ಬ್ಲಿಂಕಿಟ್, ಜೆಪ್ಟೋ ಆ್ಯಪ್‌ಗಳಲ್ಲಿ ಆರ್ಡರ್ ಮಾಡಿದ ಕೆಲ ಹೊತ್ತಿನಲ್ಲೇ ವಸ್ತುಗಳನ್ನು ಮನೆಗೆ ತಲುಪಿಸುವಂತೆ, ದೂರು ನೀಡಿದ ಕೂಡಲೇ ಬಂದು ರಸ್ತೆ ಗುಂಡಿ ಮುಚ್ಚುವಂತಹ ವ್ಯವಸ್ಥೆಯನ್ನು ಭವಿಷ್ಯದಲ್ಲಿ ಅಳವಡಿಸಿಕೊಳ್ಳುವ ಕಡೆ ಗಮನ ಕೇಂದ್ರೀಕರಿಸುತ್ತೇವೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.

-30 ವರ್ಷದಿಂದ ಪೈಪ್‌ಲೈನ್ ಬದಲಿಸಿಲ್ಲ । ಆದರಿಂದ ನೀರು ಉಕ್ಕಿ ಗುಂಡಿ ಬೀಳ್ತಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ಲಿಂಕಿಟ್, ಜೆಪ್ಟೋ ಆ್ಯಪ್‌ಗಳಲ್ಲಿ ಆರ್ಡರ್ ಮಾಡಿದ ಕೆಲ ಹೊತ್ತಿನಲ್ಲೇ ವಸ್ತುಗಳನ್ನು ಮನೆಗೆ ತಲುಪಿಸುವಂತೆ, ದೂರು ನೀಡಿದ ಕೂಡಲೇ ಬಂದು ರಸ್ತೆ ಗುಂಡಿ ಮುಚ್ಚುವಂತಹ ವ್ಯವಸ್ಥೆಯನ್ನು ಭವಿಷ್ಯದಲ್ಲಿ ಅಳವಡಿಸಿಕೊಳ್ಳುವ ಕಡೆ ಗಮನ ಕೇಂದ್ರೀಕರಿಸುತ್ತೇವೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.

ಜಿಬಿಎ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಅವರು, ಜಿಬಿಎನಲ್ಲಿ ಕೋಟ್ಯಂತರ ರು. ಹಣವಿದ್ದರೂ ಒಂದು ಗುಂಡಿ ಮುಚ್ಚಲು ಏಕೆ ಅಷ್ಟೊಂದು ಸಮಯ ತೆಗೆದುಕೊಳ್ಳಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಳೆಗಾಲದಲ್ಲೇ ನಮಗೆ ಗುಂಡಿ ಸಮಸ್ಯೆ ಹೆಚ್ಚು ಕಾಣಬರುತ್ತವೆ. ಆದರೆ, ಮಳೆಗಾಲದಲ್ಲೇ ಗುಂಡಿ ಸಮಸ್ಯೆ ಹೆಚ್ಚಾಗಲು ಕಾರಣ ರಸ್ತೆಗಳ ಗುಣಮಟ್ಟ. ನಮ್ಮ ರಸ್ತೆ ಗುಣಮಟ್ಟ ಸಾಕಷ್ಟು ಸುಧಾರಣೆಯಾಗಬೇಕು ಎನ್ನುವುದರ ಬಗ್ಗೆ ನನ್ನ ಸಹಮತವಿದೆ. ಆದರೆ, ಮಳೆಗಾಲದಲ್ಲಿ ಗುಂಡಿ ಮುಚ್ಚಲಾಗದು. ವೆಟ್ ಮಿಕ್ಸ್ ಮಾತ್ರ ಹಾಕಬಹುದು ಎಂದರು.

ನಮ್ಮಲ್ಲಿ ರಸ್ತೆಯ ಅಡಿಯಲ್ಲೇ ಡ್ರೈನೇಜ್ ಮತ್ತು ನೀರಿನ ಪೈಪ್‌ಲೈನ್‌ಗಳನ್ನು ಅಳವಡಿಸಲಾಗುತ್ತಿದೆ. 20-30 ವರ್ಷಗಳಷ್ಟು ಹಳೇ ಪೈಪ್‌ಲೈನ್‌ ಆಗಾಗ ಬದಲಾವಣೆ ಮಾಡಬೇಕಾಗುತ್ತದೆ, ಹಾಗೆ ಮಾಡದ ಕಾರಣ ಸಹಜವಾಗಿಯೇ ಇಂತಹ ಪೈಪ್‌ಲೈನ್‌ಗಳಲ್ಲಿ ಸೋರಿಕೆಯಾಗಿ ಹಲವೆಡೆ ಗುಂಡಿ ಬೀಳುತ್ತಿವೆ ಎಂದು ಆಯುಕ್ತರು ಹೇಳಿದ್ದಾರೆ.

ನಗರ ಬೆಳೆಯುತ್ತಿರುವುದರಿಂದ ನಿರಂತರ ಕಾಮಗಾರಿಗಳಿಂದ ರಸ್ತೆಗೆ ಹಾನಿಯಾಗುತ್ತಿದೆ. ಮೂಲಸೌಕರ್ಯದ ಮೇಲೆ ಒತ್ತಡ ಬೀಳುತ್ತಿದೆ. ಪೈಪ್‌ಲೈನ್ ಸೇರಿದಂತೆ ಪ್ರತಿಯೊಂದು ಸೌಕರ್ಯಗಳ ಸಾಮರ್ಥ್ಯವನ್ನು ನಾವು ಹೆಚ್ಚಳ ಮಾಡಬೇಕು ಎಂದು ಆಯುಕ್ತ ಮಹೇಶ್ವರ ರಾವ್ ತಿಳಿಸಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಸಮಯ ಬೇಕು:

ಹಳೇ ಕಟ್ಟಡವನ್ನು ಕೆಡವಿ 4 ಅಂತಸ್ತಿನ ಕಟ್ಟಡವನ್ನು ಕಟ್ಟುತ್ತಾರೆ. ಆಗ, ಅದಕ್ಕೆ ತಕ್ಕಂತೆ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಬೇಕಾಗುತ್ತದೆ. ಮೆಟ್ರೋ, ರಸ್ತೆ ವಿಸ್ತರಣೆ, ವಿದ್ಯುತ್ ವೈರ್ ಅಳವಡಿಕೆ, ನೀರಿನ ಪೈಪ್, ಕೇಬಲ್, ನೀರಿನ ಕಾಲುವೆ, ಚರಂಡಿ ಹೀಗೆ ಎಲ್ಲ ಮೂಲಸೌಕರ್ಯಗಳಿಗಾಗಿ ಬೇಡಿಕೆ ಹೆಚ್ಚಾದಾಗ ಸಮಸ್ಯೆಗಳು ಉದ್ಭವವಾಗುತ್ತವೆ ಎಂದು ಮಹೇಶ್ವರ ರಾವ್ ಹೇಳಿದ್ದಾರೆ.