ಕೋಳಿ ಸಾಕಾಣಿಕೆ ಕೈಗಾರಿಕೋದ್ಯಮವಾಗಿ ಬೆಳೆಯುತ್ತಿದ್ದು ಕೋಳಿ ಸಾಕಾಣಿಕೆದಾರರು ದಿನಂಪ್ರತಿ ಕೋಳಿ ಔಷಧಗಳು, ಲಸಿಕೆ ಹಾಗೂ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಮಂಜುನಾಥ್ ಪಾಟೀಲ್ ಹೇಳಿದರು.

ಮಂಗಳೂರು: ಕೋಳಿ ಸಾಕಾಣಿಕೆ ಕೈಗಾರಿಕೋದ್ಯಮವಾಗಿ ಬೆಳೆಯುತ್ತಿದ್ದು ಕೋಳಿ ಸಾಕಾಣಿಕೆದಾರರು ದಿನಂಪ್ರತಿ ಕೋಳಿ ಔಷಧಗಳು, ಲಸಿಕೆ ಹಾಗೂ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಮಂಜುನಾಥ್ ಪಾಟೀಲ್ ಹೇಳಿದರು.ಅವರು ಕೊಯಿಲ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಸುಧಾರಿತ ಕೋಳಿ ಸಾಕಾಣಿಕೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಳಿ ಮೊಟ್ಟೆ ಮತ್ತು ಮಾಂಸದಲ್ಲಿರುವ ಪೌಷ್ಟಿಕಾಂಶಗಳ ವಿವರ ಹಾಗೂ ಕೋಳಿ ಫಾರ್ಮ್‍ನಲ್ಲಿ ನೊಣಗಳ ನಿಯಂತ್ರಣದ ಸಂಶೋಧನೆಯ ಬಗ್ಗೆ ಅವರು ಮಾಹಿತಿ ನೀಡಿದರು.

ಕೊಯಿಲ ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪುನೀತ್, ಗಿರಿರಾಜ ಕೋಳಿ ಮರಿ ಹಾಗೂ ಮೈಸೂರು ನಾಟಿ ಕೋಳಿಗಳ ಲಭ್ಯತೆ ಮತ್ತು ಕೋಳಿಗಳ ಫಾರ್ಮ್‍ನಲ್ಲಿ ಜೈವಿಕ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

ಕೋಳಿ ಫಾರ್ಮ್‍ಗಳಲ್ಲಿ ನೊಣಗಳ ವಿಪರೀತ ಹಾವಳಿ ಇದೆ, ಇದಕ್ಕೆ ಪಶು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಪಶು ವೈದ್ಯಕೀಯ ಇಲಾಖೆಯವರು ನೊಣಗಳ ನಿಯಂತ್ರಣದ ಬಗ್ಗೆ ಸಂಶೋಧನೆ ಕೈಗೊಳ್ಳಬೇಕು ಎಂದು ತುಳುನಾಡು ಕೋಳಿ ಸಾಕಾಣಿಕ ರೈತರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ ಗೌಡ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ದತೆ ಜಾಸ್ತಿ ಆಗಿರುವುದರಿಂದ ಹಾಗೂ ಕೋಳಿ ಫಾರ್ಮ್ ಮಾಡಲು ಸ್ಥಳದ ಕೊರತೆ ಇರುವುದರಿಂದ ನವೀನ ತಂತ್ರಜ್ಞಾನಗಳನ್ನು ರೂಪಿಸಿ ಕೋಳಿ ಸಾಕಾಣಿಕೆದಾರರಿಗೆ ತಲುಪಿಸಲು ಪ್ರಯತ್ನ ಮಾಡಬೇಕೆಂದು ಕಡಬ ಕೋಳಿ ಸಾಕಾಣಿಕ ರೈತ ಸಂಘಟನೆ ಅಧ್ಯಕ್ಷ ಸೂರ್ಯನಾರಾಯಣ ಭಟ್ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಭಾರತ್ ಆಕ್ರೋವೆಟ್ ಇಂಡಸ್ಟ್ರೀಸ್ ವ್ಯವಸ್ಥಾಪಕ ರವಿಪ್ರಸಾದ್ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ಕೋಳಿ ಸಾಕಾಣಿಕೆ ಹಾಗೂ ಅದರ ಅನುಕೂಲತೆಗಳ ಬಗ್ಗೆ ತಿಳಿಸಿದರು.

ಸುಧಾರಿತ ಕೋಳಿ ಸಾಕಾಣಿಕೆ ಬಗೆಗಿನ ಮಾಹಿತಿ ಒಳಗೊಂಡ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಮಹಾವಿದ್ಯಾಲಯದ ಪ್ರಾಧ್ಯಾಪಕ ವೃಂದದವರಾದ ಡಾ.ಸಾಗರ್ ಆರ್.ಎಸ್., ಡಾ.ಹರಿಣಿ ಕೆ.ಆರ್., ಡಾ.ರಶ್ಮಿ ಕೆ.ಎಂ., ಡಾ.ರಜತ್ ಸಗಾರೆ., ಡಾ.ಸಾಗರ್ ಎಂ., ಡಾ.ತೇಜಸ್ವಿನಿ ಎಂ.ಪಿ., ಡಾ.ವಸುಧರ್ ಭಟ್, ಡಾ.ಯಶಸ್ ಆರ್.ಕುಮಾರ್ ತರಬೇತಿಯ ಸುಧಾರಿತ ಹಾಗೂ ವೈಜ್ಞಾನಿಕ ಕೋಳಿ ಸಾಕಾಣಿಕೆಯ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಕೆ.ಎಂ ಸ್ವಾಗತಿಸಿದರು. ಡಾ.ವಸುಧರ್ ಭಟ್ ವಂದಿಸಿದರು. ಡಾ.ತೇಜಸ್ವಿನಿ ಎಂ.ಪಿ. ನಿರೂಪಿಸಿದರು.