ಗೌರಿಬಿದನೂರು ನಗರ ರಸ್ತೆಯಲ್ಲಿ ಗುಂಡಿಗಳ ದರ್ಬಾರ್‌

| Published : Oct 21 2025, 01:00 AM IST

ಗೌರಿಬಿದನೂರು ನಗರ ರಸ್ತೆಯಲ್ಲಿ ಗುಂಡಿಗಳ ದರ್ಬಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಗೌರಿಬಿದನೂರು ನಗರದಲ್ಲಿ ಟೆಂಡರ್‌ ಶ್ಯೂರ್‌, ರಸ್ತೆ ವಿಸ್ತರಣೆ, ಫುಟ್‌ಪಾತ್‌ ಅಭಿವೃದ್ಧಿ, ನೆಲದಡಿ ವಿದ್ಯುತ್‌ ಕೇಬಲ್‌ ಅಳವಡಿಕೆ, ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆಯುತ್ತಾರೆ. ಕೆಲಸ ಮುಗಿದ ನಂತರ ಮರು ಡಾಂಬರೀಕರಣ ಮಾಡದೇ ವರ್ಷಾನುಗಟ್ಟಲೆ ಹಾಗೆಯೇ ಬಿಡಲಾಗುತ್ತಿದೆ. ಹಾಗಾಗಿ ರಸ್ತೆಗಳ ಸ್ಥಿತಿ ಅಧ್ವಾನಗೊಂಡಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

‘ಯಾರೇ ಅಧಿಕಾರಕ್ಕೆ ಬಂದರೂ ಅಷ್ಟೆ. ಇಲ್ಲಿಯ ರಸ್ತೆಗಳು ಮಾತ್ರ ದುರಸ್ತಿ ಆಗುತ್ತಿಲ್ಲ. ರಸ್ತೆಯಲ್ಲಿ ಎಷ್ಟು ಗುಂಡಿಗಳಿವೆ ಎಂಬುದನ್ನು ಎಣಿಸಲೂ ಸಾಧ್ಯವಿಲ್ಲ. ಅಷ್ಟೊಂದು ಅಧ್ವಾನಗೊಂಡಿವೆ. ಪ್ರಮುಖ ರಸ್ತೆಗಳಲ್ಲೇ ದೊಡ್ಡ-ದೊಡ್ಡ ಗುಂಡಿಗಳ ದರ್ಶನವಾಗುತ್ತದೆ.ನಗರಸಭೆ ಮುಂಭಾಗ ಹಾಡುಗಾಗುವು ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳಿವೆ. ಈ ರಸ್ತೆಯಲ್ಲಿ ಕಾರ್ಯ ನಿರ್ವಹಣಾಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರತಿದಿನ ಸಂಚರಿಸುತ್ತಾರೆ. ಆದರೆ ರಸ್ತೆ ದುರಸ್ತಿ ಮಾಡಿಸಬೇಕೆಂಬ ಕರ್ತವ್ಯ ಪ್ರಜ್ಞೆಯೇ ಅ‍ವರಲ್ಲಿ ಇಲ್ಲದಂತಾಗಿದೆ. ಮೌನಕ್ಕೆ ಶರಣಾದ ನಗರಸಭೆ

ನಗರದಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿನ ಹೊಂಡಗಳು ಜನರ ಪಾಲಿಗೆ ಮೃತ್ಯು ಗುಂಡಿಗಳಾಗಿ ಪರಿಣಮಿಸುತ್ತಿವೆ. ಇದರಿಂದ ನಗರಸಭೆ, ರಾಜ್ಯ ಸರ್ಕಾರ ಮುಕ್ತಿ ನೀಡುವುದು ಯಾವಾಗ ಎಂದು ವಾಹನಸವಾರರು ಶಾಪ ಹಾಕುತ್ತಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಹಲವು ದ್ವಿಚಕ್ರ ವಾಹನಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದರೂ ನಗರಸಭೆ ಮಾತ್ರ ಮೌನಕ್ಕೆ ಶರಣಾಗಿದೆ. ನಗರ ಪ್ರದೇಶಗಳಲ್ಲಿ ಟೆಂಡರ್‌ ಶ್ಯೂರ್‌, ರಸ್ತೆ ವಿಸ್ತರಣೆ, ಫುಟ್‌ಪಾತ್‌ ಅಭಿವೃದ್ಧಿ, ನೆಲದಡಿ ವಿದ್ಯುತ್‌ ಕೇಬಲ್‌ ಅಳವಡಿಕೆ, ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಅಗೆಯುತ್ತಾರೆ. ಕೆಲಸ ಮುಗಿದ ನಂತರ ಮರು ಡಾಂಬರೀಕರಣ ಮಾಡದೇ ವರ್ಷಾನುಗಟ್ಟಲೆ ಹಾಗೆಯೇ ಬಿಡಲಾಗುತ್ತಿದೆ. ಹಾಗಾಗಿ ರಸ್ತೆಗಳ ಸ್ಥಿತಿ ಅಧ್ವಾನಗೊಂಡಿದೆ. ವಾಹನ ಸವಾರರಿಗೆ ಕಂಟಕ

ರಸ್ತೆ ಗುಂಡಿಗಳು ಬೈಕ್‌ ಸವಾರರಿಗೆ ಮೃತ್ಯು ಗುಂಡಿಗಳಾಗಿ ಪರಿಣಮಿಸಿವೆ. ಅನಿರೀಕ್ಷಿತವಾಗಿ ಎದುರಾಗುವ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸ್ಕಿಡ್‌ ಆಗಿ ಅಥವಾ ಹಿಂಬದಿಯಿಂದ ಬರುವ ವಾಹನಗಳು ಡಿಕ್ಕಿಯಾಗಿ ಸಾವುಗಳು ಸಂಭವಿಸ ಬಹುದು. ಗುಂಡಿಮಯ ರಸ್ತೆಗಳಿಂದ ಟ್ರಾಫಿಕ್‌ ಜಾಮ್‌ ಕಾರಣವಾಗುತ್ತಿದೆ. ವಾಹನಗಳ ಟೈರ್‌ ಬಹುಬೇಗನೆ ಹಾಳಾಗುತ್ತಿವೆ. ಬಿಡಿ ಭಾಗಗಳಿಗೂ ಧಕ್ಕೆಯಾಗುತ್ತಿದೆ ಎಂದು ಪತ್ರಿಕಾ ವಿತರಕ ರವಿಕುಮಾರ್ ಹೇಳಿದ್ದಾರೆ. ಮಳೆಯಿಂದಾಗಿ ನಗರದ ಮಧ್ಯ ಭಾಗದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗ, ಮಹಾತ್ಮಾ ಗಾಂಧಿ ವೃತ ಮತ್ತು ಮಧುಗಿರಿ ರಸ್ತೆಯಲ್ಲಿ ಬೃಹತ್ತಾಕಾರದ ಗುಂಡಿಗಳು ಏರ್ಪಟ್ಟಿದ್ದು, ಭಗೀರಥ ವೃತ, ಸೇರಿದಂತೆ ಬಹುತೇಕ ಕಡೆ ರಸ್ತೆಗಳು ಹಾಳಾಗಿವೆ. ನಗರದ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಇದರಿಂದಾಗಿ ರಸ್ತೆಯಲ್ಲೇ ನೀರು ಸಂಗ್ರಹವಾಗಿ ವಾಹನಗಳು ಓಡಾಡಲು ಕಷ್ಟವಾಗುತ್ತಿದೆ. ಅಪಘಾತಗಳು ಕೂಡ ಸಂಭವಿಸುತ್ತಿವೆ. ಇನ್ನು ಕೆಲವು ಕಡೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳ ವ್ಯವಸ್ಥೆ ಸರಿಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.