ಷಕ್ಕೆ ಎರಡು ಬಾರಿ ರೈತರು ಆಲೂಗಡ್ಡೆ ಬೆಳೆಯುತ್ತಾರೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಆಲೂಗಡ್ಡೆ ದರ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿರುವುದು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜೊತೆಗೆ ಶೀತಲ ಗೃಹದ ಸಮಸ್ಯೆಯೂ ರೈತರನ್ನು ಕಾಡುತ್ತಿದೆ.ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯದಿಂದ ನವೆಂಬರ್, ಡಿಸೆಂಬರ್‌ನಲ್ಲಿ ಬಿತ್ತನೆ ಮಾಡಿದ ಆಲೂಗಡ್ಡೆ ಬೆಳೆ ಈಗ ಕೊಯ್ಲು ಆರಂಭಗೊಂಡಿದೆ. ಬೆಳೆಗಾರರು ಆಲೂಗಗಡ್ಡೆ ರಾಶಿಯನ್ನು ಮಾರುಕಟ್ಟೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಆಲೂಗಡ್ಡೆ ಅವಕದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಹಾಗೂ ದರ ಕುಸಿತ ರೈತರನ್ನು ಕಂಗೆಡಿಸಿದ. ಐದು ವರ್ಷದಿಂದ ಸಮಸ್ಯೆ

ಕಳೆದ ಐದು ವರ್ಷಗಳಿಂದ ಇದೇ ಸೀಸನ್‌ನಲ್ಲಿ ಬೆಳೆಯುತ್ತಿರುವ ರೈತರಿಗೆ ಆಲೂಗಡ್ಡೆ ದರ ಕೈ ಕೊಡುತ್ತಿದೆ. ಒಂದು ತಿಂಗಳ ಹಿಂದೆಯಷ್ಟೇ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ 50 ಕೆ.ಜಿ. ಚೀಲದ ಗುಣಮಟ್ಟದ ಆಲೂಗಡ್ಡೆ ಮೂಟೆ 2100 ರಿಂದ 2500 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಹಿಂದಿನ ವಾರದಲ್ಲಿ ಒಂದು ಚೀಲದ ಆಲೂಗಡ್ಡೆ ಮೂಟೆ 700 ರಿಂದ 800 ರೂ.ವರೆಗೆ ಮಾರಾಟವಾಗುತ್ತಿತ್ತು. ಆದರೆ, ಮಾರುಕಟ್ಟೆಯಲ್ಲಿ 580 ರಿಂದ 650 ರೂ. ವರೆಗೆ ಮಾರಾಟವಾಗಿದೆ. ಆಲೂಗಡ್ಡೆ ಬೆಲೆ ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತಿರುವುದರಿಂದ ಬೆಳೆಗಾರರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಿಸಿದೆ.

ಆಲೂ ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಇದರಿಂದಾಗಿ ಉತ್ಪಾದನೆಯೂ ಹೆಚ್ಚಾಗಿರುವ ಪರಿಣಾಮ ದರ ಕುಸಿಯುತ್ತಿದೆ. ಸಾಲ ಮಾಡಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಇಳುವರಿ ಮತ್ತು ಉತ್ತಮ ಬೆಲೆ ಬರುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕಳೆದ ನವೆಂಬರ್ ತಿಂಗಳ ಅಂತ್ಯದಲ್ಲಿ ಆಲೂಗಡ್ಡೆ ಬೆಳೆ ಬಿತ್ತನೆ ಮಾಡಿದೆ. ಆ ಸಮಯದಲ್ಲಿ 50 ಕೆಜಿಯ ಒಂದು ಮೂಟೆ ಬಿತ್ತನೆ ದರ 3600 ರೂ ಇತ್ತು. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿರುವುದರಿಂದ ಸಂಕಷ್ಟ ತಂದೊಡ್ಡಿದೆ ಎನ್ನುತ್ತಾರೆ ಅರೂರಿನ ಆಲೂಗಡ್ಡೆ ಬೆಳೆಗಾರ ಗೋಪಾಲಕೃಷ್ಣ.

ಶೀತಲಗೃಹಗಳ ಕೊರತೆ

ಒಂದು ಕಾಲದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.​​ಡಿ.ದೇವೇಗೌಡರು ಚಿಕ್ಕಬಳ್ಳಾಪುರ ಹೊರವಲಯದ ಮಂಚನಬಲೆಯಿಂದ ಬಿತ್ತನೆ ಆಲೂಗಡ್ಡೆ ಖರೀದಿ ಮಾಡಿ ಹಾಸನದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದರು. ಅಂತಹ ಐತಿಹ್ಯವಿರುವ ಜಿಲ್ಲೆಯಲ್ಲಿ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಇದರಿಂದ ಒಂದೆರೆಡು ತಿಂಗಳು ದರ ಬರುವವರೆಗೂ ನಗರ ಹೊರವಲಯದ ಕೋಲ್ಡ್ ಸ್ಟೋರೇಜ್​ನಲ್ಲಿ ಆಲೂಗಡ್ಡೆ ದಾಸ್ತಾನು ಮಾಡಲು ರೈತರು ಮುಗಿಬಿದ್ದಿದ್ದು, ವಾರಗಟ್ಟಲೇ ಬಿರು ಬಿಸಲಿನಲ್ಲೇ ಕಾಯುವಂತಾಗಿದೆ.

ಹತ್ತಾರು ಲಾರಿಗಳ ನಿಲುಗಡೆ

ನಗರ ಹೊರವಲಯದ ಖಾಸಗಿ ನಂದಿ ಕೋಲ್ಡ್ ಸ್ಟೋರೇಜ್ ಕೇಂದ್ರದ ಬಳಿ ಟ್ರ್ಯಾಕ್ಟರ್, ಲಾರಿ ಸೇರಿದಂತೆ ಟೆಂಪೋಗಳಲ್ಲಿ ಮೂಟೆಗಟ್ಟಲೇ ಆಲೂಗಡ್ಡೆಗಳನ್ನ ಹೊತ್ತು ರೈತರು ಬಂದಿದ್ದಾರೆ. ಆದರೆ ಅಲ್ಲಿಯೂ ಸ್ಥಳಾವಕಾಶ ಸಮಸ್ಯೆಯಿಂದ ಆಲೂಗಡ್ಡೆ ದಾಸ್ತಾನು ಮಾಡಲು ಸಾಧ್ಯವಾದೆ ನೂರಾರು ರೈತರು ಆಲೂಗಡ್ಡೆ ತುಂಬಿದ ಲಾರಿ ಮತ್ತಿತರ ವಾಹನಗಳಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇದರಿಂದ ಕೋಲ್ಡ್ ಸ್ಟೋರೇಜ್​ಗೆ ಭಾರೀ ಡಿಮ್ಯಾಂಡ್ ಬಂದಿದೆ.ತಲೆಕೆಡಿಸಿಕೊಳ್ಳದ ಎಪಿಎಂಸಿ

ಈ ಹಿಂದೆ ನಗರದ ಎಪಿಎಂಸಿಯಲ್ಲಿ ಲಕ್ಷಂತರ ರುಗಳನ್ನು ವ್ಯಯಿಸಿ ಸರ್ಕಾರ ಕೋಲ್ಡ್ ಸ್ಟೋರೇಜ್ ನಿರ್ಮಿಸಿದ್ದರು. ಅದು ಬಳಕೆಯಾಗದೇ ಮತ್ತು ನಿರ್ವಹಣೆ ಕೊರತೆಯಿಂದ ಕಳೆದ 15 ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಕೋಲ್ಡ್ ಸ್ಟೋರೇಜ್‍ ಆರಂಭಿಸಬೇಕೆಂಗು ರೈತರು ಒತ್ತಾಯಿಸಿದ್ದಾರೆ.