ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಶನಿವಾರ ರಾತ್ರಿ ಸುರಿದ ಒಂದೇ ಮಳೆಗೆ ನಗರದ ಹಲವೆಡೆ ರಸ್ತೆಗಳು ಗುಂಡಿಬಿದ್ದಿವೆ. ಗುಂಡಿಗಳಿಗೆ ಹಾಕಿದ ತೇಪೆಗಳು ಹರಿದು ಹೋಗಿವೆ. ತೇಪೆ ಹಾಕಿದ ರಸ್ತೆಗಳೆಲ್ಲವೂ ಮತ್ತೆ ಹಿಂದಿನ ಸ್ಥಿತಿಯನ್ನೇ ತಲುಪಿ ಅವಾಂತರ ಸೃಷ್ಟಿಸಿವೆ.ನಗರದ ಹೊಳಲು ವೃತ್ತ, ರೈಲ್ವೆ ಕೆಳಸೇತುವೆ, ಕೊಪ್ಪ ಕಡೆಗೆ ತೆರಳುವ ನಿಲ್ದಾಣ, ಕುವೆಂಪು ನಗರ, ಚಾಮುಂಡೇಶ್ವರಿ ನಗರ, ಜಿಲ್ಲಾಸ್ಪತ್ರೆ ಹಿಂಭಾಗದ ರಸ್ತೆ, ಸೇರಿದಂತೆ ಹಲವೆಡೆ ರಸ್ತೆಗಳು ಕಿತ್ತುಬಂದಿವೆ. ಒಂದು ಮಳೆಯನ್ನು ತಡೆದುಕೊಳ್ಳಲಾಗದ ರೀತಿಯಲ್ಲಿ ತೇಪೆ ಕಾರ್ಯ ಮುಗಿಸಿದ್ದು, ಇದರಿಂದ ಎಷ್ಟರ ಮಟ್ಟಿಗೆ ಗುಣಮಟ್ಟದ ಕಾಮಗಾರಿ ನಡೆದಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ.
ಮಳೆಗೆ ಮತ್ತೆ ಬಾಯ್ಬಿಟ್ಟ ಗುಂಡಿಗಳು:ಹೊಳಲು ವೃತ್ತದ ರಸ್ತೆ ಮೊದಲೇ ಗುಂಡಿಗಳಿಂದ ತುಂಬಿ ಮಳೆ ಬಿದ್ದಾಗಲೆಲ್ಲಾ ನೀರು ತುಂಬಿಕೊಂಡು ರಸ್ತೆ ಯಾವುದು, ಗುಂಡಿ ಯಾವುದು ಎನ್ನುವುದರ ಹುಡುಕಾಡಬೇಕಿತ್ತು. ರಸ್ತೆಯನ್ನು ಅಭಿವೃದ್ಧಿಪಡಿಸುವ ಆಸಕ್ತಿಯನ್ನು ಯಾರೂ ತೋರಿರಲಿಲ್ಲ. ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ನಗರಕ್ಕೆ ಕುರುಬರ ಸಂಘದ ಹಾಸ್ಟೆಲ್‌ಗೆ ಶಂಕುಸ್ಥಾಪನೆಗೆ ಬಂದಿದ್ದಾಗ ಹುಲಿವಾನ ಕಡೆಗೆ ಊಟಕ್ಕೆ ತೆರಳುವವರಿದ್ದರು. ಅದಕ್ಕಾಗಿ ಆತುರಾತುರವಾಗಿ ರೈಲ್ವೆ ಕೆಳಸೇತುವೆ, ಹೊಳಲು ವೃತ್ತ, ಕೊಪ್ಪ ಕಡೆಗೆ ತೆರಳುವ ನಿಲ್ದಾಣದ ಬಳಿ ಬಿದ್ದಿದ್ದ ಗುಂಡಿಗಳಿಗೆ ಜಲ್ಲಿ, ಟಾರು ತುಂಬಿ ತೇಪೆ ಹಾಕಿ ಮುಗಿಸಿ ಕೈತೊಳೆದುಕೊಂಡಿದ್ದರು.
ಮುಖ್ಯಮಂತ್ರಿಗಳ ಮೆಚ್ಚುಗೆ ಗಿಟ್ಟಿಸಿಕೊಳ್ಳಲು ಹಾಕಿದ್ದ ಡಾಂಬರು ಶನಿವಾರ ಸುರಿದ ಮಳೆಗೆ ಎಲ್ಲವೂ ಕಿತ್ತುಬಂದಿದೆ. ಮತ್ತೆ ಗುಂಡಿಗಳು ಮೇಲೆದ್ದಿವೆ. ನೀರು ತುಂಬಿಕೊಂಡು ಮಿನಿ ಕೆರೆಗಳಂತಾಗಿವೆ. ಈ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು ಅನಿವಾರ್ಯವೂ ಆಗಿದೆ. ಕಳಪೆ ಕಾಮಗಾರಿಯಿಂದ ತೇಪೆ ಕಾರ್ಯಕ್ಕೆ ಖರ್ಚು ಮಾಡಿದ ಹಣವೂ ವ್ಯರ್ಥವಾಗಿದೆ.ಚರಂಡಿಗೆ ಸಂಪರ್ಕ ಕಲ್ಪಿಸಿಲ್ಲ:
ರೈಲ್ವೆ ನಿಲ್ದಾಣದ ಬಳಿ ಮುಚ್ಚಿದ್ದ ಗುಂಡಿಗಳೂ ಮಳೆಯಿಂದಾಗಿ ಮತ್ತೆ ಬಾಯ್ತೆರೆದುಕೊಂಡಿವೆ. ಮಳೆ ನೀರು ಸೇತುವೆ ಕೆಳಭಾಗದಲ್ಲಿ ಸಂಗ್ರಹವಾಗುವುದು ಮಾಮೂಲಾಗಿದೆ. ಸೇತುವೆ ಕೆಳಭಾಗದಲ್ಲಿ ನೀರು ನಿಲ್ಲದಂತೆ ಚರಂಡಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಸೇತುವೆ ಆರಂಭವಾಗಿ ಹಲವಾರು ವರ್ಷಗಳಾದರೂ ನಡೆಯದಿರುವುದು ದುರಂತದ ಸಂಗತಿಯಾಗಿದೆ.ಗುಂಡಿಗಳಲ್ಲಿ ತುಂಬಿಕೊಂಡ ಕಲ್ಮಶ ನೀರು ವಾಹನಗಳು ಸಂಚರಿಸುವ ವೇಳೆ ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳ ಮೇಲೆ ಬೀಳುವುದು ಸರ್ವೇ ಸಾಮಾನ್ಯವಾಗಿದೆ. ಇದೆಲ್ಲವನ್ನೂ ಸಹಿಸಿಕೊಂಡು ಸಂಚರಿಸುವ ಕರ್ಮ ನಗರದ ಜನರದ್ದಾಗಿದೆ. ಇದೇ ಮಾದರಿಯಲ್ಲಿ ಹೊಳಲು ವೃತ್ತದಿಂದ ಮುಂದೆ ಸಾಗಿದಾಗ ಸಿಗುವ ಕೊಪ್ಪ ಮಾರ್ಗದ ಬಸ್ ನಿಲ್ದಾಣದ ಬಳಿಯೂ ಕೂಡ ರಸ್ತೆ ಮಧ್ಯದಲ್ಲೇ ಗುಂಡಿಗಳು ನಿರ್ಮಾಣಗೊಂಡಿವೆ. ಬಾಯ್ತೆರೆದುಕೊಂಡಿದ್ದ ಗುಂಡಿಗಳನ್ನು ಮುಚ್ಚುವ ಕಾರ್ಯ ಒಂದೇ ಸಮಯದಲ್ಲಿ ನಡೆದಿರುವಂತೆ ಮಳೆಯಿಂದಾಗಿ ಎಲ್ಲವೂ ಒಮ್ಮೆಲ್ಲೇ ಮೇಲೆದ್ದು ನಿಂತಿವೆ.
ಹೊಳಲು ವೃತ್ತ ಒಂದೇ ಅಲ್ಲ. ನಗರದ ಹಲವು ಬಡಾವಣೆಗಳಲ್ಲಿ ಇಂತಹ ದೃಶ್ಯಗಳನ್ನು ಸರ್ವೇ ಸಾಮಾನ್ಯವಾಗಿ ಕಾಣಬಹುದು. ಗುಂಡಿಗಳಿಗೆ ತೇಪೆ ಹಾಕಿದ ಕಡೆಗಳೆಲ್ಲಾ ಡಾಂಬರು ಕಿತ್ತು ಬಂದಿದ್ದು, ಹಳೆಯ ಸ್ಥಿತಿಗೆ ಗುಂಡಿ ಬಿದ್ದಿದ್ದ ರಸ್ತೆಗಳು ಮರಳಿರುವುದರಿಂದ ಜನರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.ಗುಂಡಿಗಳನ್ನು ಬಿಟ್ಟು ರಸ್ತೆ ನಿರ್ಮಾಣ:
ನಗರದ ಬನ್ನೂರು ರಸ್ತೆ (ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ)ಯಲ್ಲಿ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಶ್ರೀಚಾಮುಂಡೇಶ್ವರಿ ದೇವಸ್ಥಾನದವರೆಗೆ ರಸ್ತೆಯನ್ನು ಅಗೆದು ಡಾಂಬರು ಹಾಕಿದ್ದರೆ ಠಾಣೆಯಿಂದ ಕೆಳಭಾಗಕ್ಕೆ ಮತ್ತು ಶ್ರೀಚಾಮುಂಡೇಶ್ವರಿ ದೇವಸ್ಥಾನದಿಂದ ಮೇಲ್ಭಾಗಕ್ಕೆ ಹರಿದಿದ್ದ ಡಾಂಬರು ರಸ್ತೆಯ ಮೇಲೆಯೇ ಡಾಂಬರೀಕರಣ ಮಾಡಲಾಗಿದೆ. ಇದೇ ರಸ್ತೆಯಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬಳಿ ಹೊಸ ರಸ್ತೆಯಿಂದ ಒಂದು ಹೆಜ್ಜೆ ದೂರದಲ್ಲೇ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದರೂ ಅದನ್ನೂ ಸೇರಿಸಿಕೊಂಡು ರಸ್ತೆ ನಿರ್ಮಿಸುವ ಆಸಕ್ತಿಯನ್ನು ತೋರ್ಪಡಿಸಿಲ್ಲ. ವೈಜ್ಞಾನಿಕವಾಗಿ ಡಿಪಿಆರ್ ತಯಾರಿಸದೆ ಗುಂಡಿಗಳನ್ನು ಬಿಟ್ಟು ಮುಂದಕ್ಕೆ ರಸ್ತೆ ನಿರ್ಮಿಸಿರುವುದು ಆಧುನಿಕ ರಾಜಕಾರಣಿಗಳ ಅಭಿವೃದ್ಧಿಯ ಆಲೋಚನೆ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿದೆ.ಅಭಿವೃದ್ಧಿಗೆ ಹಣದ ಕೊರತೆಯಿಲ್ಲ ಎಂದು ಬೊಬ್ಬೆ ಹೊಡೆಯುವವರಿಂದ ಗುಣಮಟ್ಟದ ರಸ್ತೆ ನಿರ್ಮಿಸಲಾಗುತ್ತಿಲ್ಲ. ಗುಂಡಿ ಮುಚ್ಚುವ ಕಾಮಗಾರಿಯನ್ನೂ ವೈಜ್ಞಾನಿಕವಾಗಿ ನಡೆಸುತ್ತಿಲ್ಲ. ಸಾರ್ವಜನಿಕರ ಹಣ ಬೇಕಾಬಿಟ್ಟಿಯಾಗಿ ಪೋಲಾಗುತ್ತಿದ್ದರೂ ಕೇಳುವವರೇ ದಿಕ್ಕಿಲ್ಲದಂತಾಗಿದೆ.ಅಭಿವೃದ್ಧಿಯನ್ನೇ ಕಾಣದ ಮಾರುಕಟ್ಟೆ ರಸ್ತೆ:
ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರ ಮಾರುಕಟ್ಟೆ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಪೇಟೆ ಬೀದಿಯಿಂದ ಮಾರುಕಟ್ಟೆಗೆ ಬರುವ ಪ್ರಮುಖ ರಸ್ತೆ ಗುಂಡಿ ಬಿದ್ದು ಹಲವಾರು ವರ್ಷಗಳಾದರೂ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿಲ್ಲ. ರಸ್ತೆ ಪಕ್ಕದಲ್ಲಿರುವ ಅಂಗಡಿ ಮಳಿಗಳಿಗೆ ನಿತ್ಯ ಗುಂಡಿಗಳ ದರ್ಶನ, ವಾಹನ ಸವಾರರಿಗೆ ಸಂಚಾರ ನರಕಯಾತನೆಯಾಗಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗಿದೆ. ಅಂಗಡಿ ಮಾಲೀಕರು, ಸಾರ್ವಜನಿಕರು ರಸ್ತೆ ಅಭಿವೃದ್ಧಿ ಮಾಡುವಂತೆ ಒತ್ತಾಯಿಸುತ್ತಾ ಬಂದಿದ್ದರೂ ಕ್ರಮ ವಹಿಸಿಲ್ಲ.