ಸಾರಾಂಶ
ಸರ್ಕಸ್ ಮಾಡುವ ವಾಹನಗಳು । ಸುಸಜ್ಜಿತ ರಸ್ತೆಗಾಗಿ ಪ್ರಯಾಣಿಕರ ಒತ್ತಾಯ
ಕನ್ನಡಪ್ರಭ ವಾರ್ತೆ ಹನುಮಸಾಗರಗ್ರಾಮವು ಕೊಪ್ಪಳ ಜಿಲ್ಲೆಯಲ್ಲಿ ದೊಡ್ಡ ಗ್ರಾಮವಾಗಿದೆ. ಆದರೆ ಗ್ರಾಮದಿಂದ ಗಜೇಂದ್ರಗಡ ಪಟ್ಟಣ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಶಾಸಕರು ಸೇರಿದಂತೆ ಇತರ ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಗ್ರಾಮದ ಬಸ್ ನಿಲ್ದಾಣದಿಂದ ಒಳ ರಸ್ತೆಯ ಮೂಲಕ ಪ್ರತಿ ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಯಲಬುರ್ಗಾ, ಗದಗ, ಹುಬ್ಬಳ್ಳಿ ಪಟ್ಟಣ ಹಾಗೂ ಬೆನಕನಾಳ, ಯಲಬುಣಚಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಾರ್ಗ ಇದಾಗಿದೆ. ಇದರಲ್ಲಿ ಜನಪ್ರತಿನಿಧಿಗಳು ಸಂಚರಿಸಿದಾಗ ಮಾತ್ರ ವಾಹನ ಸವಾರರ ನರಕಯಾತನೆ ಅವರಿಗೆ ಅನುಭವ ಆಗುತ್ತದೆ.
ಸರ್ಕಸ್ ಕಲ್ಪನೆ:ಗ್ರಾಮಕ್ಕೆ ದೂರದ ಊರಿನಿಂದ ಪ್ರಯಾಣಿಕರು ಆಗಮಿಸುತ್ತಿದ್ದಂತೆ, ವಾಹನಗಳು ಸರ್ಕಸ್ ಮಾಡಲು ಆರಂಭ ಮಾಡುತ್ತವೆ. ರಸ್ತೆಯ ಮೇಲಿನ ಡಾಂಬರ್ ಸಂಪೂರ್ಣ ಕಿತ್ತು ಹೋಗಿದೆ. ಜಲ್ಲಿ ಕಲ್ಲು ಮೇಲೆದಿದ್ದು, ರಸ್ತೆಯ ಮಧ್ಯಭಾಗ ತೆಗ್ಗು ದಿನ್ನೆಗಳಿಂದಾಗಿ ಬಾವಿಯಂತೆ ಕಾಣುತ್ತವೆ. ವಾಹನಗಳು ಸರ್ಕಸ್ ಮಾಡುತ್ತಾ ಗ್ರಾಮವನ್ನು ಪ್ರವೇಶಿಸುತ್ತವೆ. ಕೆಲವೊಂದು ಬಾರಿ ವಾಹನಗಳ ಪಾಟಾ ನೆಲಕ್ಕೆ ತಾಗಿ ಅರ್ಧ ದಾರಿಯಲ್ಲಿ ನಿಂತು ತೊಂದರೆ ಅನುಭವಿಸಿದ ಉದಾಹರಣೆ ಸಾಕಷ್ಟಿವೆ. ಇನ್ನು ರೈತರು ಹೊಲಗಳಿಗೆ, ವೀರಶೈವ ಲಿಂಗಾಯತ ರುದ್ರಭೂಮಿಗೆ ಇದೇ ರಸ್ತೆ ಅವಲಂಬಿತವಾಗಿದೆ. ಈ ರಸ್ತೆಯಲ್ಲಿ ಖಾಸಗಿ ಶಾಲೆಯೊಂದು ಇರುವುದರಿಂದ, ಮಕ್ಕಳು, ರೈತರು, ದ್ವಿಚಕ್ರ ವಾಹನ ಸವಾರರು, ವೃದ್ಧರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಈ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರಸ್ತೆಗೆ ಕೋಳಿ ತ್ಯಾಜ್ಯ:ರಸ್ತೆಯ ಪಕ್ಕದಲ್ಲಿ ಕೋಳಿ ಅಂಗಡಿಕಾರರು ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಇದು ರಸ್ತೆಗೆ ಹರಿದು ಬರುತ್ತಿದೆ. ಗ್ರಾಪಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೂ ಇದೇ ರಸ್ತೆಯಲ್ಲಿ ಹಳ್ಳ ಇದೆ. ಅದರ ಸ್ವಚ್ಛತೆಗೆ ಗ್ರಾಪಂ ಮುಂದಾಗುತ್ತಿಲ್ಲ. ಹಳ್ಳದ ನೀರು ರಸ್ತೆಗೆ ನುಗ್ಗುತ್ತಿದ್ದು, ಸಾರ್ವಜನಿಕರು ಅದೇ ನೀರಿನಲ್ಲಿ ಅಲೆದಾಡುವಂತಾಗಿದೆ.ಕೆಕೆಆರ್‌ಡಿಬಿಯಲ್ಲಿ ರಸ್ತೆಯ ದುರಸ್ತಿಗೆ ಕಾಮಗಾರಿಯ ಕ್ರಿಯಾ ಯೋಜನೆ ಕಳುಹಿಸಲಾಗಿದೆ. ಅನುಮೋದನೆಗೊಂಡು ಬಂದ ನಂತರ ಟೆಂಡರ್ ಪ್ರಕ್ರಿಯೆ ಮೂಲಕ ಕೆಲಸ ಆರಂಭಿಸಲಾಗುತ್ತದೆ ಎನ್ನುತ್ತಾರೆ ಶಾಸಕ ದೊಡ್ಡನಗೌಡ ಪಾಟೀಲ್.