ವಿವಿ ಸಾಗರಕ್ಕೆ ಕಾಲ ಮಿತಿಯಿಲ್ಲದೆ ನೀರು ಹರಿಸಿ

| Published : Feb 25 2025, 12:47 AM IST

ಸಾರಾಂಶ

ಹಿರಿಯೂರಿನ ರೈತರು ಸೋಮವಾರ ಸದ್ಧರ್ಮ ಪೀಠದಲ್ಲಿ ತರಳಬಾಳು ಶ್ರೀಗಳ ಭೇಟಿಯಾಗಿ ವಿವಿ ಸಾಗರಕ್ಕೆ ಕಾಲ ಮಿತಿ ಯಿಲ್ಲದೆ ನೀರು ಹರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಲು ವಿನಂತಿಸಿದರು.

ತರಳಬಾಳು ಶ್ರೀಗಳಲ್ಲಿ ವಿವಿ ಸಾಗರ ಹಿತ ರಕ್ಷಣಾ ಸಮಿತಿ ಮನವಿಕನ್ನಡಪ್ರಭ ವಾರ್ತೆ ಸಿರಿಗೆರೆ

30 ಟಿಎಂಸಿ ನೀರಿನ ಸಾಮರ್ಥ್ಯ ಇರುವ ವಾಣಿವಿಲಾಸ ಅಣೆಕಟ್ಟೆಗೆ ಭದ್ರಾ ಜಲಾಶಯದಿಂದ ಹಿಂದಿನ ಸರ್ಕಾರ ನಿಗದಿಪಡಿಸಿದ್ದ 5 ಟಿಎಂಸಿ ನೀರಿನ ಪ್ರಮಾಣವನ್ನು 2 ಟಿಎಂಸಿಗೆ ಕಡಿತಗೊಳಿಸಿರುವುದರಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಅದನ್ನು ಪರಿಹರಿಸುವ ಜೊತೆಗೆ, ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಕಾಲಮಿತಿ ಇಲ್ಲದೆ ವಾಣಿವಿಲಾಸಕ್ಕೆ ಹರಿಸುವಂತೆ ಸರ್ಕಾರದ ಗಮನ ಸೆಳೆಯಬೇಕೆಂದು ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿಯ ಮುಖಂಡರು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳಲ್ಲಿ ಮನವಿ ಮಾಡಿದರು.

ಇಲ್ಲಿನ ಸದ್ಧರ್ಮ ನ್ಯಾಯಪೀಠದಲ್ಲಿ ತಮ್ಮ ಅಹವಾಲು ಸಲ್ಲಿಸಿ ಮಾತನಾಡಿದ ಮುಖಂಡರು, ಮೈಸೂರು ಮಹಾರಾಜರಿಂದ ನಿರ್ಮಾಣಗೊಂಡಿರುವ ವಿವಿ ಸಾಗರ ಜಲಪಾತ್ರೆಯನ್ನು ದೂರದೃಷ್ಠಿಯಿಂದ ತುಂಬಿಸಿದರೆ ಚಿತ್ರದುರ್ಗ ಮತ್ತು ತುಮಕೂರು ಭಾಗದ ರೈತರೂ ನೆಮ್ಮದಿಯಿಂದ ಇರುತ್ತಾರೆ. ಅಂತಹ ದಿನಗಳನ್ನು ಎದುರು ನೋಡುತ್ತ ಕಳೆದ 5 ದಶಕಗಳ ಕಾಲದಿಂದ ಹೋರಾಟ ನಡೆಸುತ್ತಲೇ ಬಂದಿದ್ದೇವೆ ಎಂದರು.

ವಿವಿ ಸಾಗರ ಜಲಾನಯನ ವ್ಯಾಪ್ತಿಗೆ 12,500 ಹೆಕ್ಟೇರ್‌ ಭೂಮಿ ಒಳಪಟ್ಟಿದೆ. ಅಣೆಕಟ್ಟು ನಿರ್ಮಾಣದ ನಂತರ ಜನರು ನೀರಿನ ಲಭ್ಯತೆಯ ಆಶಾಭಾವನೆಯಿಂದ ಅಚ್ಚುಕಟ್ಟು ಪ್ರದೇಶವನ್ನು ಸುಮಾರು 40 ಸಾವಿರ ಎಕರೆಗೆ ವಿಸ್ತರಿಸಿಕೊಂಡಿದ್ದಾರೆ. ಇದರಲ್ಲಿ ತುಮಕೂರು ಭಾಗದ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕುಗಳೂ ಸೇರಿವೆ. ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ ಮತ್ತು ನಾಯಕನಹಟ್ಟಿಯ ಡಿಆರ್‌ಡಿಒಗೆ ಕುಡಿಯುವ ನೀರು, ಅಚ್ಚುಕಟ್ಟು ಪ್ರದೇಶದ ರೈತರಿಗೆ ಅಗತ್ಯವಾದ ಬೇಡಿಕೆಯನ್ನು ಪರಿಗಣಿಸಿದರೆ ವಾರ್ಷಿಕ 8.5 ರಿಂದ 9 ಟಿಎಂಸಿ ನೀರನ್ನು ಜಲಾಶಯಕ್ಕೆ ತುಂಬಿಸುವ ಅಗತ್ಯವಿದೆ. ಆದರೆ ಸರ್ಕಾರ ನಿಗದಿಪಡಿಸಿರುವ 2 ಟಿಎಂಸಿ ನೀರು ಭೂಮಿಯಲ್ಲಿ ಹಿಂಗಲು, ಆವಿಯಾಗಲು ಮತ್ತು ಕುಡಿಯುವ ನೀರಿಗೆ ಬಳಕೆಯಾಗುತ್ತಿದೆ. ಅಣೆಕಟ್ಟೆ ಮೇಲ್ಬಾಗದಲ್ಲಿ ಅನೇಕ ಬ್ಯಾರೇಜ್‌, ಚೆಕ್‌ ಡ್ಯಾಂ ನಿರ್ಮಾಣ ಆಗಿರುವುದರಿಂದ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಭದ್ರಾ ಜಲಾಶಯದಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ಕಾಲದ ಪರಿಮಿತಿ ಇಲ್ಲದೆ ವಿವಿ ಸಾಗರಕ್ಕೆ ತುಂಬಿಸುವ ಕೆಲಸವನ್ನು ಆದ್ಯತೆಯಿಂದ ಮಾಡಬೇಕಾಗಿದೆ. ಎತ್ತಿನಹೊಳೆ ಯೋಜನೆಯಿಂದಲೂ ವಿವಿ ಸಾಗರಕ್ಕೆ ನೀರು ತರಬಹುದಾಗಿದೆ ಎಂಬುದನ್ನು ಶ್ರೀಗಳಿಗೆ ಮುಖಂಡರು ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಆರ್.ತಿಮ್ಮಯ್ಯ, ಎಸ್.ಬಿ.ಶಿವಕುಮಾರ್, ಎಂ.ಟಿ ಸುರೇಶ, ಆರ್.ಕೆ.ಗೌಡ, ನಾರಾಯಣ ಆಚಾರ್, ಗೀತಮ್ಮ, ಕಲಾವತಿ, ಎಚ್.ವಿ.ಗಿರೀಶ್, ಎಂ.ಜಿ ರಂಗಧಾಮಯ್ಯ ಹಾಗೂ ಚಿಕ್ಕಬ್ಬಿಗೆರೆ ನಾಗರಾಜ್ ಇದ್ದರು.