ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆ, ವಿವಿಧ ರೋಗಗಳಿಂದ ನಶಿಸುತ್ತಿರುವ ಹಿನ್ನೆಲೆಯಲ್ಲಿ, ಆಲೂಗಡ್ಡೆ ಬೆಳೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ರಾಜ್ಯ ಮಟ್ಟದ ಆಲೂಗಡ್ಡೆ ಮೇಳ ಆಯೋಜಿಸಲಾಗುತ್ತಿದೆ ಎಂದು ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ ಪಟೇಲ್ ತಿಳಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ರೈತರು ಮೇಳದಲ್ಲಿ ಭಾಗವಹಿಸಲಿದ್ದು, ಹೆಚ್ಚು ಜನರ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಜ್ಞಾನಿಗಳು, ಅನುಭವೀ ರೈತರು ಹಾಗೂ ತಜ್ಞರಿಂದ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆ, ವಿವಿಧ ರೋಗಗಳಿಂದ ನಶಿಸುತ್ತಿರುವ ಹಿನ್ನೆಲೆಯಲ್ಲಿ, ಆಲೂಗಡ್ಡೆ ಬೆಳೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ರಾಜ್ಯ ಮಟ್ಟದ ಆಲೂಗಡ್ಡೆ ಮೇಳ ಆಯೋಜಿಸಲಾಗುತ್ತಿದೆ ಎಂದು ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ ಪಟೇಲ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಜ್ಯಮಟ್ಟದ ಆಲೂಗಡ್ಡೆ ಮೇಳದ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿ ನಂತರ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ವಿವಿಧ ಇಲಾಖೆಗಳು, ಸಂಸ್ಥೆಗಳು, ಜಿಲ್ಲೆ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಎಪಿಎಂಸಿ ವರ್ತಕರ ಸಂಘ, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಕೇಂದ್ರ ಶಿಮ್ಲಾ ಇವರ ಸಹಭಾಗಿತ್ವದಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಜ.26 ಮತ್ತು 27ರಂದು ರಾಜ್ಯ ಮಟ್ಟದ ಆಲೂಗೆಡ್ಡೆ ಮೇಳವನ್ನು ಏರ್ಪಡಿಸಲಾಗುತ್ತಿದೆ ಎಂದರು.

ಆಲೂಗಡ್ಡೆ ಬೆಳೆ ಎಂದರೆ ಹಾಸನ ಎನ್ನುವಷ್ಟು ಪ್ರಸಿದ್ಧವಾಗಿತ್ತು. ಕಳೆದ 15 ವರ್ಷಗಳ ಹಿಂದೆ ಜಿಲ್ಲೆಯಲ್ಲಿ 40ರಿಂದ 50 ಸಾವಿರ ಹೆಕ್ಟೇರ್‌ಗಳಲ್ಲಿ ಆಲೂಗಡ್ಡೆ ಬೆಳೆ ಬೆಳೆಯಲಾಗುತ್ತಿತ್ತು. ಅಂಗಮಾರಿ ರೋಗ ಸೇರಿದಂತೆ ವಿವಿಧ ರೋಗಗಳಿಂದ, ಆಲೂಗಡ್ಡೆ ಬೆಳೆಯ ಪ್ರದೇಶ ೪ ರಿಂದ ೫ ಸಾವಿರ ಹೆಕ್ಟೇರ್‌ಗೆ ಇಳಿದಿದೆ ಎಂದು ಹೇಳಿದರು.

ಉತ್ತಮ ಗುಣಮಟ್ಟದ ಬಿತ್ತನೆ ಬೀಜದ ಕೊರತೆ, ಹೆಚ್ಚಿದ ಉತ್ಪಾದನಾ ವೆಚ್ಚ, ಮುಂಗಾರು ಹಂಗಾಮಿನಲ್ಲಿ ಕೊಳೆರೋಗ ಮತ್ತು ಅಂಗಮಾರಿ ರೋಗದ ಹಾವಳಿ ಕಾರಣ ರೈತರು ವರ್ಷದಿಂದ ವರ್ಷಕ್ಕೆ ಆಲೂಗಡ್ಡೆ ಬಿತ್ತನೆ ಕೈಬಿಡುತ್ತಿರುವ ಸ್ಥಿತಿ ಉಂಟಾಗಿದೆ. ಮೇಳದಲ್ಲಿ ಆಲೂಗಡ್ಡೆ ಬೆಳೆಯ ಹೊಸ ತಳಿಗಳ ಪರಿಚಯ, ಸುಧಾರಿತ ಸಸಿ ಸಂಸ್ಕರಣೆ ಔಷಧಿ ಬಳಕೆ ವಿಧಾನ, ಯಾಂತ್ರೀಕರಣದ ಬಳಕೆ, ಬೀಜ ಉತ್ಪಾದನೆ ಕುರಿತ ಮಾಹಿತಿ ನೀಡಲಾಗುವುದು. ಆಲೂಗಡ್ಡೆ ಬೀಜ ಉತ್ಪಾದಿಸುವ ರೈತರು, ಸಂಸ್ಥೆಗಳು, ಸಂಶೋಧನಾ ಕೇಂದ್ರಗಳ ತಜ್ಞರು, ಔಷಧಿ ಹಾಗೂ ಬೀಜ ಕಂಪನಿಗಳು ಭಾಗವಹಿಸಲಿದ್ದು, ಆಲೂಗಡ್ಡೆ ಸಂಸ್ಕರಣ ಕೈಗಾರಿಕೆಗಳು ಮತ್ತು ರೈತರ ನಡುವೆ ಸಂಪರ್ಕ ಬೆಳೆಸುವ ಉದ್ದೇಶವಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ರೈತರು ಮೇಳದಲ್ಲಿ ಭಾಗವಹಿಸಲಿದ್ದು, ಹೆಚ್ಚು ಜನರ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಜ್ಞಾನಿಗಳು, ಅನುಭವೀ ರೈತರು ಹಾಗೂ ತಜ್ಞರಿಂದ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು, ಬಿತ್ತನೆ ವಿಧಾನ, ಬೀಜೋಪಚಾರ, ರೋಗ ನಿಯಂತ್ರಣ ಸೇರಿದಂತೆ ಆಲೂಗಡ್ಡೆ ಬೆಳೆಯ ಸಂಪೂರ್ಣ ಮಾಹಿತಿಯನ್ನು ರೈತರಿಗೆ ನೀಡಲಾಗುವುದು ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ಜಿಲ್ಲೆಯ ಆಲೂಗಡ್ಡೆ ಉತ್ಪಾದನೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿತ್ತು. ಆದರೆ ವಿವಿಧ ರೋಗಗಳಿಂದ ರೈತರು ಆಲೂಗಡ್ಡೆ ಬಿತ್ತನೆ ಕಡಿಮೆ ಮಾಡಿ ಮೆಕ್ಕೆಜೋಳದ ಕಡೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು. ಮೆಕ್ಕೆಜೋಳಕ್ಕೂ ರೋಗ ಬಾಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಮತ್ತೆ ಆಲೂಗಡ್ಡೆ ಬಿತ್ತನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಆಲೂಗಡ್ಡೆ ಬೆಳೆಗೆ ರೈತರಿಗೆ ಅರಿವು, ತಾಂತ್ರಿಕ ಜ್ಞಾನ, ಬೀಜೋತ್ಪಾದನೆ ಪ್ರೋತ್ಸಾಹ ಹಾಗೂ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ವಿಜ್ಞಾನಿಗಳು, ತಂತ್ರಜ್ಞರು, ಅಧಿಕಾರಿಗಳು ಹಾಗೂ ಪ್ರಗತಿಪರ ರೈತರೊಂದಿಗೆ ಸಂವಾದ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಮತ್ತೆ ಆಲೂಗಡ್ಡೆ ಬಿತ್ತನೆ ಚಟುವಟಿಕೆ ಚುರುಕುಗೊಳ್ಳಲಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಯೋಗೇಶ್ ಅವರು ರಾಜ್ಯಮಟ್ಟದ ಆಲೂಗೆಡ್ಡೆ ಮೇಳದ ವಿವರವನ್ನು ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ. ಆರ್‌. ಪೂರ್ಣಿಮಾ, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.